ಚತುರ ಸಾರಿಗೆ ವ್ಯವಸ್ಥೆಯ ಗುತ್ತಿಗೆ ಮುಂದುವರಿಸಲು ಚಿಂತನೆ

Update: 2019-09-22 17:37 GMT

ಬೆಂಗಳೂರು, ಸೆ.22: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ನೆನೆಗುದಿಗೆ ಬಿದ್ದಿರುವ ಚತುರ ಸಾರಿಗೆ ವ್ಯವಸ್ಥೆ (ಐಟಿಎಸ್)ಯ ಗುತ್ತಿಗೆಯನ್ನು ಆರ್ಥಿಕವಾಗಿ ದಿವಾಳಿಯಾಗಿದ್ದ ಟ್ರೈಮ್ಯಾಕ್ಸ್ ಕಂಪನಿಯೊಂದಿಗೇ ಮುಂದುವರಿಸಲು ಚಿಂತನೆ ನಡೆಸಲಾಗುತ್ತಿದೆ.

ಬಸ್‌ಗಳ ಟ್ರಾಕಿಂಗ್ ಯೂನಿಟ್ (ವಿಟಿಯು) ಹಾಗೂ ನಿತ್ಯ ಬಳಕೆಯಾಗುವ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಷಿನ್ (ಇಟಿಎಂ) ಗಳ ನಿರ್ವಹಣೆ ಕೆಲದಿನಗಳಿಂದ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದ ಇಡೀ ವ್ಯವಸ್ಥೆ ನೆನೆಗುದಿಗೆ ಬಿದ್ದಿದೆ. ಈಗ ಅದಕ್ಕೆ ಮರುಕಾಯಕಲ್ಪ ನೀಡಲಾಗುತ್ತಿದ್ದು, ಇದರ ಮೊದಲ ಹಂತವಾಗಿ ಟ್ರೈಮ್ಯಾಕ್ಸ್ ಕಂಪನಿಯೊಂದಿಗೆ ಬಿಎಂಟಿಸಿ ಮಾತುಕತೆ ನಡೆಸಿದೆ.

ಹೊಸದಾಗಿ ಟೆಂಡರ್ ಕರೆದು, ಐಟಿಎಸ್ ವ್ಯವಸ್ಥೆಯನ್ನು ಪುನರ್‌ಸ್ಥಾಪನೆ ಮಾಡಲು ಕನಿಷ್ಠ 200 ಕೋಟಿ ರೂ. ಖರ್ಚಾಗುತ್ತದೆ. ಜತೆಗೆ ಈ ಪ್ರಕ್ರಿಯೆಗೆ ಸಾಕಷ್ಟು ಸಮಯವೂ ವ್ಯಯವಾಗಲಿದೆ. ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಿಎಂಟಿಸಿಗೆ ಇದು ಮತ್ತಷ್ಟು ಹೊರೆಯಾಗಲಿದೆ.

ಈ ಹಿನ್ನೆಲೆಯಲ್ಲಿ ಟ್ರೈಮ್ಯಾಕ್ಸ್‌ನ ಮನವೊಲಿಸಿ ವ್ಯವಸ್ಥೆಯನ್ನು ದುರಸ್ತಿಗೊಳಿಸುವುದು ಸೂಕ್ತ ಎಂದು ಹಿರಿಯ ಅಧಿಕಾರಿಗಳ ಅಭಿಪ್ರಾಯವಾಗಿದೆ ಎನ್ನಲಾಗಿದೆ. ಅದಕ್ಕಾಗಿ ಇರುವ ಕಂಪೆನಿ ಜತೆ ಮಾತುಕತೆ ನಡೆಸಿದ್ದು, ಪೂರಕ ಸ್ಪಂದನೆ ದೊರಕಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಪ್ರಸ್ತುತ ಇರುವ ಟೆಂಡರ್ ಮುಂದುವರಿಯಲಿದೆ.

ಮರುಟೆಂಡರ್ ಚಿಂತನೆ ಸದ್ಯಕ್ಕಿಲ್ಲ: ಎಂಡಿ ಈ ಹಿಂದಿನಂತೆ ಐಟಿಎಸ್ ನಿರ್ವಹಣೆ ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಹೋಗುವಂತೆ ಈಗಿರುವ ಕಂಪೆನಿಗೇ ಸೂಚಿಸಲಾಗಿದೆ. ಕಂಪೆನಿಯವರಿಂದಲೂ ಪೂರಕ ಸ್ಪಂದನೆ ದೊರಕಿದೆ. ಹಾಗಾಗಿ, ಕೆಲವೇ ದಿನಗಳಲ್ಲಿ ಸಮಸ್ಯೆ ಪರಿಹಾರವಾಗುವ ವಿಶ್ವಾಸ ಇದೆ. ಸದ್ಯಕ್ಕೆ ಮರುಟೆಂಡರ್ ಚಿಂತನೆ ಇಲ್ಲ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಹೇಳಿದ್ದಾರೆ.

ಪೇಪರ್ ಟಿಕೆಟ್‌ಗೂ ಚೌಕಾಸಿ!: ಇಟಿಎಂಗಳು ಕೈಕೊಟ್ಟಿದ್ದರಿಂದ ಮುದ್ರಿತ ಪೇಪರ್ ಟಿಕೆಟ್‌ಗಳನ್ನು ವಿತರಿಸಲಾಗುತ್ತಿದೆ. ಆದರೆ, ಈ ಟಿಕೆಟ್‌ಗಳು ಕೂಡ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಟಿಕೆಟ್‌ಗಳಿಗೆ ಏಕಾಏಕಿ ತುಂಬಾ ಬೇಡಿಕೆ ಬಂದಿರುವುದರಿಂದ ಬಿಎಂಟಿಸಿ ಮತ್ತು ಕೆಎರ್ಸ್ಸಾಟಿಸಿಯ ಮುದ್ರಣಾಲಯದಲ್ಲಿ ಮಾತ್ರವಲ್ಲ, ಸರಕಾರಿ ಮುದ್ರಣಾಲಯದಲ್ಲೂ ಟಿಕೆಟ್‌ಗಳು ಮುದ್ರಿತವಾಗುತ್ತಿವೆ. ಆದರೂ ಸಾಕಾಗುತ್ತಿಲ್ಲ ಎಂದು ಆರೋಪ ಕೇಳಿ ಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News