ನನಗೆ ಪ್ರಶಸ್ತಿ ಬೇಡ, ದಯವಿಟ್ಟು ನನ್ನ ಕೋಚನ್ನು ಗೌರವಿಸಿ: ಅಮಿತ್ ಪಾಂಘಾಲ್ ಮನವಿ

Update: 2019-09-22 18:36 GMT

ಹೊಸದಿಲ್ಲಿ, ಸೆ.22: ‘‘ನಾನು ವೈಯಕ್ತಿಕ ಗೌರವದ ಬಗ್ಗೆ ಚಿಂತಿಸುವುದಿಲ್ಲ. ಆದರೆ, ನನ್ನ ಕೋಚ್ ಅನಿಲ್ ಧಂಕರ್‌ಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇನೆ ’’ ಎಂದು 2012ರಲ್ಲಿ ಡೋಪಿಂಗ್ ನೀತಿ ಸಂಹಿತೆ ಉಲ್ಲಂಘಿಸಿರುವುದಕ್ಕೆ ಅರ್ಜುನ ಪ್ರಶಸ್ತಿ ವಂಚಿತರಾಗಿದ್ದ ಭಾರತದ ಬಾಕ್ಸರ್ ಅಮಿತ್ ಪಾಂಘಾಲ್(52ಕೆಜಿ)ಹೇಳಿದ್ದಾರೆ.

ರಶ್ಯದ ಎಕಟೆರಿನ್‌ಬರ್ಗ್‌ನಲ್ಲಿ ಶನಿವಾರ ಕೊನೆಗೊಂಡ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಮಿತ್ ಬೆಳ್ಳಿ ಪದಕ ಜಯಿಸಿದ ಭಾರತದ ಮೊದಲ ಪುರುಷ ಬಾಕ್ಸರ್ ಎಂಬ ಕೀರ್ತಿಗೆ ಭಾಜನರಾಗಿದ್ದರು. ಅಮಿತ್ ಈ ಹಿಂದೆ ಏಶ್ಯನ್ ಗೇಮ್ಸ್ ಹಾಗೂ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲೂ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದರು.

2012ರಲ್ಲಿ ಡೋಪಿಂಗ್ ಟೆಸ್ಟ್ ನಲ್ಲಿ ವಿಫಲರಾಗಿದ್ದ ಅಮಿತ್ ಒಂದು ವರ್ಷ ನಿಷೇಧ ಎದುರಿಸಿದ್ದರು. ಹೀಗಾಗಿ ಅವರನ್ನು ಅರ್ಜುನ ಪ್ರಶಸ್ತಿಗೆ ಪರಿಗಣಿಸಿರಲಿಲ್ಲ. ಆ ವರ್ಷ ಚಿಕನ್‌ಪಾಕ್ಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಅವರಿಗೆ ಡೋಪಿಂಗ್ ನಿಯಮನ್ನು ಪಾಲಿಸಲು ಸಾಧ್ಯವಾಗಿರಲಿಲ್ಲ.

‘‘ನಾನು ನಿಜವಾಗಿಯೂ ಪ್ರಶಸ್ತಿಗೆ ಹೆಚ್ಚು ಆದ್ಯತೆ ನೀಡುವುದಿಲ್ಲ. ನನ್ನ ಆರಂಭಿಕ ತರಬೇತುದಾರರಾಗಿದ್ದ ಅನಿಲ್ ಧಂಕರ್‌ಗೆ ದ್ರೋಣಾಚಾರ್ಯ ಪ್ರಶಸ್ತಿ ಸಿಗಬೇಕೆಂದು ಹಾರೈಸುವೆ. ಅವರು ನನ್ನನ್ನು ಬಾಕ್ಸಿಂಗ್‌ಗೆ ಸಿದ್ಧಗೊಳಿಸಿದ್ದರು. ಅವರ ಪ್ರೋತ್ಸಾಹ, ಮಾರ್ಗದರ್ಶನ ಇರದೇ ಇರುತ್ತಿದ್ದರೆ ನಾನು ಈ ಮಟ್ಟಕ್ಕೆ ತಲುಪುತ್ತಿರಲಿಲ್ಲ’’ ಎಂದು ಅಮಿತ್ ಹೇಳಿದ್ದಾರೆ.

‘‘ನಾನು 2008ರಲ್ಲಿ ಬಾಕ್ಸಿಂಗ್ ಆರಂಭಿಸಿದ್ದೆ. ಅಂದಿನಿಂದ ಅವರು ನನ್ನ ಜೊತೆ ಬಂಡೆಗಲ್ಲಿನಂತೆ ನಿಂತಿದ್ದಾರೆ. ನನಗೆ ಯಾವುದೇ ವಿಚಾರದಲ್ಲಿ ಮಾರ್ಗದರ್ಶನದ ಅಗತ್ಯವಿದ್ದರೆ ಈಗಲೂ ನಾನು ಅವರ ಬಳಿ ಹೋಗುತ್ತೇನೆ. ಅವರಿಗೆ ಪ್ರಶಸ್ತಿ ಲಭಿಸಿದರೆ ಅದು ನನಗೆ ಲಭಿಸಿದ್ದಷ್ಟೇ ಖುಷಿಯಾಗುತ್ತದೆ’’ ಎಂದು ಅಮಿತ್ ಹೇಳಿದರು.

  45ರ ಹರೆಯದ ಧಂಕರ್ ಈ ತನಕ ಯಾವುದೇ ದೇಶೀಯ ತಂಡಗಳಲ್ಲಿ ಕೆಲಸ ಮಾಡಿಲ್ಲ. ಆದರೆ ಅವರು ರಾಷ್ಟ್ರಮಟ್ಟದಲ್ಲಿ ಪದಕ ಜಯಿಸಿದ್ದರು.

ಭಾರತೀಯ ಸೇನೆಯಲ್ಲಿ ನೈಬ್ ಸುಬೇದಾರ್ ಆಗಿ ಕರ್ತವ್ಯ ನಿಭಾಯಿಸುತ್ತಿರುವ 23ರ ಹರೆಯದ ಹರ್ಯಾಣದ ಬಾಕ್ಸರ್ ಅಮಿತ್ ಕಳೆದ ಎರಡು ವರ್ಷಗಳಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ತನ್ನ ತೂಕ ವಿಭಾಗವನ್ನು 49ಕೆಜಿಯಿಂದ 52 ಕೆಜಿಗೆ ಬದಲಾಯಿಸಿದರೂ ಅವರ ಪ್ರದರ್ಶನದ ಮೇಲೆ ಇದು ಯಾವುದೇ ಪರಿಣಾಮಬೀರಿಲ್ಲ.

ಅಮಿತ್ ಫೆಬ್ರವರಿಯಲ್ಲಿ ಚೀನಾದಲ್ಲಿ ನಡೆಯಲಿರುವ ಏಶ್ಯನ್ ಒಲಿಂಪಿಕ್ಸ್ ಅರ್ಹತಾ ಟೂರ್ನಮೆಂಟ್‌ನಲ್ಲಿ ಸ್ಪರ್ಧಿಸಲು ಸಿದ್ಧ್ದತೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News