ಶಾಕೀಬ್ ಸಾಹಸ ; ಬಾಂಗ್ಲಾಕ್ಕೆ ಜಯ

Update: 2019-09-22 18:56 GMT

ಚಿತ್ತಗಾಂಗ್, ಸೆ.22: ನಾಯಕ ಶಾಕೀಬ್ ಅಲ್ ಹಸನ್ ದಾಖಲಿಸಿದ ಅರ್ಧಶತಕದ ನೆರವಿನಲ್ಲಿ ಬಾಂಗ್ಲಾದೇಶ ತಂಡ ಇಲ್ಲಿ ನಡೆದ ಮೂರು ರಾಷ್ಟ್ರಗಳ ತ್ರಿಕೋನ ಟ್ವೆಂಟಿ-20 ಸರಣಿಯ ಅಂತಿಮ ಲೀಗ್ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 4 ವಿಕೆಟ್‌ಗಳ ಜಯ ಗಳಿಸಿದೆ.

ಚಿತ್ತಗಾಂಗ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬಾಂಗ್ಲಾ ಗೆಲುವಿನೊಂದಿಗೆ ಸತತ ನಾಲ್ಕು ಪಂದ್ಯಗಳಲ್ಲಿ ಸೋಲಿನ ಸರಮಾಲೆಯನ್ನು ಕಳಚಿಕೊಂಡಿದೆ.

ಗೆಲುವಿಗೆ 20 ಓವರ್‌ಗಳಲ್ಲಿ 139 ರನ್ ಗಳಿಸಬೇಕಿದ್ದ ಬಾಂಗ್ಲಾ ತಂಡ ಇನ್ನೂ 6 ಎಸೆತಗಳು ಬಾಕಿ ಇರುವಾಗಲೇ 6 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು.

 ಶಾಕೀಬ್ ಅಲ್ ಹಸನ್ 45 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ಔಟಾಗದೆ 70 ರನ್ ಸೇರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

 ಬಾಂಗ್ಲಾ ತಂಡದ ಆರಂಭ ಚೆನ್ನಾಗಿರಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಲಿಟನ್ ದಾಸ್(4) ಮತ್ತು ನಜ್ಮುಲ್ ಹುಸೈನ್(5) ಬೇಗನೆ ನಿರ್ಗಮಿಸಿದರು. ಮೂರನೇ ವಿಕೆಟ್‌ಗೆ ಶಾಕೀಬ್ ಮತ್ತು ಮುಶ್ಫಿಕುರ್ರಹೀಂ ಜೊತೆಯಾಟದಲ್ಲಿ 58 ರನ್ ಸೇರಿಸಿದರು.

ಮುಶ್ಫೀಕುರ್ರಹೀಂ 25 ಎಸೆತಗಳಲ್ಲಿ 26 ರನ್ ಗಳಿಸಿದರು. ಅವರು 14 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದರು. ಆದರೆ 11ನೇ ಓವರ್‌ನಲ್ಲಿ ಮಧ್ಯಮ ವೇಗಿ ಕರೀಂ ಜನಾತ್ ಅವರು ಮುಶ್ಫಿಕುರ್ರಹೀಂಗೆ ಪೆವಿಲಿಯನ್ ಹಾದಿ ತೋರಿಸಿದರು.

  

  ಚೊಚ್ಚಲ ಪಂದ್ಯವನ್ನಾಡಿದ ನಾವೀನ್ ಉಲ್ ಹಕ್ (20ಕ್ಕೆ 2) ಅವರು ಮಹ್ಮುದುಲ್ಲಾ(6) ಮತ್ತು ಶಬ್ಬೀರ್ ರಹ್ಮಾನ್(1) ವಿಕೆಟ್ ಉಡಾಯಿಸಿದರು. ರಶೀದ್ ಖಾನ್(27ಕ್ಕೆ 2) ಅವರು ಬಾಂಗ್ಲಾದೇಶ ತಂಡಕ್ಕೆ ಆಘಾತ ನೀಡಿದ್ದರು. 106ಕ್ಕೆ 6 ವಿಕೆಟ್ ಕಳೆದುಕೊಂಡ ಬಾಂಗ್ಲಾ ತಂಡವನ್ನು ಶಾಕೀಬ್ ಆಧರಿಸಿದರು. 18ನೇ ಓವರ್‌ನ ಅಂತಿಮ ಎರಡು ಎಸೆತಗಳಲ್ಲಿ ಬೌಂಡರಿ ಮತ್ತು ಸಿಕ್ಸರ್ ಬಾರಿಸಿ ಶಾಕೀಬ್ ತಮ್ಮ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಆಲ್‌ರೌಂಡ್ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಫ್ಘಾನಿಸ್ತಾನ 138/7: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಅಫ್ಘಾನಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 138 ರನ್ ಗಳಿಸಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಹಝ್ರತುಲ್ಲಾ ಝಝಾಯಿ ಮತ್ತು ರಹ್ಮತುಲ್ಲಾ ಗುರ್ಬಝ್ ಮೊದಲ ವಿಕೆಟ್‌ಗೆ 9.3 ಓವರ್‌ಗಳಲ್ಲಿ 75 ರನ್ ಸೇರಿಸಿದರು. ಝಝಾಯಿ 3 ರನ್‌ನಿಂದ ಅರ್ಧಶತಕ ವಂಚಿತಗೊಂಡರು. ಅವರು 47 ರನ್ (35ಎ, 6ಬೌ, 2ಸಿ) ಗಳಿಸಿದರು. ಗುರ್ಬಝ್ (29), ನಝೀಬುಲ್ಲಾ ಝದ್ರಾನ್(14), ಶಫೀಕುಲ್ಲಾ ಶಫೀಕ್(ಔಟಾಗದೆ 23) ಮತ್ತು ರಶೀದ್ ಖಾನ್(ಔಟಾಗದೆ 11) ಎರಡಂಕೆಯ ಕೊಡುಗೆ ನೀಡಿದರು.

ತ್ರಿಕೋನ ಸರಣಿಯ ಫೈನಲ್ ಪಂದ್ಯ ಢಾಕಾದಲ್ಲಿ ಮಂಗಳವಾರ ನಡೆಯಲಿದೆ. ಬಾಂಗ್ಲಾ ಮತ್ತು ಅಫ್ಘಾನಿಸ್ತಾನ ತಂಡ ಫೈನಲ್‌ಗೆ ಪ್ರವೇಶ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News