ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ತಯಾರಿಗೆ ಹಗಲಿರುಳು ತರಬೇತಿ: ದ್ಯುತಿ ಚಂದ್

Update: 2019-09-22 18:58 GMT

  ಹೊಸದಿಲ್ಲಿ, ಸೆ.22: ಕತರ್‌ನ ದೋಹಾದಲ್ಲಿ ಸೆ.27ರಿಂದ ಆರಂಭವಾಗಲಿರುವ ಐಎಎಎಫ್ ವಲ್ಡ್‌ರ್  ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿರುವ 30 ಸದಸ್ಯರ ಭಾರತೀಯ ತಂಡದ ಭಾಗವಾಗಿರುವ ದ್ಯುತಿ ಚಂದ್ ಟೂರ್ನಿಗೆ ಸಜ್ಜಾಗಲು ಹಗಲಿರುಳು ತರಬೇತಿ ನಿರತರಾಗಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್ ನಡೆಯುವಾಗ ದೋಹಾದಲ್ಲಿ ಸುಮಾರು 35 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದೆ. ಈ ಬಗ್ಗೆ ದ್ಯುತಿ ಚಿಂತಿತವಾಗಿಲ್ಲ.

23ರ ಹರೆಯದ ಓಟಗಾರ್ತಿ ದ್ಯುತಿ ಅಂತರ್‌ರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಶನ್ಸ್ ಅಸೋಸಿಯೇಶನ್(ಐಎಎಎಫ್)ಆಹ್ವಾನದ ಮೇರೆಗೆ ವಿಶ್ವ ಚಾಂಪಿಯನ್‌ಶಿಪ್‌ಗೆ ಪ್ರವೇಶ ಪಡೆದಿದ್ದಾರೆ. ಕೇವಲ 100 ಮೀ.ಓಟದಲ್ಲಿ ಮಾತ್ರ ಸ್ಪರ್ಧಿಸುತ್ತಿದ್ದಾರೆ. ಇದೀಗ ಅವರು ತವರು ರಾಜ್ಯ ಒಡಿಶಾದಲ್ಲಿ ತರಬೇತಿ ನಿರತರಾಗಿದ್ದು, ದೋಹಾದ ವಾತಾವರಣಕ್ಕೆ ಹೊಂದಿಕೊಳ್ಳುವ ಉದ್ದೇಶದಿಂದ ರಾತ್ರಿ ವೇಳೆ ತರಬೇತಿ ನಡೆಸುತ್ತಿದ್ದಾರೆ.

‘‘ದೋಹಾದ ಹವಾಮಾನ ಭುವನೇಶ್ವರದ ರೀತಿಯಲ್ಲಿಯೇ ಇದೆ. ನನ್ನ ಸ್ಪರ್ಧೆ ರಾತ್ರಿ ವೇಳೆ ನಡೆಯುತ್ತದೆ. ನನ್ನ ದೇಹವನ್ನು ಆ ಸ್ಪರ್ಧೆಗೆ ಸಜ್ಜುಗೊಳಿಸುತ್ತಿದ್ದೇನೆ. ರಾತ್ರಿ ಸುಮಾರು 9 ಗಂಟೆಯಲ್ಲೂ ನಾನು ತರಬೇತಿ ನಡೆಸುತ್ತಿದ್ದೇನೆ’’ ಎಂದು ದೋಹಾದಲ್ಲಿ ಸ್ಪರ್ಧಿಸಿ ಅನುಭವವಿರುವ ಚಂದ್ ಹೇಳಿದ್ದಾರೆ.

ಈವರ್ಷದ ಎಪ್ರಿಲ್‌ನಲ್ಲಿ ದೋಹಾದಲ್ಲಿ ನಡೆದಿದ್ದ ಏಶ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದ ಚಂದ್ 100 ಮೀ. ಓಟದಲ್ಲಿ ಕಂಚು ಜಯಿಸಿದ್ದರು.‘‘ದೋಹಾದ ವಾತಾವರಣ ನನಗೆ ಚೆನ್ನಾಗಿ ಒಪ್ಪುತ್ತದೆ. ನಾನು ಅಲ್ಲಿಗೆ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ತೆರಳಿದ್ದೆ. ಈ ಬಾರಿಯೂ ವಾತಾವರಣದಲ್ಲಿ ದೊಡ್ಡ ವ್ಯತ್ಯಾಸವಾಗುವ ನಿರೀಕ್ಷೆಯಿಲ್ಲ’’ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News