​ಗೃಹ- ರಕ್ಷಣಾ ಸಚಿವಾಲಯಗಳ ಮುಸುಕಿನ ಗುದ್ದಾಟ: ಕಾರಣ ಗೊತ್ತೇ?

Update: 2019-09-23 04:49 GMT

ಹೊಸದಿಲ್ಲಿ, ಸೆ.23: ಅಸ್ಸಾಂ ರೈಫಲ್ಸ್‌ನ ಕಾರ್ಯಾಚರಣೆ ನಿಯಂತ್ರಣವನ್ನು ಕಳೆದುಕೊಳ್ಳುವ ಅಥವಾ ಇಂಡೋ ಟಿಬೇಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಜತೆ ಅದನ್ನು ವಿಲೀನಗೊಳಿಸುವ ನಡೆಗೆ ಸೇನೆ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.

ಇದರಿಂದಾಗಿ ದೀರ್ಘ ಕಾಲದಿಂದಲೂ ಇರುವ ಅವಳಿ ನಿಯಂತ್ರಣದ ಸಮಸ್ಯೆಯನ್ನು ಬಗೆಹರಿಸುವ ಹೊಣೆ ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆ ಕುರಿತ ಸಂಪುಟ ಸಮಿತಿಯ ಹೆಗಲೇರಿದೆ. ಎರಡು ಸಚಿವಾಲಯಗಳ ನಡುವಿನ ಹಗ್ಗಜಗ್ಗಾಟದಿಂದ ಬಳಲಿರುವ ಅಸ್ಸಾಂ ರೈಫಲ್ಸ್ ಬಗ್ಗೆ ಈ ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಆಡಳಿತಾತ್ಮಕವಾಗಿ ಅಸ್ಸಾಂ ರೈಫಲ್ಸ್ ಗೃಹ ಸಚಿವಾಲಯದ ನಿಯಂತ್ರಣದಲ್ಲಿದೆ. ಆದರೆ ಮ್ಯಾನ್ಮಾರ್ ಜತೆಗಿನ 1,643 ಕಿಲೋಮೀಟರ್ ಉದ್ದದ ಗಡಿಯನ್ನು ಕಾಯುವ ದೇಶದ ಏಕೈಕ "ನೈಜ ಅರೆಮಿಲಿಟರಿ ಪಡೆ"ಯ ಕಾರ್ಯಾಚರಣೆಯ ನಿಯಂತ್ರಣ ರಕ್ಷಣಾ ಸಚಿವಾಲಯ- ಸೇನೆಯ ನಿಯಂತ್ರಣದಲ್ಲಿದೆ.

ಆದರೆ ಅಸ್ಸಾಂ ರೈಫಲ್ಸ್‌ನ ಸಂಪೂರ್ಣ ನಿಯಂತ್ರಣ ಸಾಧಿಸಲು ಇದೀಗ ಗೃಹ ಸಚಿವಾಲಯ ಮುಂದಾಗಿರುವುದಕ್ಕೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಅಸ್ಸಾಂ ರೈಫಲ್ಸ್ 46 ಬೆಟಾಲಿಯನ್‌ಗಳಲ್ಲಿ 65 ಸಾವಿರ ಸಿಬ್ಬಂದಿಯನ್ನು ಹೊಂದಿದ್ದು, ಶೇಕಡ 80ರಷ್ಟು ಅಧಿಕಾರಿಗಳು ಸೇನೆಯ ಮೂಲದವರು.

"ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಸಲ್ಲಿಸಲು ಸೇನೆ ವಿವರವಾದ ಪ್ರಸ್ತುತಿ ಸಿದ್ಧಪಡಿಸಿದೆ. ಸೇನೆಯ ಕಾರ್ಯಾಚರಣೆ ವಿಧಾನ ಮತ್ತು ಸಂಸ್ಕೃತಿಯನ್ನು ರೂಢಿಸಿಕೊಂಡಿರುವ ಅಸ್ಸಾಂ ರೈಫಲ್ಸ್‌ನ ಆಡಳಿತಾತ್ಮಕ ಹಾಗೂ ಕಾರ್ಯಾಚರಣೆ ನಿಯಂತ್ರಣವನ್ನು ರಕ್ಷಣಾ ಸಚಿವಾಲಯವೇ ಹೊಂದಬೇಕು ಎನ್ನುವುದು ನಮ್ಮ ಅಪೇಕ್ಷೆ" ಎಂದು ಸೇನೆಯ ಮೂಲಗಳು ಹೇಳಿವೆ.

ಉತ್ತಮ ಗಡಿ ನಿಯಂತ್ರಣ ವ್ಯವಸ್ಥೆಗಾಗಿ ಐಟಿಬಿಪಿ ಹಾಗೂ ಗಡಿಯಲ್ಲಿ ನಿಯೋಜಿಸಿರುವ ಬಿಎಸ್‌ಎಫ್ ವಿಲೀನಕ್ಕೆ ಕೂಡಾ ಸೇನೆ ಶಿಫಾರಸು ಮಾಡಿದೆ. ಆದರೆ ಅಸ್ಸಾಂ ರೈಫಲ್ ಅಲ್ಲದೇ ಐಟಿಬಿಪಿ, ಬಿಎಸ್‌ಎಫ್, ಸಿಆರ್‌ಪಿಎಫ್, ಸಿಐಎಸ್‌ಎಫ್, ಎನ್‌ಎಸ್‌ಜಿ ಮತ್ತು ಎಸ್‌ಎಸ್‌ಬಿ ನಿಯಂತ್ರಣವನ್ನು ಹೊಂದಿರುವ ಗೃಹ ಸಚಿವಾಲಯಕ್ಕೆ ಈ ಶಿಫಾರಸು ಪಥ್ಯವಾಗಿಲ್ಲ. 2009ರಿಂದಲೂ ಈ ಸಂಬಂಧ 6ರಿಂದ ಏಳು ಕರಡು ಸಿಸಿಎಸ್ ಟಿಪ್ಪಣಿ ಸಿದ್ಧಪಡಿಸಲಾಗಿದೆ. ಆದರೆ ಇದುವರೆಗೂ ಅಂತಿಮ ನಿರ್ಧಾರಕ್ಕೆ ಬರುವುದು ಸಾಧ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News