ತಲೆನೋವುಗಳಲ್ಲಿರುವ ವಿಧಗಳೆಷ್ಟು ಗೊತ್ತೇ?

Update: 2019-09-23 14:36 GMT

ಮೈಗ್ರೇನ್

 ಜೀವವನ್ನೇ ಕಿತ್ತು ತಿನ್ನುವ ತೀವ್ರವಾದ ತಲೆಶೂಲೆಯುಂಟು ಮಾಡುವ ವೆುಗ್ರೇನ್‌ನ್ನು ಎಲ್ಲ ತಲೆನೋವುಗಳ ಪಿತಾಮಹ ಎಂದು ಕರೆಯಬಹುದು. ಅತ್ಯಂತ ನೋವು ನೀಡುವ ಇದು ವ್ಯಕ್ತಿಯನ್ನು ಇನ್ನಿಲ್ಲದಷ್ಟು ಕಾಡಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಶಬ್ದ,ಬೆಳಕು ಮತ್ತು ಸುಗಂಧಕ್ಕೆ ಸಂವೇದನಾಶೀಲತೆಯಿಂದ ಮೈಗ್ರೇನ್ ಆರಂಭವಾಗುತ್ತದೆ. ಕೆಲವರಲ್ಲಿ ವಾಂತಿ ಮತ್ತು ವಾಕರಿಕೆಗೂ ಮೈಗ್ರೇನ್ ಕಾರಣವಾಗುತ್ತದೆ.

ಕೆಫೀನ್ ತಲೆನೋವು

ನಿಗದಿತ ಸಮಯಕ್ಕೆ ಚಹಾ ಅಥವಾ ಕಾಫಿ ಕುಡಿಯುವುದನ್ನು ರೂಢಿಸಿಕೊಂಡಿರುವವರಿಗೆ ಈ ತಲೆನೋವು ಹೊಸದಲ್ಲ. ಆ ನಿಗದಿತ ಸಮಯಕ್ಕೆ ಒಂದು ಕಪ್ ಚಹಾ ಅಥವಾ ಕಾಫಿ ಹೊಟ್ಟೆಗೆ ಸೇರದಿದ್ದರೆ ತಲೆನೋವು ಆರಂಭವಾಗುತ್ತದೆ ಮತ್ತು ಇದನ್ನು ಕೆಫೀನ್ ತಲೆನೋವು ಎಂದು ಕರೆಯಲಾಗುತ್ತದೆ. ಚಹಾ ಅಥವಾ ಕಾಫಿಯ ಚಟ ಇದಕ್ಕೆ ಮೂಲಕಾರಣವಾಗಿದೆ. ಅದು ಸಾಮಾನ್ಯವಾಗಿ ಕಣ್ಣುಗಳ ಸುತ್ತಲಿನಿಂದ,ಹಣೆಯಿಂದ ಆರಂಭವಾಗುತ್ತದೆ. ಚಟದ ಹೊರತಾಗಿ ಅತಿಯಾದ ಪ್ರಮಾಣದಲ್ಲಿ ಕೆಫೀನ್ ಸೇವನೆ,ಚಹಾ ಅಥವಾ ಕಾಫಿಯ ವರ್ಜನೆ,ಅಲರ್ಜಿ ಅಥವಾ ಸಂವೇದನಾಶೀಲತೆ ಇಂತಹ ತಲೆನೋವಿಗೆ ಇತರ ಸಂಭಾವ್ಯ ಕಾರಣಗಳಾಗಿವೆ.

ಬೆಳಗಿನ ತಲೆನೋವು

  ಬೆಳಿಗ್ಗೆ ಎದ್ದ ತಕ್ಷಣ ತಲೆನೋವನ್ನು ಅನುಭವಿಸುವವರ ದಿನಚರಿ ಗೋಳಿನಿಂದಲೇ ಆರಂಭಗೊಳ್ಳುತ್ತದೆ. ನಿದ್ರೆ ಅಪೂರ್ಣವಾಗಿದ್ದರೆ ಬೆಳಿಗ್ಗೆ ತಲೆನೋವು ಕಾಣಿಸಿಕೊಳ್ಳುವುದು ಸಾಮಾನ್ಯ,ಆದರೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದರೆ ಅದು ಮೈಗ್ರೇನ್,ಖಿನ್ನತೆ ಅಥವಾ ಮಿದುಳಿನ ಟ್ಯೂಮರ್‌ನ ಸಂಕೇತವಾಗಿರಹುದು. ನಿರ್ಜಲೀಕರಣ ಅಥವಾ ನಿದ್ರೆಯ ಕೊರತೆ ಇತರ ಕಾರಣಗಳಾಗಬಲ್ಲವು.

ದೀರ್ಘಕಾಲಿಕ ತಲೆನೋವು

ತಲೆನೋವು ಪ್ರತಿದಿನವೂ ಕಾಣಿಸಿಕೊಳ್ಳುತ್ತಿದ್ದರೆ ನೀವು ದೀರ್ಘಕಾಲಿಕ ತಲೆನೋವಿಗೆ ಬಲಿಪಶುವಾಗಿದ್ದೀರಿ ಎಂದರ್ಥ. ಈ ವಿಧದ ತಲೆನೋವು ಕನಿಷ್ಠ ಎರಡು ವಾರಗಳಿಂದ ಮೂರು ತಿಂಗಳವರೆಗೂ ಇರುತ್ತದೆ.

ಕ್ಲಸ್ಟರ್ ತಲೆನೋವು

 ಕ್ಲಸ್ಟರ್ ತಲೆನೋವು ಆವರ್ತಕ ಮಾದರಿಯಲ್ಲಿ ದಾಳಿಯಿಡುತ್ತದೆ. ವ್ಯಕ್ತಿಗೆ ತಲೆಯ ಒಂದು ಪಾರ್ಶ್ವದಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ. ಈ ತಲೆನೋವು ತಿಂಗಳುಗಟ್ಟಲೆ ಪೀಡಿಸುವ ಸಾಧ್ಯತೆಯಿರುತ್ತದೆ. ಕೆಲವೊಮ್ಮೆ ಮೂಗು ಕಟ್ಟಿರುವಿಕೆ,ಕಣ್ಣುಗಳಲ್ಲಿ ನೀರು ಬರುವುದು ಮತ್ತು ಕಣ್ಣುಗಳ ಸುತ್ತ ಊತವೂ ಕ್ಲಸ್ಟರ್ ತಲೆನೋವಿಗೆ ಜೊತೆ ನೀಡುತ್ತವೆ.

ಸೈನಸ್ ತಲೆನೋವು

ಸೈನುಸಿಟಿಸ್ ಅಥವಾ ಸೈನಸ್ ಮಿದುಳಿನಲ್ಲಿಯ ಖಾಲಿ ಸ್ಥಳಗಳ ಉರಿಯೂತವಾಗಿದೆ. ಸೈನಸ್ ತಲೆನೋವು ಮುಖದ ಮೇಲ್ಭಾಗದಲ್ಲಿ ಅತೀವ ನೋವನ್ನುಂಟು ಮಾಡುತ್ತದೆ. ಕೆಲವು ದಂತ ಸಮಸ್ಯೆಗಳೂ ಇಂತಹ ತಲೆನೋವಿಗೆ ಕಾರಣವಾಗುತ್ತವೆ.

ತುರ್ತು ತಲೆನೋವು

ದಿಢೀರ್ ಆಗಿ ತೀವ್ರ ತಲೆನೋವು ಕಾಣಿಸಿಕೊಂಡರೆ ಅದನ್ನು ಎಮರ್ಜನ್ಸಿ ಅಥವಾ ತುರ್ತು ತಲೆನೋವು ಎನ್ನಲಾಗುತ್ತದೆ. ಇದಕ್ಕೆ ಸೂಕ್ತ ವೈದ್ಯಕೀಯ ಗಮನ ಅಗತ್ಯವಾಗುತ್ತದೆ. ಈ ಸ್ಥಿತಿಯನ್ನು ಬ್ರೇನ್ ಎನಿಯೂರಿಸಂ ಎಂದು ಕರೆಯಲಾಗುತ್ತದೆ ಮತ್ತು ಮಿದುಳಿನಲ್ಲಿಯ ರಕ್ತನಾಳಗಳು ಒಡೆದಾಗ ಈ ಸ್ಥಿತಿಯುಂಟಾಗುತ್ತದೆ. ಇದು ಪಾರ್ಶ್ವವಾಯು ಅಥವಾ ಮಿದುಳಿನ ಟ್ಯೂಮರ್‌ನ್ನು ಸಂಕೇತಿಸಬಹುದು ಮತ್ತು ಜ್ಞಾಪಕ ಶಕ್ತಿ ನಷ್ಟ,ತಲೆ ಸುತ್ತುವಿಕೆ ಇತ್ಯಾದಿಗಳಿಗೆ ಕಾರಣವಾಗುತ್ತದೆ.

ಮುಟ್ಟಿನ ದಿನಗಳ ತಲೆನೋವು

ಹಲವಾರು ಮಹಿಳೆಯರು ತಮ್ಮ ಮುಟ್ಟಿನ ದಿನಗಳಲ್ಲಿ ಈ ವಿಧದ ತಲೆನೋವನ್ನು ಅನುಭವಿಸುತ್ತಾರೆ. ಈಸ್ಟ್ರೋಜನ್ ಹಾರ್ಮೋನ್‌ನ ಮಟ್ಟದಲ್ಲಿಯ ಏರಿಳಿತ ಇದಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News