ಕಸ ಸಮಸ್ಯೆ ವಿರುದ್ಧ ಮಾಜಿ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಪ್ರತಿಭಟನೆ
ಬೆಂಗಳೂರು, ಸೆ.23: ನಗರದ ಕೋಗಿಲುಕ್ರಾಸ್ ಸಮೀಪದಲ್ಲಿರುವ ಬೆಳ್ಳಳ್ಳಿ ಕ್ವಾರಿಯಲ್ಲಿ ಕಸವನ್ನು ಹಾಕಬಾರದೆಂದು ಒತ್ತಾಯಿಸಿ ಮಾಜಿ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರು ನಗರದ ಶೇ.80ರಷ್ಟು ಕಸವನ್ನು ಇಲ್ಲಿ ಸುರಿಯುತ್ತಿರುವುದರಿಂದ ಇಲ್ಲಿನ ಜನತೆ ಆನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಪ್ರದೇಶದಲ್ಲಿ ವಾಸಿಸುವ ಜನತೆ ಮಧ್ಯಮ ಹಾಗೂ ಬಡವರಾಗಿದ್ದು, ರೋಗಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಕಸವನ್ನು ಸುರಿಯಬಾರದೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ವೇಳೆ ಮಾಜಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಬ್ಯಾಟರಾಯನಪುರ ಸೇರಿದಂತೆ ಕ್ವಾರಿ ಸುತ್ತಮುತ್ತಲ ಅಭಿವೃದ್ದಿಗಾಗಿ ಸಮ್ಮಿಶ್ರ ಸರಕಾರ ಬಿಡುಗಡೆ ಮಾಡಿದ್ದ 120 ಕೋಟಿ ರೂ ಅನುದಾನ ಕಡಿತಗೊಳಿಸಿದೆ. ಜೊತೆಗೆ ಇತರ 200 ಕೋಟಿ ರೂ. ಅನುದಾನವನ್ನು ರದ್ದು ಮಾಡಿದೆ. ಇದರಿಂದ ಕ್ಷೇತ್ರದ ಜನರ ಜೀವನ ನರಕವಾಗಿದೆ. ಇದರ ಜೊತೆಗೆ ಕಸದ ಸಮಸ್ಯೆಯಿಂದ ಜನತೆ ಹಲವು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಈ ಪ್ರದೇಶವನ್ನು ಮತ್ತೊಂದು ಮಂಡೂರು ಮಾಡಲು ನಾವು ಬಿಡಲ್ಲ. ರಾಜ್ಯ ಸರಕಾರ ಕೂಡಲೇ ಇಲ್ಲಿನ ಕಸವನ್ನು ವಿಲೇವಾರಿ ಮಾಡಬೇಕು ಹಾಗೂ ಬೆಂಗಳೂರಿನಿಂದ ಯಾವುದೇ ರೀತಿಯ ಕಸವನ್ನು ಇಲ್ಲಿ ಸುರಿಯಬಾರದೆಂದು ಅವರು ಒತ್ತಾಯಿಸಿದರು.