×
Ad

ಕಗ್ಗದಾಸಪುರ ಕೆರೆ ಪುನಃಶ್ಚೇತನಕ್ಕೆ ಎಸ್‌ಕೆಎಲ್ ಆಗ್ರಹ

Update: 2019-09-23 22:56 IST

ಬೆಂಗಳೂರು, ಸೆ. 23: ಸಿ.ವಿ.ರಾಮನ್ ನಗರ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕಗ್ಗದಾಸಪುರ ಕೆರೆ ಒತ್ತುವರಿ ಮಾಡಿ ಕಾನೂನು ಬಾಹಿರವಾಗಿ ಕಾಮಗಾರಿ ನಡೆಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕೆರೆ ಪುನಃಶ್ಚೇತನ ಮಾಡುವಂತೆ ಕಗ್ಗದಾಸಪುರ ಕೆರೆ ಉಳಿಸಿ ಸಂಘಟನೆ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಸದಸ್ಯ ಮೋಹನ್ ದಾಸರಿ, ಒಟ್ಟು 50 ಎಕರೆ ಪ್ರದೇಶವಿರುವ ಕೆರೆ ಒತ್ತುವರಿಯಿಂದ 38 ಎಕರೆಯಾಗಿದೆ. ಈ ಹಿಂದೆ ಕೆರೆ ಅಭಿವೃದ್ಧಿಗೆಂದು ಬೆಂಗಳೂರು ಅಭಿವೃದ್ಧಿ ಮಂಡಳಿ (ಬಿಡಿಎ) ಕಗ್ಗದಾಸಪುರ ಕೆರೆ ಅಭಿವೃದ್ಧಿ ಸವಿವರ ಯೋಜನಾ ವರದಿ(ಡಿಪಿಆರ್) ಮಾಡಿ ಸಿದ್ಧಪಡಿಸಿತ್ತು. ಸರಕಾರದಿಂದ 8.5 ಕೋಟಿ ರೂ. ಬಜೆಟ್ ಮಂಜೂರು ಮಾಡಿತ್ತಾದರೂ ಸರಕಾರದ ಯಾವ ಕೆಲಸಗಳಾಗದೇ ಒತ್ತುವರಿದಾರರ ಪಾಲಾಗುತ್ತಿದೆ. ಇದಕ್ಕೆ ಸರಕಾರದ ನಿರ್ಲಕ್ಷವೇ ಕಾರಣ ಎಂದು ದೂರಿದರು.

ಸಂಘಟನೆಯ ಒತ್ತಾಯದ ಮೇರೆಗೆ ಮಾಜಿ ಸಚಿವ ಡಾ.ಜಿ.ಪರಮೇಶ್ವರ್ ಕೆರೆಗೆ ಭೇಟಿ ನೀಡಿ ಒಳಚರಂಡಿ ನೀರಿನ ಸಂಸ್ಕರಣಾ ಘಟಕ ಸ್ಥಾಪಿಸುವುದಾಗಿ ಭರವಸೆ ನೀಡಿದ್ದರು. ನಂತರ ಸರಕಾರದ ಡಿಪಿಆರ್‌ನಂತೆ ಕೆಲಸವಾಗುತ್ತಿವೆ ಎಂದುಕೊಂಡಿದ್ದ ಸ್ಥಳೀಯರಿಗೆ ಅಲ್ಲಿ ಕಾನೂನು ಬಾಹಿರವಾಗಿ ಕಾಮಗಾರಿ ನಡೆಯುತ್ತಿರುವುದು ಸ್ಪಷ್ಟವಾಯಿತು. ಹೀಗಾಗಿ ಸಂಘಟನೆ ಮತ್ತು ಸ್ಥಳೀಯರು 52 ವಾರ ಹೋರಾಟಿ ಐದು ಕೋಟಿ ವೆಚ್ಚದಲ್ಲಿ ನಡೆದ ಅನಧಿಕೃತ ಉದ್ಯಾನ, ವಿಸ್ತಾರ ಪಾದಾಚಾರಿ ಮಾರ್ಗ, ಜೀಮ್ ಕಾಮಗಾರಿ ಹಾಗೂ ತ್ಯಾಜ್ಯ ಎಸೆಯುವುದನ್ನು ನಿಲ್ಲಿಸಿದ್ದೇವೆ ಎಂದು ವಿವರಿಸಿದರು.

ಅಲ್ಲದೇ ಮೈತ್ರಿ ಸರಕಾರ ಪತನವಾಗಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆ ಹಿಂದಿನ ಸರಕಾರ ಬಿಡುಗಡೆ ಮಾಡಿದ್ದ ಅನುದಾನ ಕೂಡ ಸರಕಾರಕ್ಕೆ ಮರಳಿತು. ಇದೀಗ ಅಲ್ಲಿ ಮತ್ತೆ ಅನಧಿಕೃತ ಕಾಮಗಾರಿಗಳು ತಲೆ ಎತ್ತುತ್ತಿವೆ. ಆದ್ದರಿಂದ ಸಂಬಂಧಿಸಿದ ಇಲಾಖೆ ಹಾಗೂ ಸರ್ಕಾರ ಕೆರೆ ಪುನಃಶ್ಚೇತನ ಮಾಡುವ ಜತೆಗೆ ಒತ್ತುವರಿದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕೆರೆ ಅಭಿವದ್ಧಿ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ ಮುಂದುವರಿದರೆ ಹೋರಾಟ ಮಾಡಲಾಗುವುದು ಎಂದು ಮೋಹನ್ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News