ಅನುದಾನ ಕಡಿತ ಸಂಬಂಧ ಮುಖ್ಯಮಂತ್ರಿ ಜತೆ ಕೃಷ್ಣಭೈರೇಗೌಡ ಚರ್ಚೆ

Update: 2019-09-23 17:39 GMT

ಬೆಂಗಳೂರು, ಸೆ.23: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಕ್ಕೆ ನೀಡಿದ್ದ ಅನುದಾನವನ್ನು ಕಡಿತಗೊಳಿಸಿರುವುದಕ್ಕೆ ಮಾಜಿ ಸಚಿವ ಹಾಗೂ ಶಾಸಕ ಕೃಷ್ಣಬೈರೇಗೌಡ ಮುಖ್ಯಮಂತ್ರಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದ ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿ, ಮುಖ್ಯಮಂತ್ರಿ ಯಡಿಯೂರಪ್ಪರೊಂದಿಗೆ ಅನುದಾನದ ಕಡಿತಕ್ಕೆ ಸಂಬಂಧಿಸಿದ ವಿಷಯದ ಕುರಿತು ಚರ್ಚೆ ನಡೆಸಿದರು. ಈ ವೇಳೆ ಅನುದಾನ ಕಡಿತ ಸರಿಯಾದ ನಿರ್ಧಾರವಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಮಾತುಕತೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಕ್ಷೇತ್ರಕ್ಕೆ ಹಿಂದಿನ ಸರಕಾರದ ಅವಧಿಯಲ್ಲಿ 400 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೆ, ಈ ಮೈತ್ರಿ ಸರಕಾರ ಪತನಗೊಂಡು, ಬಿಜೆಪಿ ಸರಕಾರ ಬಂದ ನಂತರ 300 ಕೋಟಿ ರೂ. ಅನುದಾನ ಕಡಿತ ಮಾಡಲಾಗಿದೆ ಎಂದು ಹೇಳಿದರು.

ಸರಕಾರ ಅನುದಾನ ಕಡಿತ ಮಾಡಿರುವುದರಿಂದ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಕಷ್ಟವಾಗಿದೆ. ಆದುದರಿಂದ ಕೂಡಲೇ ಕಡಿತಗೊಳಿಸಿರುವ ಅನುದಾನವನ್ನು ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪರನ್ನು ಕೇಳಿದ್ದೇನೆ. ಅವರು ಯಾವ ತೀರ್ಮಾನ ಕೈಗೊಳ್ಳುವರೆಂದು ನೋಡಬೇಕಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News