ಜಮ್ಮು-ಕಾಶ್ಮೀರದ ಪ್ರತಿ ಗ್ರಾಮದ ಐದು ಮಂದಿಗೆ ಸರಕಾರಿ ಉದ್ಯೋಗ: ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ

Update: 2019-09-23 17:43 GMT

ಬೆಂಗಳೂರು, ಸೆ.23: ಜಮ್ಮು-ಕಾಶ್ಮೀರದ ಪ್ರತಿ ಗ್ರಾಮದಲ್ಲಿ ಐವರು ಪ್ರತಿಭಾನ್ವಿತ ನಿರುದ್ಯೋಗಿಗಳಿಗೆ ಸರಕಾರಿ ಉದ್ಯೋಗ ನೀಡಲಾಗುವುದು. ಸೇನೆ, ನೌಕಾಪಡೆ, ವಾಯುಪಡೆಯಲ್ಲಿ ಕಾಶ್ಮೀರದ ಯುವಕರಿಗೆ ಉದ್ಯೋಗ ನೀಡಲು ವಿಶೇಷ ನೇಮಕಾತಿ ಅಭಿಯಾನ ಕೈಗೊಳ್ಳಲಾಗುವುದು ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ತಿಳಿಸಿದರು.

ಸೋಮವಾರ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗೃಹ ಇಲಾಖೆಯಲ್ಲೂ ನೇಮಕಾತಿ ಮಾಡಲಾಗುವುದು. ಕಾಶ್ಮೀರದಲ್ಲಿ ಸೇಬು ಬೆಳೆಯುವ ರೈತರಿಗೆ ಈಗ ಶೇ.30ರಷ್ಟು ಲಾಭ ಮಾತ್ರ ದೊರೆಯುತ್ತಿದೆ. ಕೇಂದ್ರ ಸರಕಾರ ನಾಫೆಡ್ ಮೂಲಕ ಮಾರುಕಟ್ಟೆ ಮಧ್ಯಪ್ರವೇಶ ಮಾಡಿ ಮಧ್ಯವರ್ತಿಗಳ ಪಾಲಾಗುತ್ತಿರುವ ಶೇ.70ರಷ್ಟು ಲಾಭವು ರೈತರಿಗೆ ದೊರಕಿಸಲಿದೆ ಎಂದರು.

ಕಾಶ್ಮೀರದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಆಸಕ್ತಿ ತೋರಿಸುವ ಸಂಸ್ಥೆಗಳಿಗೆ ಸರಕಾರದಿಂದಲೇ ಜಮೀನು ಒದಗಿಸಲಾಗುವುದು. ಈಗ ಪ್ರತಿ ಗ್ರಾಮ ಪಂಚಾಯತಿಗಳಿಗೆ ಅನುದಾನವನ್ನು ನೇರವಾಗಿ ನೀಡಲಾಗುತ್ತಿದೆ. ಬ್ಲಾಕ್ ಮಟ್ಟದಿಂದ ಆರಂಭಿಸಿ ಜಿಲ್ಲಾ ಮಟ್ಟದವರೆಗೆ ಚುನಾವಣೆಗಳನ್ನು ನಡೆಸಲಾಗುವುದು. ಕಾಶ್ಮೀರದಲ್ಲಿಯೂ ಭ್ರಷ್ಟಾಚಾರ ನಿಗ್ರಹ ದಳದ ಮೂಲಕ ತನಿಖೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ಅ.31ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನದಂದು ಜಮ್ಮು-ಕಾಶ್ಮೀರದಲ್ಲಿ ಹೊಸದಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬರಲಿವೆ. ಆನಂತರ ಅವುಗಳಿಗೆ ಲೆಫ್ಟಿನೆಂಟ್ ಗವರ್ನರ್‌ಗಳ ನೇಮಕಾತಿ ಮಾಡಲಾಗುವುದು. ಪ್ರಧಾನಮಂತ್ರಿಯ ಆದೇಶದ ಮೇರೆಗೆ ಕಾಶ್ಮೀರದ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳಲ್ಲಿ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ ಎಂದು ಕಿಶನ್ ರೆಡ್ಡಿ ತಿಳಿಸಿದರು.

ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಿದ ನಂತರ ವಿಧಾನಸಭಾ ಚುನಾವಣೆ ನಡೆಸಲಾಗುತ್ತದೆ. ಪಾಕಿಸ್ತಾನದೊಂದಿಗೆ ಮಾತುಕತೆಯೇನಾದರೂ ನಡೆದರೆ ಅದು ಪಾಕ್‌ಆಕ್ರಮಿತ ಕಾಶ್ಮೀರದ(ಪಿಒಕೆ) ಬಗ್ಗೆ ಮಾತ್ರ ಆಗಿರುತ್ತದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ನಮ್ಮ ವಶಕ್ಕೆ ಪಡೆಯುವ ಪ್ರಸ್ತಾವನೆ ನಮ್ಮ ಮುಂದೆ ಸದ್ಯಕ್ಕಿಲ್ಲ ಎಂದು ಅವರು ಹೇಳಿದರು.

ಹೌಡಿ ಮೋದಿ ಕಾರ್ಯಕ್ರಮದ ನಂತರ ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಮತ್ತಷ್ಟು ವೃದ್ಧಿಯಾಗುವ ವಾತಾವರಣ ಸೃಷ್ಟಿಯಾಗಿದೆ. ವಿಶ್ವದ ಎರಡು ಬೃಹತ್ ಪ್ರಜಾತಂತ್ರ ರಾಷ್ಟ್ರಗಳ ಮುಖ್ಯಸ್ಥರು ಒಂದೇ ವೇದಿಕೆಯಲ್ಲಿ ಘೋಷಿಸಿರುವಂತೆ ಉಗ್ರವಾದದ ಉಪಟಳ ಹತ್ತಿಕ್ಕಲು ಭಾರಿ ಒತ್ತು ದೊರೆತಂತಾಗಿದೆ ಎಂದು ಕಿಶನ್ ರೆಡ್ಡಿ ತಿಳಿಸಿದರು.

ಕಾಶ್ಮೀರದಲ್ಲಿ ಗ್ರಾಮಾಂತರ ಪ್ರದೇಶಗಳೂ ಸೇರಿದಂತೆ ಹಲವೆಡೆ 50 ಸಾವಿರ ದೇವಾಲಯಗಳನ್ನು ನಾಶಪಡಿಸಲಾಗಿದೆ, ಇಲ್ಲವೇ ಮುಚ್ಚಲಾಗಿದೆ. ಮುಚ್ಚಿರುವ ದೇವಾಲಯಗಳನ್ನು ಪುನಃ ತೆರೆಸಲಾಗುವುದು. ನಾಶಗೊಂಡಿರುವ ದೇವಾಲಯಗಳ ಸಮೀಕ್ಷೆ ನಡೆಸಲು ಆದೇಶಿಸಲಾಗಿದೆ. ಮುಚ್ಚಿರುವ ಚಲನಚಿತ್ರ ಮಂದಿರಗಳನ್ನು ಪುನರ್ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ಮಹೇಶ ತೆಂಗಿನಕಾಯಿ, ಶಾಸಕರಾದ ಅರವಿಂದ ಬೆಲ್ಲದ್, ವೈ.ಎ.ನಾರಾಯಣಸ್ವಾಮಿ, ವಕ್ತಾರ ವಾಮನ್ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News