ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

Update: 2019-09-24 14:56 GMT

ಬೆಂಗಳೂರು, ಸೆ.24: ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ. ಬೇರೆ ದೇಶಗಳ ಆಂತರಿಕ ವಿಷಯದಲ್ಲಿ ಭಾರತ ಯಾವತ್ತೂ ತಲೆ ಹಾಕುವುದಿಲ್ಲ. ಅದೇ ರೀತಿ ನಮ್ಮ ದೇಶದ ಆಂತರಿಕ ವಿಷಯದಲ್ಲೂ ಬೇರೆಯವರು ತಲೆ ಹಾಕುವುದನ್ನು ಸಹಿಸುವುದಿಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.

ಮಂಗಳವಾರ ಇಲ್ಲಿನ ಜಯನಗರದ ಬಿಎಚ್‌ಎಸ್ ಹೈಯರ್ ಎಜುಕೇಷನ್ ಸೊಸೈಟಿಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಸಂಸ್ಥೆ ಉತ್ತಮ ವಿದ್ಯಾಭ್ಯಾಸ ನೀಡುತ್ತಾ ಬಂದಿದೆ. ಇಂದು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನಗೆ ಬಹಳ ಸಂತೋಷವಾಗಿದೆ ಎಂದರು.

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಿದೆ. ಯುವಕರು ಈ ಬಗ್ಗೆ ಚಿಂತಿಸಬೇಕಿದೆ. ಭಾರತ ದೇಶ ಅನೇಕ ಮಹನೀಯರನ್ನು ಹೊಂದಿದ ದೇಶ. ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ಬಸವಣ್ಣ, ನಾರಾಯಣ ಗುರು, ಚಿದಂಬರಂ ಪಿಳ್ಳೈ ಹೀಗೆ ಅನೇಕ ಮಹನೀಯರು ತ್ಯಾಗ ಮಾಡಿದ ದೇಶ ಇದು ಎಂದು ಅವರು ಹೇಳಿದರು.

ತಕ್ಷಶಿಲೆ, ನಳಂದದಂತಹ ವಿದ್ಯಾಸಂಸ್ಥೆಗಳ ಸೇವೆ, ಗುರುಕುಲ ಪದ್ಧತಿ ಹೊಂದಿದಂತಹ ದೇಶ ನಮ್ಮದು. ಸರಕಾರವೇ ಎಲ್ಲ ಮಾಡಲಿ ಎಂದು ಕೂರಬಾರದು. ಸಮಾಜದ ಪ್ರತಿಯೊಬ್ಬನಿಗೂ ಜವಾಬ್ದಾರಿ ಇರಬೇಕು. ಪ್ರತಿಯೊಬ್ಬರಿಗೂ ಪ್ರತಿ ಹಳ್ಳಿಗೂ ವಿದ್ಯೆ ಸಿಗುವಂತಾಗಬೇಕು ಎಂದು ಎಂದು ವೆಂಕಯ್ಯ ನಾಯ್ಡು ತಿಳಿಸಿದರು

ಭಾರತ ವಿಶ್ವಗುರು ಆಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯ ಆಶಯ. ದೇಶದ ಆರ್ಥಿಕ ಸ್ಥಿತಿ ಮುಂದಿನ ದಿನಗಳಲ್ಲಿ ಪ್ರಪಂಚಕ್ಕೆ ಮೊದಲಾಗಬೇಕು. ಹಳ್ಳಿಗಳ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ಭಾರತದಲ್ಲಿ ಸ್ತ್ರೀಯರಿಗೆ ಗೌರವ ಸಿಗಬೇಕು. ನಮ್ಮ ದೇಶದ ನದಿಗಳು ಗಂಗಾ, ಕಾವೇರಿ, ತುಂಗಾ ಹೀಗೆ ಸ್ತ್ರೀ ನಾಮಗಳದ್ದಾಗಿವೆ. ಅಮೆರಿಕಾದಂತಹ ದೇಶದಲ್ಲಿ ಭಾರತದ ಪ್ರಧಾನಿಯ ಕಾರ್ಯಕ್ರಮಕ್ಕೆ ಅಲ್ಲಿನ ಅಧ್ಯಕ್ಷರು ಭಾಗವಹಿಸಿದ್ದಾರೆ . ಭಾರತ ಇತರರಿಗೆ ಮಾದರಿಯಾಗಬೇಕು. ಯೋಗ ಪ್ರತಿಯೊಬ್ಬರಿಗೂ ಬೇಕು. ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಾಗಬೇಕು ಎಂದು ಅವರು ಹೇಳಿದರು.

ಗಾಂಧೀಜಿಯವರ ಕನಸು ಅದೇ ಆಗಿತ್ತು. ಹಿಂದಿನ ಕಾಲದ ಗುರುಕುಲ ಅಭ್ಯಾಸಗಳಲ್ಲಿ ಯೋಗ ಮತ್ತು ಋತುವಿಗೆ ತಕ್ಕಂತೆ ಆಹಾರ ಸೇವನೆ, ಶಿಸ್ತುಬದ್ದ ಜೀವನ ಶೈಲಿಯಿಂದ ದೀರ್ಘಾಯುಶಿ ಆಗಿದ್ದರು. ಇಂದಿನ ಯುವಕರು ಪಿಜ್ಜಾ, ಬರ್ಗರ್ ಎನ್ನದೆ ಉಪಯುಕ್ತ, ಸ್ವಾದಿಷ್ಟ, ಕ್ರಮಬದ್ದ ಆಹಾರ ಪದ್ಧತಿ ಅನುಸರಿಸಬೇಕು ಎಂದು ವೆಂಕಯ್ಯ ನಾಯ್ಡು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್ ಹಾಗೂ ಇತರರು ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಜಿ.ವಿ.ವಿಶ್ವನಾಥ್ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News