ಉಪ ಚುನಾವಣೆಯಲ್ಲಿಯೂ ಇವಿಎಂ ದುರ್ಬಳಕೆಯಾಗಬಹುದು: ಮಲ್ಲಿಕಾರ್ಜುನ ಖರ್ಗೆ

Update: 2019-09-24 15:04 GMT

ಬೆಂಗಳೂರು, ಸೆ.24: ವಿದ್ಯುನ್ಮಾನ ಮತಯಂತ್ರ(ಇವಿಎಂ) ದುರ್ಬಳಕೆ ಬಗ್ಗೆ ಹಿಂದೆಯೂ ಅನುಮಾನ ಇದ್ದು, ಸದ್ಯ ಉಪ ಚುನಾವಣೆ ಸಂದರ್ಭದಲ್ಲಿ ಕೂಡ ಇದು ಮರುಕಳಿಸುವ ಸಂಶಯವಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಮಂಗಳವಾರ ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇವಿಎಂ ಯಂತ್ರ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಈಗಾಗಲೇ ಗಂಭೀರ ಆರೋಪಗಳಿವೆ. ಅಲ್ಲದೆ, 1952 ರಿಂದ 2019ರವರೆಗೆ ಕಾಂಗ್ರೆಸ್ ಬಲಿಷ್ಠವಾಗಿ ಕಲಬುರಗಿಯಲ್ಲಿದೆ. ಇಷ್ಟು ಮಾತ್ರವಲ್ಲದೆ, ಗುರುಮಿಠ್ಕಲ್ ನಲ್ಲಿ ಶಾಶ್ವತವಾಗಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಚಿತ್ತಾಪುರ ಸಹ ಕಾಂಗ್ರೆಸ್ ಮತ ಕ್ಷೇತ್ರವಾಗಿದೆ. ಹೀಗಿರುವಾಗ ಬಿಜೆಪಿ ಹೇಗೆ ಬರಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.

ವ್ಯವಸ್ಥಿತವಾಗಿ ಬಿಜೆಪಿ ಷಡ್ಯಂತ್ರ ಮಾಡುತ್ತಿದೆ. ವ್ಯಕ್ತಿಗತವಾಗಿ ಬಿಜೆಪಿ ಇಂತಹ ಕೆಲಸ ಮಾಡುತ್ತಿದೆ. ನನ್ನ ಕ್ಷೇತ್ರಕ್ಕೆ ಆರೆಸ್ಸೆಸ್ ನಾಯಕರು ಎರಡು ವರ್ಷ ಮೊದಲೇ ಬರುತ್ತಾರೆ. ಪ್ರಧಾನಿ ಮೋದಿ ಕೂಡ ಹೆಚ್ಚಿನ ಒತ್ತು ನನ್ನ ಕ್ಷೇತ್ರಕ್ಕೆ ನೀಡುತ್ತಾರೆ. ಇದೆಲ್ಲವನ್ನೂ ಗಮನಿಸಿದಾಗ ಅನುಮಾನ ಬರುವುದು ಸಹಜ ಎಂದರು.

ರಾಷ್ಟ್ರಮಟ್ಟದ ಹೋರಾಟ: ಕೇಂದ್ರ ಸರಕಾರ ತಮ್ಮ ಅಧೀನದಲ್ಲಿರುವ ಎಲ್ಲ ತನಿಖಾ ಸಂಸ್ಥೆಗಳ ಮೇೀಲೆ ಪ್ರಭಾವ ಹೇರಿ, ವಿಪಕ್ಷ ನಾಯಕರನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಬ್ಯಾಲೆಟ್ ಕಾಗದ ಮೂಲಕ ಮತದಾನ ಪ್ರಕ್ರಿಯೆ ಜಾರಿಗಾಗಿ ಒತ್ತಾಯಿಸಿ, ರಾಷ್ಟ್ರಮಟ್ಟದ ಹೋರಾಟ ರೂಪಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News