ಎನ್ನೆಸ್ಸೆಸ್‌ನಿಂದ ವಿದ್ಯಾರ್ಥಿಗಳಲ್ಲಿ ಸಮಾಜಸೇವೆಯ ಚಿಂತನೆ: ಡಾ.ಎನ್.ಸತೀಶ್‌ಗೌಡ
ಬೆಂಗಳೂರು, ಸೆ.24: ಕಾಲೇಜುಗಳಲ್ಲಿ ಎನ್ನೆಸ್ಸೆಸ್‌ನ್ನು ಕೇವಲ ನೆಪಮಾತ್ರಕ್ಕೆ ಇಟ್ಟುಕೊಳ್ಳದೆ, ಸಮಾಜ ಸೇವೆಯ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಮೂಢಿಸಲು ಸಕ್ರಿಯವಾಗಿರಬೇಕೆಂದು ಬೆಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎನ್.ಸತೀಶ್ ಗೌಡ ತಿಳಿಸಿದ್ದಾರೆ.
ಮಂಗಳವಾರ ಬೆಂಗಳೂರು ವಿಶ್ವವಿದ್ಯಾಲಯವು ಕೆಂಪೇಗೌಡ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಅಂಡ್ ರಿಸರ್ಚ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ 50ನೇ ವರ್ಷದ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಇವತ್ತಿಗೆ ಎನ್ನೆಸ್ಸೆಸ್‌ಗೆ 50 ವರ್ಷ ಕಳೆದಿದ್ದು, ರಾಷ್ಟ್ರದಲ್ಲಿ ಎನ್ನೆಸ್ಸೆಸ್ ತನ್ನದೇ ಆದ ಕೆಲಸವನ್ನು ಯಾವುದೇ ಸದ್ದು ಪ್ರಚಾರಗಳಿಲ್ಲದೇ ಸಾರ್ವಜನಿಕರಿಗೆ ಸಹಾಯ ಹಸ್ತವನ್ನು ಸ್ವಯಂ ಚಾಚಿದೆ. ಇದು ಮತ್ತಷ್ಟು ಸಕ್ರಿಯವಾಗುವ ಮೂಲಕ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಕಾರ್ಯಮಗ್ನರಾಗಬೇಕಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯು ತನ್ನದೇ ಗುರಿ ಹಾಗೂ ಧ್ಯೇಯೋದ್ದೇಶಗಳನ್ನು ಹೊಂದಿದೆ. ಇದರ ಧ್ಯೇಯ ವಾಕ್ಯ ’ನನಗಲ್ಲ ನಿನಗೆ’ ಎಂಬ ಸುಂದರವಾದ ಆಲೋಚನೆ ಹೊಂದಿದೆ. ಶಿಕ್ಷಣದ ಮೂಲಕ ಸೇವೆಯನ್ನು ಸೇವೆಯ ಮೂಲಕ ಶಿಕ್ಷಣವನ್ನು ನೀಡುವ ಏಕ್ಯೆಕ ಯೋಜನೆ ಇದಾಗಿದೆ. ಎನ್ನೆಸ್ಸೆಸ್‌ನ ಲಾಂಛನ ಒರಿಸ್ಸಾ ರಾಜ್ಯದ ಕೊನಾರ್ಕ್‌ನ ಸೂರ್ಯದೇವಾಲಯದ ಕಲ್ಲು ರಥದ 8 ಕಡ್ಡಿಗಳ ಒಂದು ಚಕ್ರ, ಈ ಚಕ್ರ ಯುವ ಶಕ್ತಿಯ ನಿರಂತರ ಚಲನೆಯ ಸಂಕೇತ ಈ ಲಾಂಛನದಲ್ಲಿ ಪ್ರಮುಖವಾಗಿ 3 ಬಣ್ಣಗಳು(ಕೆಂಪು, ನೀಲಿ, ಬಿಳಿ) ಇವೆ ಎಂದು ಅವರು ಮಾಹಿತಿ ನೀಡಿದರು.
ಕೆಂಪೇಗೌಡ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಅಂಡ್ ರಿಸರ್ಚ್ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ಎಲ್ಲಾ ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ವರ್ಚಸ್ಸನ್ನು ಬೆಳೆಸುವುದು, ಜೊತೆಗೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬಹಳ ಅನುಕೂಲಕಾರಿಯಾಗಿದೆ ಎಂದು ತಿಳಿಸಿದರು.