ಐಎಂಎ ವಂಚನೆ ಪ್ರಕರಣ: ಮನ್ಸೂರ್ ಖಾನ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

Update: 2019-09-24 17:13 GMT

ಬೆಂಗಳೂರು, ಸೆ.24: ಐಎಂಎ (ಐ ಮಾನಿಟರಿ ಅಡ್ವೈಸರಿ) ಸಮೂಹ ಕಂಪೆನಿ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಖಾನ್ ಹಾಗೂ ಪ್ರಕರಣದ ಐದನೇ ಆರೋಪಿ ನವೀದ್‌ನ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗಿದೆ.

ಮನ್ಸೂರ್ ಖಾನ್ ಹಾಗೂ ನವೀದ್ ಅನ್ನು ಮಂಗಳವಾರ ನಗರದ ಸಿಬಿಐ ವಿಶೇಷ ಪೀಠದ ನ್ಯಾಯಾಧೀಶ ಆರ್.ವಿ.ಪಾಟೀಲ್ ಅವರ ಮುಂದೆ ಹಾಜರು ಪಡಿಸಲಾಯಿತು. ನ್ಯಾಯಾಧೀಶರು, ಈ ಇಬ್ಬರು ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಸೆ.30ರವರೆಗೆ ವಿಸ್ತರಿಸಿ ಆದೇಶಿಸಿದರು.

ಸಿಬಿಐ ಕಸ್ಟಡಿ ಅವಧಿ ಅಂತ್ಯವಾಗಿದ್ದ ಹಿನ್ನೆಲೆ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ವೇಳೆ ಸಿಬಿಐ ಪರ ವಕೀಲ, ಎಫ್‌ಐಆರ್‌ನಲ್ಲಿ ಹೆಸರು ಉಲ್ಲೇಖಿಸದ ಕೆಲವರ ವಿಚಾರಣೆ ವೇಳೆ, ಪ್ರಕರಣ ಸಂಬಂಧ ಹೇಳಿಕೆ ನೀಡಿದ್ದಾರೆ. ಹಾಗಾಗಿ, ಆರೋಪಿಗಳಿಂದ ಕೆಲ ಮಹತ್ವದ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಮತ್ತಷ್ಟು ದಿನ ಕಸ್ಟಡಿಗೆ ನೀಡುವಂತೆ ಕೋರಿದರು ಎನ್ನಲಾಗಿದೆ. ಇದಕ್ಕೆ ಸಮ್ಮಿತಿಸಿ, ಮತ್ತೆ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಆದೇಶಿಸಿದೆ ಎಂದು ಮೂಲಗಳು ತಿಳಿಸಿದೆ.

ಆದೇಶ ರದ್ದುಗೊಳಿಸುವಂತೆ ಮನವಿ

ಸಕ್ಷಮ ಪ್ರಾಧಿಕಾರ ರಚಿಸಿರುವ ರಾಜ್ಯ ಸರಕಾರದ ಆದೇಶ ರದ್ದು ಕೋರಿ ಐಎಂಎ ಸಮೂಹ ಕಂಪೆನಿ ಸಂಸ್ಥಾಪಕ ಮನ್ಸೂರ್ ಖಾನ್, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದ ಬಳಿಕ, ಆರೋಪಿ ಮಾಲಕತ್ವದ ಆಸ್ತಿ ವಶಕ್ಕೆ ಪಡೆಯಲು ಸಕ್ಷಮ ಪ್ರಾಧಿಕಾರ ರಚನೆಗಾಗಿ ಹೈಕೋರ್ಟ್ ಆದೇಶ ನೀಡಿತ್ತು. ಅದರಂತೆ, ರಾಜ್ಯ ಸರಕಾರವು ಐಎಎಸ್ ಅಧಿಕಾರಿ ನೇತೃತ್ವದಲ್ಲಿ ಸಕ್ಷಮ ಪ್ರಾಧಿಕಾರ ರಚಿಸಿದಲ್ಲದೆ, ಅಪಾರ ಮೌಲ್ಯದ ಆಸ್ತಿ ದಾಖಲೆ ಪತ್ರಗಳನ್ನು ಜಪ್ತಿ ಮಾಡಿದೆ. ಆದರೆ, ಆಸ್ತಿ ಕೈಬಿಟ್ಟು ಹೋಗಿರುವ ಹಿನ್ನೆಲೆ ಮನ್ಸೂರ್ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News