×
Ad

ಆಂಧ್ರಪ್ರದೇಶ ಮಾದರಿಯಲ್ಲಿ ನೂತನ ಮರಳು ನೀತಿ: ಸಚಿವ ಸಿ.ಸಿ.ಪಾಟೀಲ್

Update: 2019-09-24 23:13 IST

ಬೆಂಗಳೂರು, ಸೆ.24: ಆಂಧ್ರಪ್ರದೇಶದಲ್ಲಿ ಜನಸಾಮಾನ್ಯರಿಗೆ ಸುಲಭವಾಗಿ ಮರಳು ಸಿಗುವಂತೆ ನೀತಿ ಜಾರಿ ಮಾಡಲಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲಿಯೂ ನೂತನ ಮರಳು ನೀತಿಯನ್ನು ರೂಪಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜನಸಾಮಾನ್ಯರಿಗೆ ಸುಲಭವಾಗಿ ಮರಳು ಸಿಗುತ್ತಿಲ್ಲ. ಇದರಿಂದಾಗಿ, ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಇನ್ನು ಮೂರು ತಿಂಗಳಲ್ಲಿ ನೂತನ ಮರಳು ನೀತಿ ಜಾರಿಗೆ ತರಲಾಗುವುದು ಎಂದರು.

ನೆರೆ ಹಾವಳಿ ಉಂಟಾದ ಪ್ರದೇಶದಲ್ಲಿ ಜನರ ಪಟ್ಟಾ ಜಮೀನಿನಲ್ಲಿ ಮರಳು ಸಂಗ್ರಹವಾಗಿದೆ. ಅದನ್ನು ಮನೆ ಕಟ್ಟಲು ಉಚಿತವಾಗಿ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಒಂದು ವೇಳೆ ಅವರ ಜಮೀನಿನಲ್ಲಿರುವ ಮರಳನ್ನು ಮಾರಾಟ ಮಾಡಬೇಕಾದರೆ ರಾಜಧನ ಕಟ್ಟಿಸಿಕೊಂಡು ಮರಳು ಮಾರಾಟಕ್ಕೂ ಅವಕಾಶ ನೀಡಲಾಗಿದೆ ಎಂದು ಸಿ.ಸಿ.ಪಾಟೀಲ್ ಹೇಳಿದರು.

ನೆರೆ ಪೀಡಿತ ಪ್ರದೇಶಗಳಲ್ಲಿನ ಪಟ್ಟಾ ಜಮೀನಿನಲ್ಲಿ ಎರಡು ಬಿಲಿಯನ್ ಮೆಟ್ರಿಕ್ ಟನ್ ಮರಳು ಸಂಗ್ರಹವಾಗಿದೆ. ಆ ಮರಳನ್ನು ಮಾರಾಟ ಮಾಡುವ ಅಥವಾ ಬಳಸಿಕೊಳ್ಳುವ ಅವಕಾಶವನ್ನು ಜಮೀನಿನ ಮಾಲಕರಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಗಣಿ ಉದ್ಯಮದಿಂದ ಈ ವರ್ಷ ನಾಲ್ಕು ಸಾವಿರ ಕೋಟಿ ರೂ. ರಾಜಧನ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಗ್ರಾನೈಟ್ ಗಣಿಗಾರಿಕೆಗೂ ಹೊಸ ನೀತಿಯನ್ನು ರೂಪಿಸುವ ಚಿಂತನೆ ನಡೆಸಲಾಗಿದೆ. ರಾಜಸ್ಥಾನದಲ್ಲಿರುವ ಮಾದರಿಯಲ್ಲಿ ನೂತನ ಗ್ರಾನೈಟ್ ನೀತಿಯನ್ನು ರೂಪಿಸುವ ಸಂಬಂಧ ಅಧಿಕಾರಿಗಳ ತಂಡವನ್ನು ರಾಜಸ್ಥಾನಕ್ಕೆ ಕಳುಹಿಸಲಾಗುತ್ತಿದೆ ಎಂದು ಸಿ.ಸಿ.ಪಾಟೀಲ್ ಹೇಳಿದರು.

ಮರಳು ಅಕ್ರಮಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರಕಾರದ ನಿಯಮಾವಳಿಗಳಂತೆ ಈಗ ಮರಳು ಮಾರಾಟ ಮಾಡಲಾಗುತ್ತಿದೆ. ಗಣಿಗಾರಿಕೆಗೆ ಸಂಬಂಧಿಸಿದಂತೆ ‘ಸಿ’ ಕ್ಯಾಟಗರಿಯ ಎಲ್ಲ ಗಣಿಗಳು ಪರವಾನಿಗೆಗಳನ್ನು ರದ್ದು ಮಾಡಿದ್ದೇವೆ. ‘ಬಿ’ ಕ್ಯಾಟಗಿರಿಯ ಪರವಾನಿಗೆಗಳನ್ನು ಕೇಂದ್ರಕ್ಕೆ ಕಳುಹಿಸಲಾಗಿದ್ದು, ಕೇಂದ್ರ ಸರಕಾರದ ಅನುಮತಿ ಪಡೆದ ಬಳಿಕವಷ್ಟೇ ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News