ಕಾಶ್ಮೀರ ವಿದ್ಯಾರ್ಥಿಗಳಿಗೆ ನೆರವು ಕೋರಿ ಸಿಎಂಗೆ ಮನವಿ: ಸಂಸದೆ ಶೋಭಾ ಕರಂದ್ಲಾಜೆ

Update: 2019-09-25 17:20 GMT

ಬೆಂಗಳೂರು, ಸೆ.25: ಕಾಶ್ಮೀರದಲ್ಲಿ ಸಂವಿಧಾನದ 370ನೆ ವಿಧಿ ರದ್ದತಿ ನಂತರ ಉಂಟಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಾಶ್ಮೀರದ ಹೊರಗೆ ಇತರ ರಾಜ್ಯಗಳಲ್ಲಿ ಇರುವವರಿಗೆ ಅದರಲ್ಲೂ ಇತರ ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎನ್ನುವ ದೂರು ಕೇಳಿಬಂದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ರಾಜ್ಯದ ಕೆಲವು ಕಾಲೇಜುಗಳಲ್ಲಿ ಓದುತ್ತಿರುವ ಕಾಶ್ಮೀರಿ ವಿದ್ಯಾರ್ಥಿಗಳಿಗೆ ತಮ್ಮ ಪೋಷಕರಿಂದ ಹಣ ಬರದೇ ಇರುವುದರಿಂದ ವಿದ್ಯಾರ್ಥಿಗಳು ತಾವು ನೆಲೆಸಿರುವ ಹಾಸ್ಟೆಲ್‌ಗಳಲ್ಲಿ ವೆಚ್ಚ ಭರಿಸಲು ಸಂಕಷ್ಟ ಎದುರಿಸುತ್ತಿದ್ದಾರೆ ಎನ್ನುವ ವರದಿಗಳಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗೆ ಮನವಿ ಮಾಡಿ ಈ ಸಮಸ್ಯೆಗೆ ಪರಿಹಾರ ನೀಡುವಂತೆ ಕೋರಲಾಗುವುದು ಎಂದು ಅವರು ಹೇಳಿದ್ದಾರೆ.

ಈಗ ಕಾಶ್ಮೀರದಲ್ಲಿ ಉದ್ಭವಿಸಿರುವ ಕೆಲವು ಸಮಸ್ಯೆಗಳು ಕೇವಲ ತಾತ್ಕಾಲಿಕವಾಗಿದ್ದು, ಇಷ್ಟರಲ್ಲೇ ಪರಿಸ್ಥಿತಿ ಸುಧಾರಣೆಯಾಗಲಿದೆ. ಸದ್ಯಕ್ಕೆ ಕಾಶ್ಮೀರಿ ಪ್ರಜೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ತುರ್ತುಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಕೇಂದ್ರ ಸರಕಾರವು ದೇಶದ ಹಿತದೃಷ್ಟಿ ಮತ್ತು ಕಾಶ್ಮೀರಿ ಜನರಿಗೆ ಉತ್ತಮ ಭವಿಷ್ಯವನ್ನು ಖಾತ್ರಿಪಡಿಸುವ ಸಲುವಾಗಿ ಸಂವಿಧಾನದ 370ನೆ ವಿಧಿಯನ್ನು ರದ್ದುಗೊಳಿಸುವ ದಿಟ್ಟ ಕ್ರಮ ಕೈಗೊಂಡಿದೆ. ಈ ಕ್ರಮಕ್ಕೆ ದೇಶ-ವಿದೇಶಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಕೈಗೊಂಡ ಅಮೆರಿಕಾ ಪ್ರವಾಸದಲ್ಲಿ ಅನಿವಾಸಿ ಭಾರತೀಯರು ಕೂಡ ಈ ದಿಟ್ಟ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಗಮನಾರ್ಹ ಎಂದು ಅವರು ಹೇಳಿದ್ದಾರೆ.

ಕಾಶ್ಮೀರದ ಸರ್ವಾಂಗೀಣ ಏಳಿಗೆಗೆ ರೂಪಿಸಲಾಗುತ್ತಿರುವ ಯೋಜನೆಗಳು ಅನುಷ್ಠಾನಕ್ಕೆ ಬಂದ ನಂತರ ಕಾಶ್ಮೀರದಲ್ಲಿ ಹಿಂದಿನ ವೈಭವ ಮರುಕಳಿಸಲಿದೆ ಎನ್ನುವ ನಂಬಿಕೆ ದೇಶದ ಜನರಲ್ಲಿ ಮೂಡಿದೆ ಎಂದು ಶೋಭಾ ಕರಂದ್ಲಾಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News