ಸುಳ್ಳು ಸುದ್ದಿಗಳ ಅಡಿಪಾಯವನ್ನೇ ಅಲುಗಾಡಿಸುವುದು ಹೇಗೆ?

Update: 2019-09-25 18:10 GMT

ಸುಳ್ಳು ಸುದ್ದಿಗಳನ್ನು ತಡೆಯುವುದು, ಎದುರಿಸುವುದು ತಂತ್ರಜ್ಞಾನ ವೇದಿಕೆಗಳ ರಾಜಕೀಯ ವರ್ಗದ, ವಾರ್ತಾ ಮಾಧ್ಯಮದ ಮತ್ತು ಪ್ರಜಾಪ್ರಭುತ್ವ ಹೈಜಾಕ್ ಆಗುತ್ತಿರುವುದರ ಕುರಿತು ಆತಂಕಿತರಾದ ನಾಗರಿಕರ ಒಂದು ಮುಖ್ಯ ಕಾಳಜಿಯಾಗಿದೆ. ಸುಳ್ಳು ಸುದ್ದಿ ಸಾಮಾಜಿಕ ಜಾಲ ತಾಣಗಳೊಂದಿಗೆ ಹುಟ್ಟಿಕೊಂಡಿರುವ ಒಂದು ಹೊಸ ವಿಚಾರ, ಹೊಸ ಬೆಳವಣಿಗೆ ಎಂದು ಹಲವರು ತಿಳಿದಿದ್ದಾರೆ. ಆದರೆ ಇದು ಸಮಸ್ಯೆಯ ಅರ್ಧ ಭಾಗ, ಅರ್ಧ ಸತ್ಯ ಮಾತ್ರ. ಸರಕಾರಗಳು ಹಾಗೂ ರಾಜಕಾರಣಿಗಳು, ಜನಾಭಿಪ್ರಾಯ ರೂಪಿಸುವವರು ತಮಗೆ ಬೇಕಾದ ಕಥಾನಕಗಳನ್ನು ರಚಿಸಲು ಯಾವಾಗಲೂ ಸುಳ್ಳು ಮಾಹಿತಿ ಅಭಿಯಾನಗಳನ್ನು ನಡೆಸುತ್ತಲೇ ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳು ಆಗಮನ ಸುಳ್ಳು ಸುದ್ದಿಯ ಸೃಷ್ಟಿ ಮತ್ತು ಪ್ರಚಾರವನ್ನು ವಿಕೇಂದ್ರೀಕರಿಸಿದೆ, ಅಷ್ಟೇ.

ಈಗ ಸುಳ್ಳು ಸುದ್ದಿಯನ್ನು ತಡೆಯಲು ಮೂರು ರೀತಿಗಳಲ್ಲಿ ಪ್ರಯತ್ನಿಸಲಾಗುತ್ತಿದೆ. ಸುಳ್ಳು ಸುದ್ದಿ ನಿರಾಕರಣೆ, ಸುಳ್ಳು ಸುದ್ದಿಯನ್ನು ಕಿತ್ತು ಹಾಕುವುದು ಮತ್ತು ಸಾರ್ವಜನಿಕರಿಗೆ ಸುಳ್ಳು ಸುದ್ದಿಯ ಕುರಿತು ತಿಳಿವಳಿಕೆ ನೀಡುವುದು, ಅವರನ್ನು ಎಜುಕೇಟ್ ಮಾಡುವುದು.

ಸತ್ಯ ವಿಷಯವನ್ನು ಪರೀಕ್ಷಿಸಿ, ತಪ್ಪುಗಳನ್ನು ಪತ್ತೆ ಹಚ್ಚಿ, ಪ್ರಕಟವಾದ ಸುದ್ದಿ ಸುಳ್ಳು ಎಂದು ಹೇಳಿಕೆ ನೀಡುವುದೇ ನಿರಾಕರಣೆ. ನಿರಾಕರಣೆಯ ಬಳಿಕ ಆ ಸುದ್ದಿಯನ್ನು ಮಾಧ್ಯಮಗಳಿಂದ ಕಿತ್ತು ಹಾಕಲು ಪ್ರಯತ್ನಿಸಲಾಗುತ್ತದೆ. ಸುದ್ದಿಯ ಗ್ರಾಹಕರಿಗೆ ಒಂದು ಸುದ್ದಿಯನ್ನು ಅದು ಸತ್ಯವೋ ಸುಳ್ಳೋ ಎಂದು ಹೇಗೆ ಪರೀಕ್ಷಿಸುವುದು ಎಂದು ತಿಳಿಸಿಕೊಡುವ ಮೂಲಕ ಅವರನ್ನು ಎಜುಕೇಟ್ ಮಾಡುವುದೇ ಸುಳ್ಳು ಸುದ್ದಿಯನ್ನು ತಡೆಯುವ ಮೂರನೆಯ ಕ್ರಮ.

ಸುಳ್ಳು ಸುದ್ದಿಯ ಸಮಸ್ಯೆಯನ್ನು ಮೂಲದಲ್ಲೇ ಪರಿಹರಿಸುವ ಪ್ರಯತ್ನವಾಗಿ ಸುಳ್ಳು ಸುದ್ದಿಯ ‘ಮೂಲ’ವನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತದೆ. ಆದರೆ ಖಾಸಗಿತನ ಮತ್ತು ವಾಕ್ ಸ್ವಾತಂತ್ರ್ಯ ಪ್ರಶ್ನೆಗಳು ಇಲ್ಲಿ ಎದುರಾಗುತ್ತವೆ ಮತ್ತು ಭಿನ್ನಮತವನ್ನು ಅಡಗಿಸಲು, ಹತ್ತಿಕ್ಕಲು ಸರಕಾರಗಳು ಸುದ್ದಿಯ ‘ಮೂಲ’ವನ್ನು ಬಳಸಿಕೊಳ್ಳುತ್ತವೆ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ. ಮೇಲೆ ಹೇಳಲಾದ ಮೂರು ಕ್ರಮಗಳು ಮುಖ್ಯವಾದರೂ ಕೂಡ ಇಲ್ಲಿ ಕೆಲವು ಅಡೆತಡೆಗಳಿವೆ. ಮೊದಲನೆಯದಾಗಿ ಸುಳ್ಳು ಸುದ್ದಿಯ ನಿರಾಕರಣೆ ಎಂಬುದು ಚಲಿಸುತ್ತಿರುವ ಒಂದು ಗುರಿಗೆ ಹೊಡೆದಂತೆ: ನೀವು ಗುರಿಗೆ ಹೊಡೆಯುತ್ತಿರುವಾಗಲೇ ಇನ್ನಷ್ಟು ಸುಳ್ಳು ಸುದ್ದಿಯನ್ನು ಸೃಷ್ಟಿಸಲಾಗಿರುತ್ತದೆ ಎರಡನೆಯದಾಗಿ ಸುದ್ದಿಯ ನಿರಾಕರಣೆಯ ಬಳಿಕವೂ ಸುಳ್ಳು ಸುದ್ದಿಯನ್ನು ಸಂಪೂರ್ಣವಾಗಿ ಕಿತ್ತು ಹಾಕುವುದು ಅಸಾಧ್ಯ. ಸುದ್ದಿ ಪ್ರಸಾರದ ವಿಕೇಂದ್ರಿತ ಸ್ವರೂಪವೇ ಇದಕ್ಕೆ ಕಾರಣ. ಅಲ್ಲದೆ ಭಾರತದಲ್ಲಿ ಸುಳ್ಳು ಸುದ್ದಿಯನ್ನು ಸೃಷ್ಟಿಸಿ ಹರಡುವ ಬಲಪಂಥೀಯ ಪ್ರಚಾರಕರು ಇತರರಿಗಿಂತ ಹೆಚ್ಚು ಉತ್ತಮವಾಗಿ ಸಂಘಟಿತರಾಗಿದ್ದರೆ. ವಿಶೇಷವಾಗಿ ವಾಟ್ಸ್ ಆ್ಯಪ್‌ನಂತಹ ಸಂದೇಶ ಪ್ರಸಾರಕ ವೇದಿಕೆಗಳಲ್ಲಿ ಅವರು ಉದಾರವಾದಿ ಪಕ್ಷಗಳಿಗಿಂತ ಹೆಚ್ಚು ಉತ್ತಮವಾಗಿ ಸಂಘಟಿತ ತಂಡವಾಗಿದ್ದಾರೆ.

ಅದೇನಿದ್ದರೂ, ಈ ವಿಧಾನದ ಅತ್ಯಂತ ದೊಡ್ಡ ಕೊರತೆ ಅಂದರೆ ಸುದ್ದಿಯ ನಿರಾಕರಣೆ ಮೂಲ ಚೌಕಟ್ಟಿಗೆ ಮಾತ್ರ ಸೀಮಿತವಾಗಿರುತ್ತದೆ. ನಿರಾಕರಣೆಯ ಹಂತಕ್ಕೂ ಮೊದಲೇ ಸುಳ್ಳು ಸುದ್ದಿಯ ರಾಜಕೀಯ ಪರಿಣಾಮ ಅದಾಗಲೇ ಸಾಕಷ್ಟು ಆಗಿರುತ್ತದೆ. ವಿಷಯಗಳ ಸಂಕೀರ್ಣತೆ ಹೆಚ್ಚುತ್ತಲೇ ಇರುವಾಗ ಯಾರಿಗೇ ಆದರೂ ಒಂದು ವಿಷಯದ ಎಲ್ಲ ಮಗ್ಗುಲುಗಳನ್ನು ಎಲ್ಲ ಆಯಾಮಗಳನ್ನು ಸಂಶೋಧಿಸಿ ಒಂದು ನಿಲುವು ತೆಗೆದುಕೊಳ್ಳುವುದು ಸುಲಭ ಸಾಧ್ಯವಲ್ಲ. ಸುಳ್ಳು ಸುದ್ದಿಯಾಗಲಿ ಇತರ ಯಾವುದೇ ಸುದ್ದಿಯಾಗಲಿ, ಅದು ತನ್ನ ನಂಬಿಕೆಗೆ ಅನುಗುಣವಾಗಿ ಇದ್ದಾಗ ವ್ಯಕ್ತಿ ಅದನ್ನು ಸ್ವೀಕರಿಸಿ, ಒಪ್ಪಿಕೊಂಡು ಕೂಡಲೇ ಇತರರೊಂದಿಗೆ ಶೇರ್ ಮಾಡಿಬಿಡುತ್ತಾನೆ. ಜನರು ಒಂದು ಸುದ್ದಿಯ ಹಿಂದಿರುವ ಸತ್ಯವನ್ನು ಕಂಡು ಹಿಡಿಯುವುದಕ್ಕೆ ಬದಲಾಗಿ ತಮ್ಮ ಆದ್ಯತೆಯ, ತಾವು ಇಷ್ಟ ಪಡುವ ಸುದ್ದಿಯನ್ನು ಬೆಂಬಲಿಸುವ ಪುರಾವೆಗಾಗಿ ತಡಕಾಡುತ್ತಾರೆ ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ಆದ್ದರಿಂದ ಸುಳ್ಳು ಅಥವಾ ಸತ್ಯ ಕಥಾನಕಗಳ ನಡುವಿನ ಯುದ್ಧವನ್ನು ಕೊನೆಗೊಳಿಸದಿದ್ದಲ್ಲಿ ಒಂದು ಸುದ್ದಿ ಸುಳ್ಳೆಂದು ವಾದಿಸುವುದರಿಂದ ಹೆಚ್ಚಿನ ಉಪಯೋಗವೇನೂ ಆಗುವುದಿಲ್ಲ ಯಾಕೆಂದರೆ ಒಂದು ನಿರ್ದಿಷ್ಟ ಸುದ್ದಿ ಸುಳ್ಳೆಂದು ನಾವು ಸಾಬೀತು ಪಡಿಸುವಷ್ಟರಲ್ಲಿ ಸುಳ್ಳು ಸುದ್ದಿ ಹರಡುವಾತ ಅದೇ ರೀತಿಯ ಇನ್ನೊಂದು ಸುಳ್ಳನ್ನು ಆ ಜಾಗದಲ್ಲಿ ಇಟ್ಟಿರುತ್ತಾನೆ.

ಆದ್ದರಿಂದ ಸುಳ್ಳು ಸುದ್ದಿ ಬೀರುವ ಪರಿಣಾಮದ ಬಗ್ಗೆ ನಾವು ಕಾಳಜಿ ಉಳ್ಳವರಾದರೆ ನಿರ್ದಿಷ್ಟ ಸುದ್ದಿಗಳನ್ನು ನಿರಾಕರಿಸುವ ಬದಲಾಗಿ ಆ ಸುದ್ದಿಗಳ ತಳದಲ್ಲಿರುವ ಕಥಾನಕಗಳನ್ನು ಪರಿಗಣಿಸಬೇಕು. ಇದನ್ನು ಎರಡು ರೀತಿಯಲ್ಲಿ ಮಾಡಬಹುದು: ಮೊದಲನೆಯದಾಗಿ ಸುಳ್ಳು ಸುದ್ದಿಯ ಕಥಾನಕವೊಂದು ಯಾವ ದೌರ್ಬಲ್ಯದಿಂದಾಗಿ ಮೊಳಕೆಯೊಡೆಯುತ್ತದೆ ಎಂಬುದನ್ನು ಪತ್ತೆ ಹಚ್ಚುವುದು.

ಉದಾಹರಣೆಗೆ, ಬಲಪಂಥೀಯ ಕಥಾನಕಗಳು ಸುಳ್ಳು ಸುದ್ದಿಯಿಂದಾಗಿ ಹರಡಲು ಕಾರಣ ಉದಾರವಾದಿಗಳ ವಿಶ್ವಾಸಾರ್ಹತೆ ನಷ್ಟವಾಗಿರುವುದು ಆಗಿದೆ. ಉದಾರವಾದಿಗಳ ಶಿಬಿರವೆಂದರೆ ಅದು ಮೇಲ್ವರ್ಗದವರ ಮತ್ತು ಭ್ರಷ್ಟರ ಶಿಬಿರವೆಂಬ ಭಾವನೆ ಸಾಮಾನ್ಯವಾಗಿದೆ. ನಷ್ಟವಾಗಿರುವ ಈ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸುವುದು ಬಹಳ ಮುಖ್ಯ.

ಎರಡನೆಯದಾಗಿ ನಾವು ಸುಳ್ಳು ಸುದ್ದಿಯನ್ನು ಅಪ್ರಸ್ತುತಗೊಳಿಸುವಂತಹ ಒಂದು ಬದಲಿ ಕಥಾನಕದ ಸುತ್ತ ಜನಾಭಿಪ್ರಾಯವನ್ನು ರೂಪಿಸಬೇಕು. ಬಹುತೇಕ ಜನರು ತಮ್ಮ ತಲೆಯಲ್ಲಿ ಬಹಳಷ್ಟು ಸುದ್ದಿಗಳನ್ನು ಹೊರಲಾರರು ಆದ್ದರಿಂದ ಎದುರಾಳಿಯ ಕಥೆಯನ್ನು ಛಿದ್ರಗೊಳಿಸುವ ಬದಲು ಸತ್ಯ ವಿಷಯಗಳನ್ನಾಧರಿಸಿದ ಒಂದು ಭಿನ್ನ ಕಥಾನಕವನ್ನು ಅಲ್ಲಿ ಇಡುವುದು ಉತ್ತಮ. ಅಂತಿಮವಾಗಿ ಎಲ್ಲ ಸುದ್ದಿಗಳಿರುವುದು ಒಂದು ರಾಜಕೀಯ ಅಜೆಂಡಾಕ್ಕಾಗಿ. ಆದ್ದರಿಂದ ಒಂದು ನಿರ್ದಿಷ್ಟ ಸುಳ್ಳು ಸುದ್ದಿಯ ಬದಲು ವ್ಯಾಪಕವಾದ ದೊಡ್ಡದಾದ ಒಂದು ರಾಜಕೀಯ ಕಥಾನಕದ ಮೇಲೆ ನಮ್ಮ ಗಮನ ಕೇಂದ್ರಿತವಾಗಬೇಕು.

ಕೃಪೆ: ದಿ ಹಿಂದೂ     

Writer - ರುಚಿ ಗುಪ್ತಾ

contributor

Editor - ರುಚಿ ಗುಪ್ತಾ

contributor

Similar News