ಪಿಎಂಸಿ ಬ್ಯಾಂಕ್ ಮೇಲೆ ಆರ್ ಬಿಐ ನಿರ್ಬಂಧಗಳ ಬೆನ್ನಲ್ಲೇ ಬ್ಯಾಂಕ್ ‍ನ ಬಿಜೆಪಿ ನಂಟು ಬಹಿರಂಗ

Update: 2019-09-26 06:58 GMT

ಮುಂಬೈ, ಸೆ.26: ದೇಶದ ಹತ್ತು ಪ್ರಮುಖ ಸಹಕಾರಿ ಬ್ಯಾಂಕುಗಳಲ್ಲೊಂದಾಗಿರುವ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್ (ಪಿಎಂಸಿ ಬ್ಯಾಂಕ್)ನಲ್ಲಿ ಅವ್ಯವಹಾರ ನಡೆದಿರುವ ಶಂಕೆಯಲ್ಲಿ ಬ್ಯಾಂಕಿನ ವಹಿವಾಟುಗಳ ಮೇಲೆ ಆರ್ ಬಿಐ ಆರು ತಿಂಗಳ ಅವಧಿಗೆ ನಿಯಂತ್ರಣ ಹೇರಿ, ಗ್ರಾಹಕರನ್ನು ಕಂಗಾಲಾಗಿಸಿದ ಬೆಳವಣಿಗೆಯ ಮರುದಿನವೇ ಈ ಬ್ಯಾಂಕಿನ  ಹನ್ನೆರಡು ಮಂದಿ ನಿರ್ದೇಶಕರ ಪೈಕಿ ಹೆಚ್ಚಿನವರಿಗೆ ಬಿಜೆಪಿ ಜತೆ ನಂಟಿರುವುದು ಬೆಳಕಿಗೆ ಬಂದಿದೆ.

ಬ್ಯಾಂಕ್‍ ನ ಸಹ ನಿರ್ದೇಶಕರುಗಳ ಪೈಕಿ ಒಬ್ಬರಾಗಿರುವ ರಾಜನೀತ್ ಸಿಂಗ್ ಎಂಬವರು ಮುಲುಂದ್ ಕ್ಷೇತ್ರದಿಂದ ಬಿಜೆಪಿಯಿಂದ ನಾಲ್ಕು ಬಾರಿ ಗೆದ್ದಿರುವ ಸರ್ದಾರ್ ತಾರಾ ಸಿಂಗ್ ಅವರ ಪುತ್ರನಾಗಿದ್ದಾರೆ. ರಾಜನೀತ್ ಕೂಡ ಬಿಜೆಪಿ ಸದಸ್ಯರಾಗಿದ್ದು, ತಮ್ಮ 75 ವರ್ಷದ ತಂದೆಯ ಬದಲು ತಾವೇ ಈ ಬಾರಿ ಮುಲುಂದ್ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. 2017ರಲ್ಲಿ ನಡೆದ ಬಿಎಂಸಿ ಚುನಾವಣೆ ವೇಳೆ ಕೂಡ ರಾಜನೀತ್ ಮುಲುಂದ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸಿದ್ದರೂ  ಆಗಿನ ಬಿಜೆಪಿ ಸಂಸದ  ಕಿರಿತ್ ಸೋಮಯ್ಯ ಅವರ ಪುತ್ರ ನೀಲ್ ಸೋಮಯ್ಯಗೆ ಟಿಕೆಟ್ ದಕ್ಕಿತ್ತು.

ಕಳೆದ 13 ವರ್ಷಗಳ ಅವಧಿಯಲ್ಲಿ ರಾಜನೀತ್ ಬ್ಯಾಂಕಿನ ನಿರ್ದೇಶಕರಾಗಿರುವುದು ಇದು ಮೂರನೇ ಅವಧಿಗೆ. “ನಾನು ಬ್ಯಾಂಕ್‍ ನ ದೈನಂದಿನ ವ್ಯವಹಾರಗಳಲ್ಲಿ ಭಾಗಿಯಾಗಿಲ್ಲ ಹಾಗೂ ಯಾವುದೇ ಸಾಲ ನೀಡಿಕೆಯ ಕುರಿತು ಕೂಡ ನನಗೆ ತಿಳಿದಿಲ್ಲ.  ಠೇವಣಿದಾರರು ಹಿಂಪಡೆಯಬಹುದಾದ  ಮೊತ್ತದ ಮಿತಿಯನ್ನು ಹೆಚ್ಚಿಸುವಂತೆ ಆರ್‍ ಬಿಐಗೆ ಮನವಿ ಮಾಡುತ್ತಿದ್ದೇವೆ. ಗ್ರಾಹಕರು ಗಾಬರಿಗೊಳ್ಳುವುದು ಅಗತ್ಯವಿಲ್ಲ'' ಎಂದು ಅವರು ಹೇಳಿದ್ದಾರೆ.

ಬ್ಯಾಂಕ್ ಬಳಿ ಸಾಕಷ್ಟು ಸೊತ್ತುಗಳಿದ್ದು ಹಾಗೂ ಅದು ‘ಲಾಭದಲ್ಲಿದೆ' ಎಂದು ಅವರು ಹೇಳಿಕೊಂಡರು. ಆದರೆ ಬ್ಯಾಂಕ್ ಬಳಿ ರೂ 11,000 ಕೋಟಿಯಷ್ಟು ಠೇವಣಿಗಳು ಮಾತ್ರ  ಉಳಿದಿವೆ ಎಂದು ಕೆಲ ವರದಿಗಳು ಹೇಳಿವೆ.

ಅತ್ತ ರಾಜನೀತ್ ತಂದೆ, ಶಾಸಕ ಸರ್ದಾರ್ ತಾರಾ ಸಿಂಗ್ ಕೂಡ ತಮ್ಮ ಪುತ್ರ ಅಥವಾ ಬ್ಯಾಂಕ್ ನ ಇತರ ಯಾವುದೇ ನಿರ್ದೇಶಕರಿಗೂ ಸಾಲ ನೀಡಿಕೆಗೂ ಸಂಬಂಧವಿಲ್ಲ. ``ಆತ (ರಾಜನೀತ್) ಕೇವಲ ಒಬ್ಬ ನಿರ್ದೇಶಕ. ಸಾಲ ನೀಡಿಕೆ ವಿಚಾರ ಬ್ಯಾಂಕ್ ಮ್ಯಾನೇಜರ್ ಮಟ್ಟದಲ್ಲಿ ನಿರ್ವಹಿಸಲಾಗುತ್ತದೆ'' ಎಂದಿದ್ದಾರೆ.

ಆದರೆ ಬ್ಯಾಂಕ್ ನಿರ್ದೇಶಕರೂ ಸಮಾನವಾಗಿ ಜವಾಬ್ದಾರರು ಎಂದು ಕಾಂಗ್ರೆಸ್ ಹೇಳಿಕೊಂಡಿದೆ. “ಬ್ಯಾಂಕ್‍ನ ಹೆಚ್ಚಿನ ನಿರ್ದೇಶಕರಿಗೆ ಬಿಜೆಪಿ ಜತೆ ನಂಟಿದೆ. ಗ್ರಾಹಕರ ಕಷ್ಟಗಳಿಗೆ ಅವರೇ ಜವಾಬ್ದಾರಿ. ಅವರು  ಸಾಲ ವಾಪಸ್ ನೀಡದ ರಿಯಲ್ ಎಸ್ಟೇಟ್ ಕಂಪೆನಿಗಳಿಗೆ ಸಾಲ ನೀಡಿದ್ದಾರೆ ಹಾಗೂ ಆಡಿಟ್ ವರದಿಗಳನ್ನು ತಿರುಚಿದ್ದಾರೆ. ಖಾತೆಗಳಿಂದ ಹಣ ವಿದ್‍ ಡ್ರಾ ಮಾಡಲು ಗ್ರಾಹಕರಿಗೆ ಹೇರಿರುವ ನಿರ್ಬಂಧವನ್ನು ಕೈಬಿಡಬೇಕು'' ಎಂದು ನಗರ ಕಾಂಗ್ರೆಸ್ ಘಟಕದ ಮಾಜಿ ಮುಖ್ಯಸ್ಥ ಸಂಜಯ್ ನಿರುಪಮ್ ಹೇಳಿದ್ದಾರೆ.

ಬ್ಯಾಂಕ್ ನ ಅನುತ್ಪಾದಕ ಸಾಲಗಳ ಕುರಿತಂತೆ ತಪ್ಪು ಮಾಹಿತಿ ಹಾಗೂ ದಿವಾಳಿಯಾಗಿರುವ  ಎಚ್‍ಡಿಐಎಲ್ ಗೆ ರೂ 2,500 ಕೋಟಿ ಸಾಲ ನೀಡಿಕೆಯೇ  ಬ್ಯಾಂಕ್ ವಿರುದ್ಧ ನಿರ್ಬಂಧಗಳಿಗೆ ಕಾರಣ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News