×
Ad

ಎಸ್ಸಿ-ಎಸ್ಟಿಗೆ ಮೀಸಲಾತಿ ಹೆಚ್ಚಿಸಲು ಒತ್ತಾಯಿಸಿ ದಸಂಸ ಧರಣಿ

Update: 2019-09-26 18:36 IST

ಬೆಂಗಳೂರು, ಸೆ. 26: ಎಸ್ಸಿಗೆ ಶೇ.18ರಷ್ಟು ಹಾಗೂ ಎಸ್ಟಿಗೆ ಶೇ.7ರಷ್ಟು ಮೀಸಲಾತಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ಸದಸ್ಯರು ಪ್ರತಿಭಟನೆ ನಡೆಸಿದರು.

ಗುರುವಾರ ನಗರದ ಮೌರ್ಯ ಹೊಟೇಲ್ ಬಳಿಯ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀ ನಾರಾಯಣ ನಾಗವಾರ, ಪರಿಶಿಷ್ಟ ಜಾತಿಗೆ ಮೀಸಲಾತಿ ಪ್ರಮಾಣ ಶೇ.15ರಷ್ಟಿದ್ದು, ಅದು ಶೇ.18ರಷ್ಟು ಹೆಚ್ಚಿಸಬೇಕು. ಪಂಗಡಕ್ಕೆ ಶೇ.3ರಷ್ಟು ಮೀಸಲಾತಿ ಇದ್ದು, ಅದನ್ನು ಶೇ.7ರಷ್ಟು ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ಕೆಲವರು ಸಂವಿಧಾನ ಮತ್ತು ಮೀಸಲಾತಿಯನ್ನು ಪರಾಮರ್ಶಿಸಬೇಕೆಂಬ ಕೇಳಿಕೆ ನೀಡುತ್ತಿದ್ದು, ಇದು ಪ್ರಜಾಪ್ರಭುತ್ವದ ವಿರೋಧಿ ಧೋರಣೆಯಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಮೇಲೆ ಶೋಷಣೆ ನಡೆಯುತ್ತಿದ್ದು, ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದ್ದಾರೆ. ಆದರೂ, ಮೀಸಲು ಪರಾಮರ್ಶಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಇನ್ನು, ರಾಜ್ಯದ ನೆರೆ ಪರಿಹಾರಕ್ಕಾಗಿ ಎಸ್‌ಟಿಪಿ ಮತ್ತು ಟಿಎಸ್‌ಪಿ ಹಣ ಬಳಸಲು ರಾಜ್ಯ ಸರಕಾರ ಪ್ರಯತ್ನಿಸುತ್ತಿದ್ದು, ಈ ಅನುದಾನ ಎಸ್‌ಸಿ, ಎಸ್‌ಟಿ ಜನರ ಅಭಿವೃದ್ಧಿಗೆ ಬಳಸಬೇಕು. ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಎಲ್ಲಾ ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ಗ್ರೂಪ್ ಸಿ ಮತ್ತು ಡಿ ದರ್ಜೆ ನೌಕರರನ್ನು ಕೂಡಲೇ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿಯ ಬೆಂಗಳೂರು ವಿಭಾಗದ ಸಂಚಾಲಕ ಜೀವನಹಳ್ಳಿ ಆರ್.ವೆಂಕಟೇಶ್ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಎಲ್ಲಾ ನಿಗಮ ಮಂಡಳಿಗಳಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿರುವ ಎಲ್ಲಾ ಅರ್ಹ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಬೇಕು. ಖಾಸಗಿ ಕ್ಷೇತ್ರದಲ್ಲಿ ಎಸ್‌ಸಿ, ಎಸ್‌ಟಿ ನಿರುದ್ಯೋಗಿಗಳಿಗೆ ಮೀಸಲಾತಿ ನೀಡಬೇಕು ಎಂದು ಮನವಿ ಮಾಡಿದರು.

ಸರಕಾರಿ ಭೂಮಿಯಲ್ಲಿ ಅಕ್ರಮ ಸಾಗುವಳಿದಾರರ ಫಾರಂ 57ರಲ್ಲಿ ಸಕ್ರಮೀಕರಣಕ್ಕೆ ಅರ್ಜಿ ಸಲ್ಲಿಸಲು ಕಂದಾಯ ಇಲಾಖೆ ಅವಕಾಶ ನೀಡಬೇಕು. ಬಿಬಿಎಂಪಿ, ನಗರಸಭೆ, ಪಟ್ಟಣ ಪಂಚಾಯಿತಿ ಸೇರಿ ಸ್ಥಳೀಯ ಪಂಚಾಯಿತಿಗಳು ಶೇ.22.7ರಷ್ಟು ಅನುದಾನವನ್ನು ಸಮರ್ಪಕವಾಗಿ ಬಳಸಬೇಕು ಒತ್ತಾಯಿಸಿದರು.

ಬ್ರಿಟೀಷರ ವಿರುದ್ಧ ಹೋರಾಡುವಾಗ ತನ್ನ ಮಕ್ಕಳನ್ನೇ ಒತ್ತೆ ಇಟ್ಟು ದೇಶ ಪ್ರೇಮ ಮೆರೆದಿದ್ದ ಟಿಪ್ಪು ಸುಲ್ತಾನರ ಗೌರವಾರ್ಥ ಘೋಷಿಸಿದ್ದ ಟಿಪ್ಪು ಜಯಂತಿಯನ್ನು ಬಿಜೆಪಿ ಸರಕಾರ ರದ್ದುಪಡಿಸಿತು; ಈಗ ಬಡವರಿಗೆ ಅಪಾರ ಅನುಕೂಲವಾಗಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಕೊಕ್ಕೆ ಹಾಕುತ್ತಿದೆ.

-ಲಕ್ಷ್ಮೀ ನಾರಾಯಣ ನಾಗವಾರ, ದಸಂಸದ ರಾಜ್ಯ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News