'ಕೈ' ಶಾಸಕರ ಕ್ಷೇತ್ರಗಳಿಗೆ ನೀಡಿದ್ದ ಅನುದಾನ ಕಡಿತ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Update: 2019-09-26 14:10 GMT

ಬೆಂಗಳೂರು, ಸೆ.26: ನಗರದಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ನೀಡಿದ್ದ ಅನುದಾನ ಕಡಿತಗೊಳಿಸಿ ಬಿಜೆಪಿ ಶಾಸಕರಿಗೆ ಅನುದಾನ ಹಂಚಿಕೆ ಮಾಡಿರುವುದನ್ನು ಖಂಡಿಸಿ ಮಾಜಿ ಸಚಿವ ಹಾಗೂ ಶಾಸಕ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಗುರುವಾರ ನಗರದ ಪುರಭವನದ ಮುಂಬಾಗದಲ್ಲಿ ಜಮಾಯಿಸಿದ್ದ ನೂರಾರು ಜನ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅನುದಾನ ಕಡಿತ ಮಾಡುವ ಮೂಲಕ ರಾಜ್ಯ ಸರಕಾರ ಪ್ರತೀಕಾರದ ರಾಜಕಾರಣ ನಡೆಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ರಾಮಲಿಂಗಾರೆಡ್ಡಿ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷ ರಾಜಕಾರಣ ಮಾಡುವುದು ಬಿಡಬೇಕು. ಪಕ್ಷಾತೀತವಾಗಿ ಎಲ್ಲ ಶಾಸಕರ ಕ್ಷೇತ್ರಗಳಿಗೂ ಸಮಗ್ರವಾದ ಅನುದಾನ ಹಂಚಿಕೆ ಮಾಡಬೇಕು. ಈ ಹಿಂದೆ ನಾನು ಉಸ್ತುವಾರಿ ಸಚಿವನಾಗಿದ್ದ ವೇಳೆ ಎಲ್ಲರಿಗೂ ಪಕ್ಷಾತೀತವಾಗಿ ಅನುದಾನ ಹಂಚಿಕೆ ಮಾಡಿದ್ದೇವೆ. ಆದರೆ, ಈಗಿರುವ ಸರಕಾರ ತಾರತಮ್ಯ ಮಾಡುತ್ತಿದೆ ಎಂದರು. ಹಿಂದಿನ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಬೆಂಗಳೂರಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ನೀಡಿದ್ದ ಅನುದಾನವನ್ನು ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಸ್ಥಗಿತಗೊಳಿಸಿದೆ. ಅಲ್ಲದೆ, ಬಿಬಿಎಂಪಿ ಸದಸ್ಯರಿಗೆ ನೀಡಿದ್ದ ಅನುದಾನವನ್ನೂ ಹಿಂಪಡೆದು ಬಿಜೆಪಿ ಶಾಸಕರು ಹಾಗೂ ಸದಸ್ಯರಿಗೆ ಹಂಚಿಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಬಿಜೆಪಿ ಸರಕಾರಕ್ಕೆ ಅಗತ್ಯವಿದ್ದಲ್ಲಿ ಹೆಚ್ಚುವರಿ ಅನುದಾನ ನೀಡುವ ಮೂಲಕ ಅಧಿಕ ಪಾಲು ಬಿಜೆಪಿ ಶಾಸಕರಿಗೆ ನೀಡಬೇಕಿತ್ತು. ಆದರೆ, ಹಿಂದಿನ ಸರಕಾರ ನೀಡಿದ್ದ ಅನುದಾನವನ್ನು ಹಿಂಪಡೆದಿರುವುದು ಸರಿಯಲ್ಲ. ನಗರದಲ್ಲಿರುವ 10 ಬಿಜೆಪಿ ಶಾಸಕರ ಕ್ಷೇತ್ರಗಳಿಗೆ 3449 ಕೋಟಿ ರೂ.ಗಳು ನೀಡಿದ್ದಾರೆ. ಸಮ್ಮಿಶ್ರ ಸರಕಾರ ಉರುಳಿಸಲು ಶ್ರಮಿಸಿದ ನಗರದ ಐದು ಅನರ್ಹ ಶಾಸಕರ ಕ್ಷೇತ್ರಗಳಿಗೆ 1671 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ದೂರಿದರು.

ಬಿಜೆಪಿಯ ಶಾಸಕರು ಹಾಗೂ ಕೆಲವು ಮುಖಂಡರು ಮಹಾನಗರ ಪಾಲಿಕೆಯ ಕೊಠಡಿಯೊಂದರಲ್ಲಿ ಕುಳಿತುಕೊಂಡು ತಮಗೆ ಬೇಕಾದಷ್ಟು ಅನುದಾನವನ್ನು ಹಂಚಿಕೊಂಡಿದ್ದಾರೆ. ಈ ಸಂಬಂಧ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಸುದೀರ್ಘವಾಗಿ ಚರ್ಚೆ ಮಾಡಲಾಗುವುದು. ಬಿಜೆಪಿಯ ಅಕ್ರಮಗಳನ್ನು ಬಯಲಿಗಿಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ನಗರದಲ್ಲಿ 28 ಕ್ಷೇತ್ರಗಳಿದ್ದು, 28 ಶಾಸಕರಿದ್ದಾರೆ. ಎಲ್ಲರಿಗೂ ಸಮಗ್ರವಾಗಿ ಅನುದಾನ ಹಂಚಿಕೆ ಮಾಡಬೇಕಿರುವುದು ಮುಖ್ಯಮಂತ್ರಿಯ ಕರ್ತವ್ಯ. ಆದರೆ, ಯಡಿಯೂರಪ್ಪ ಹಿಂದೆ ನೀಡಿದ್ದ ಅನುದಾನವನ್ನು ಕಡಿತಗೊಳಿಸಿ, ಅದನ್ನು ಬಿಜೆಪಿ ಶಾಸಕರಿಗೆ ಹಂಚಿಕೆ ಮಾಡಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದು ಹೇಳಿದರು.

ಹಿಂದಿನ ಯಡಿಯೂರಪ್ಪ ಸರಕಾರದ ಅವಧಿಯಲ್ಲಿ ಪಾಲಿಕೆಯ ಸಾರ್ವಜನಿಕ ಆಸ್ತಿಗಳನ್ನು ಅಡವಿಟ್ಟಿದ್ದರು. ಅದನ್ನು ಸಮ್ಮಿಶ್ರ ಆಡಳಿತದಲ್ಲಿ ಬಿಡುಗಡೆ ಮಾಡಲಾಗಿದೆ ಎಂದ ಅವರು, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾತನಾಡುವವರನ್ನು ಜೈಲಿಗೆ ಹಾಕಿಸಲಾಗುತ್ತಿದೆ. ತಮ್ಮ ಪರವಾಗಿದ್ದವರನ್ನು ಜೈಲಿನಿಂದ ಬಿಡಿಸಿ, ಅಧಿಕಾರಕ್ಕೇರಿಸಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.

ದಾಸರಹಳ್ಳಿ ಕ್ಷೇತ್ರಕ್ಕೆ 528 ಕೋಟಿಯಿಂದ 57 ಕೋಟಿಗೆ, ಜಯನಗರದಲ್ಲಿ 316 ರಿಂದ 152 ಕೋಟಿ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಅನುದಾನ ಕಡಿತ ಮಾಡಲಾಗಿದೆ. ಇದು ಸಲ್ಲ ಎಂದ ಅವರು, ಪ್ರಧಾನಿ ಮೋದಿ ನೆರೆ ಹಾಗೂ ಬರ ಪರಿಹಾರಕ್ಕೆ ನಯಾಪೈಸೆ ಖರ್ಚು ಮಾಡಲಿಲ್ಲ. ಆದರೆ, ಅಮೆರಿಕದಲ್ಲಿ 500 ಕೋಟಿ ಖರ್ಚು ಮಾಡಿಸಿ ಹೌಡಿ ಮೋದಿ ಕಾರ್ಯಕ್ರಮ ಮಾಡಿದ್ದಾರೆ ಎಂದು ಹರಿಪ್ರಸಾದ್ ತಿಳಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಕೃಷ್ಣಪ್ಪ, ಅಬ್ದುಲ್ ವಾಜಿದ್, ಉದಯ ಶಂಕರ್ ಸೇರಿದಂತೆ ಹಲವರಿದ್ದರು.

ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿಯ ದುರ್ಬಳಕೆಗೆ ಒಪ್ಪದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಯಾವುದೇ ಹುದ್ದೆ ತೋರಿಸದೆ, ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯದರ್ಶಿ ಸ್ಥಾನದಿಂದ ಎತ್ತಂಗಡಿ ಮಾಡಲಾಗಿದೆ. ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಮೀಸಲಿಟ್ಟ ಹಣ ಲಪಟಾಯಿಸಲು ರಾಜ್ಯ ಸರಕಾರ ಮುಂದಾಗಿರುವುದು ಆಕ್ಷೇಪಾರ್ಹ.

-ಬಿ.ಕೆ.ಹರಿಪ್ರಸಾದ್, ರಾಜ್ಯಸಭಾ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News