ದೇಶದ ನೈತಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನ: ಎಚ್.ಡಿ.ಕುಮಾರಸ್ವಾಮಿ

Update: 2019-09-26 14:39 GMT

ಬೆಂಗಳೂರು, ಸೆ.26: ಅನರ್ಹ ಶಾಸಕರ ವಿಚಾರದಲ್ಲಿ ಹಾಗೂ ಉಪ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ನಾನು ಚರ್ಚೆ ಮಾಡಲು ಹೋಗುವುದಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಗುರುವಾರ ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಎದುರು ಇದ್ದದ್ದು ಅನರ್ಹ ಶಾಸಕರು ಮತ್ತು ಸ್ಪೀಕರ್ ತೀರ್ಮಾನ ಹಾಗೂ ಅನರ್ಹ ಶಾಸಕರು ಮತ್ತು ಆಯಾ ಪಕ್ಷದ ಅಧ್ಯಕ್ಷರು ಸಲ್ಲಿಸಿದ್ದ ಮನವಿಯ ಅರ್ಜಿಗಳು. ಈ ಹಿನ್ನೆಲೆಯಲ್ಲಿ ವಾದ-ಪ್ರತಿವಾದಗಳು ನಡೆದಿವೆ ಎಂದರು.

ಪ್ರಥಮ ಬಾರಿಗೆ ದೇಶದ ಚುನಾವಣಾ ಆಯೋಗದ ವತಿಯಿಂದ ಒಬ್ಬ ವಕೀಲರು ಸ್ವಯಂಪ್ರೇರಣೆಯಿಂದ ಚುನಾವಣೆ ಮುಂದೂಡಲು ನಾವು ಸಿದ್ಧವಿದ್ದೇವೆ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ. ಇದು ಸಾಂವಿಧಾನಿಕ ಸಂಸ್ಥೆ, ದೇಶದ ವ್ಯವಸ್ಥೆಯ ನೈತಿಕ ಸ್ಥೈರ್ಯ ಕುಗ್ಗಿಸುವ ತೀರ್ಮಾನ ಮಾಡಿದಂತಾಗಿದೆ ಎಂದು ಅವರು ಹೇಳಿದರು.

ದೇಶದ ರಾಜಕೀಯ ಇತಿಹಾಸದಲ್ಲಿ ನ್ಯಾಯಾಲಯವೊಂದು ಇದೇ ಮೊದಲ ಬಾರಿಗೆ ಇಂತಹ ಒಂದು ನಿರ್ಧಾರವನ್ನು ಪ್ರಕಟಿಸಿದೆ. ಚುನಾವಣಾ ಆಯೋಗವು ಕೇಂದ್ರ ಸರಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಯಾರು ಬೇಕಾದರೂ ಊಹಿಸಬಹುದು ಎಂದು ಕುಮಾರಸ್ವಾಮಿ ತಿಳಿಸಿದರು.

ಚುನಾವಣೆ ಮುಂದೂಡಿಕೆಯಲ್ಲಿ ಪ್ರಭಾವ ಬೀರಿದ್ದು ಯಾರು? ಬಿಜೆಪಿ ನಾಯಕರ ಈ ನಡವಳಿಕೆ ಪ್ರಶ್ನಾರ್ಹ. ಬಿಜೆಪಿ ವರಿಷ್ಠರ ಜೊತೆ ನೆರೆ ಬಗ್ಗೆ ಚರ್ಚೆ ಮಾಡಲು ಸಮಯ ಸಿಗುವುದಿಲ್ಲ. ಆದರೆ, ಚುನಾವಣೆ ಘೋಷಣೆ ಆದ ತಕ್ಷಣ ಮುಖ್ಯಮಂತ್ರಿ ದಿಲ್ಲಿಗೆ ಹೋಗುತ್ತಾರೆ ಎಂದು ಕುಮಾರಸ್ವಾಮಿ ಟೀಕಿಸಿದರು.

ಅನರ್ಹ ಶಾಸಕರಿಂದ ದೈಹಿಕವಾಗಿ ಹಲ್ಲೆ ಮಾಡಿಸಿಕೊಳ್ಳುವಂತಹ ಹಂತಕ್ಕೆ ಮುಖ್ಯಮಂತ್ರಿ ತಲುಪಿದ್ದರು. ಹೀಗಾಗಿ ತರಾತುರಿಯಲ್ಲಿ ದಿಲ್ಲಿಗೆ ಹೋಗಿದ್ದರು. ಬಿಜೆಪಿ ನಾಯಕರು ನಡವಳಿಕೆ ಬಗ್ಗೆ ದೇಶದಲ್ಲಿ ಚರ್ಚೆಯಾಗಬೇಕಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News