ಉಪ ಚುನಾವಣೆಗೆ ತಡೆಯಾಜ್ಞೆ: ಕಾನೂನು ತಜ್ಞರ ಜತೆ ಚರ್ಚಿಸಿ ತೀರ್ಮಾನ- ದಿನೇಶ್ ಗುಂಡೂರಾವ್

Update: 2019-09-26 15:01 GMT

ಬೆಂಗಳೂರು, ಸೆ. 26: ‘ಉಪ ಚುನಾವಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಚುನಾವಣಾ ವೇಳಾಪಟ್ಟಿ ಪ್ರಕಟವಾದ ಬಳಿಕ ಈ ತಡೆಯಾಜ್ಞೆ ನೀಡಲಾಗಿದೆ. ಹಾಗಾಗಿ ಇದು ಎಷ್ಟು ಸರಿ ಎಂಬುದರ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ, ಮುಂದಿನ ಕಾನೂನಾತ್ಮಕ ಕ್ರಮಗಳ ಸಾಧ್ಯತೆಯ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ‘ಹೊಸ ಸರಕಾರ ರಚನೆ ಆಗಿ, ಹೊಸ ಸ್ಪೀಕರ್ ಬರುತ್ತಾರೆ, ಸುಪ್ರೀಂ ಕೋರ್ಟ್‌ನಲ್ಲಿ ತಮಗೆ ನ್ಯಾಯ ಸಿಗಲಿದೆ, ಉಪ ಚುನಾವಣೆಯಲ್ಲಿ ಗೆದ್ದು ಬಿಡುತ್ತೇವೆ. ಮಂತ್ರಿಗಳಾಗುತ್ತೇವೆ, ಇಂತಹ ಖಾತೆಗಳು ಸಿಗಲಿವೆ ಎಂದು ಅನರ್ಹರು ಕನಸು ಕಾಣುತ್ತಿದ್ದರು. ಈಗ ಎಷ್ಟು ತಿಂಗಳಾಯಿತು? ನ್ಯಾಯಾಲಯದಲ್ಲಿ ಇವರ ಪರ ವಾದ ಏನಾಯ್ತು?’ ಎಂದು ಪ್ರಶ್ನಿಸಿದ್ದಾರೆ.

‘ಸರ್ವೋಚ್ಚ ನ್ಯಾಯಾಲಯಕ್ಕೆ ನಮ್ಮ ವಾದ ಮನವರಿಕೆ ಆಗಿದೆ. ಸ್ಪೀಕರ್ ಅವರ ಆದೇಶವನ್ನು ತಡೆ ಹಿಡಿದಿಲ್ಲ. ತೀರ್ಪಿನ ಗಂಭೀರತೆ ನ್ಯಾಯಾಲಯಕ್ಕೆ ಅರ್ಥವಾಗಿದೆ. ಸ್ವಾರ್ಥಕ್ಕಾಗಿ ಆಮಿಷಗಳಿಗೆ ಬಲಿಯಾಗಿ, ಜನಾದೇಶದ ದುರ್ಬಳಕೆ ಮೂಲಕ ಪಕ್ಷಾಂತರ ಮಾಡುವ ಶಾಸಕರನ್ನು ಅನರ್ಹಗೊಳಿಸುವುದು ಸ್ಪೀಕರ್ ಅಧಿಕಾರ. ಅದನ್ನು ಸ್ಪೀಕರ್ ಮಾಡಿದ್ದಾರೆ’ ಎಂದು ದಿನೇಶ್ ಗುಂಡೂರಾವ್ ಉಲ್ಲೇಖಿಸಿಸದ್ದಾರೆ.

‘ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ. ಅತೃಪ್ತ, ಅನರ್ಹ ಶಾಸಕರ ಸ್ಥಿತಿ ಹಾಗೆಯೇ ಇದೆ. ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬೇಕು, ಸ್ಪೀಕರ್ ಅವರ ಅನರ್ಹತೆಯ ಆದೇಶ ರದ್ದು ಮಾಡಬೇಕು, ರಾಜೀನಾಮೆ ಅಂಗೀಕಾರ ಮಾಡದಿರುವುದು ಸರಿಯಲ್ಲ ಎಂದು ವಾದಿಸಿದ್ದರು. ಈ ಬಗ್ಗೆ ನ್ಯಾಯಾಲಯ ಏನನ್ನೂ ಹೇಳಿಲ್ಲ’

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News