×
Ad

ರಾಜಧಾನಿಯಲ್ಲಿ ನಿಲ್ಲದ ಬೀದಿನಾಯಿಗಳ ಹಾವಳಿ

Update: 2019-09-26 20:45 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.26: ರಾಜಧಾನಿಯಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಪ್ರತಿ ವರ್ಷ ಪಾಲಿಕೆಯು ಕೋಟ್ಯಂತರ ರೂ.ಗಳನ್ನು ಖರ್ಚು ಮಾಡುತ್ತಿದ್ದರೂ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ನಗರ ವ್ಯಾಪ್ತಿಯ ಅನೇಕ ಬಡಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳ ಓಡಾಟ ಅತಿಯಾಗಿದೆ. ಸಮಯ ಮೀರಿದ ನಂತರ ಓಡಾಡಿದರೆ ಕಚ್ಚಬಹುದು ಎಂದು ಸಾರ್ವಜನಿಕರು ಬೀದಿಯಲ್ಲಿ ಓಡಾಡಲು ಹೆದರುವಂತಹ ವಾತಾವರಣ ನಿರ್ಮಾಣವಾಗಿದೆ.

10 ಕೋಟಿ ಖರ್ಚು: ಬಿಬಿಎಂಪಿಯಿಂದ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ಸಲುವಾಗಿ ಕಳೆದ ಎರಡು ವರ್ಷಗಳಿಂದೀಚೆಗೆ 10.38 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. 2017-18 ರಲ್ಲಿ 3.50 ಕೋಟಿ ರೂ.2018-19ರಲ್ಲಿ 5.19 ಕೋಟಿ ರೂ. ಹಾಗೂ 2019-20 ನೆ ಸಾಲಿನ ಜನವರಿಯಿಂದ ಆಗಸ್ಟ್‌ವರೆಗೆ 1.68 ಕೋಟಿ ರೂ.ಗಳು ಖರ್ಚು ಮಾಡಿ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ(ಎಬಿಸಿ) ಹಾಗೂ ರೇಬಿಸ್ ನಿರೋಧಕ ಲಸಿಕೆ ಹಾಕಿಸಲಾಗಿದೆ.

ಫಲಕಾರಿಯಾಗದ ಎಬಿಸಿ: 2017-18 ರಲ್ಲಿ ಸುಮಾರು 34,144 ನಾಯಿಗಳಿಗೆ, 2018-19 ರಲ್ಲಿ 46,151 ನಾಯಿಗಳಿಗೆ, 2019-20 ರ ಆಗಸ್ಟ್‌ವರೆಗೆ 15,991 ಬೀದಿ ನಾಯಿಗಳಿಗೆ ಸಂತಾನ ಶಕ್ತಿಹರಣ(ಎಬಿಸಿ) ಮಾಡಿಸಲಾಗಿದೆ. ಬಿಬಿಎಂಪಿಯಿಂದ ಈ ಸಂಬಂಧ ಟೆಂಡರ್ ಪಡೆದವರು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಎಬಿಸಿ ಕೇಂದ್ರಗಳ ಕೊರತೆ ಇದೆ. ಪಶು ವೈದ್ಯರೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಸದ್ಯ ಅ.15 ರವರೆಗೂ ಶ್ವಾನಗಳ ಗಣತಿ ನಡೆಸಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಬೀದಿನಾಯಿಗಳ ಹಾವಳಿಗೆ ಬ್ರೇಕ್ ಹಾಕಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News