ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಎಐ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ
ಬೆಂಗಳೂರು, ಸೆ.26: ಸಿಲಿಕಾನ್ ಸಿಟಿಯಲ್ಲಿನ ಸಂಚಾರ ದಟ್ಟಣೆ ತಗ್ಗಿಸಲು ಪೊಲೀಸ್ ಇಲಾಖೆ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನದ ಮೊರೆ ಹೋಗಿದ್ದು, ಸರಕಾರದ ಅನುಮತಿ ಸಿಗಬೇಕಿದೆ.
ಸುಗಮ ಸಂಚಾರಕ್ಕೆ ಅನುವು, ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲು ಕೃತಕ ಬುದ್ಧಿಮತ್ತೆ (ಎಐ) ನೆರವಾಗಲಿದ್ದು, ಸಿಗ್ನಲ್ ಗಳಲ್ಲಿ ನಿಂತು ಅನಾರೋಗ್ಯಕ್ಕೀಡಾಗುತ್ತಿದ್ದ ಸಂಚಾರ ಪೊಲೀಸರಿಗೂ ಇದು ಸಹಕಾರಿಯಾಗಲಿದೆ.
ಮೊದಲನೆ ಹಂತದಲ್ಲಿ ನಗರದ ಕೇಂದ್ರ ವಾಣಿಜ್ಯ ಪ್ರದೇಶದ 35 ಸಿಗ್ನಲ್‌ಗಳಲ್ಲಿ ಕೃತಕ ಬುದ್ಧಿಮತ್ತೆ(ಎಐ) ಅಳವಡಿಸಲು ಇಲಾಖೆ ಚಿಂತಿಸಿದ್ದು, ಅದು ಯಶಸ್ವಿಯಾದರೆ ಉಳಿದ ಎಲ್ಲ ಕಡೆಗಳಲ್ಲಿಯೂ ಇದೇ ತಂತ್ರಜ್ಞಾನ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ(ಸಂಚಾರ) ಡಾ.ಬಿ.ಆರ್.ರವಿಕಾಂತೇಗೌಡ ಹೇಳಿದ್ದಾರೆ
ಸಿಗ್ನಲ್ ಗಳಲ್ಲಿ ಎಐಗಳು ವಾಹನಗಳ ಸಂಖ್ಯೆ ಲೆಕ್ಕ ಹಾಕಿ ಮಾಹಿತಿ ಕೇಂದ್ರಕ್ಕೆ ರವಾನಿಸುತ್ತವೆ. ಪ್ರತಿ ಜಂಕ್ಷನ್‌ನಲ್ಲಿ ಎಷ್ಟು ಸಮಯ ನಿಗದಿ ಮಾಡಬೇಕು ಎಂಬ ಸಲಹೆ ನೀಡುತ್ತವೆ. ಪೊಲೀಸರು ಇರುವುದಿಲ್ಲ. ಎಲ್ಲವೂ ಸ್ವಯಂಚಾಲಿತವಾಗಿ ನಡೆಯಲಿದೆ. ವಾಹನಗಳ ಲೆಕ್ಕಾಚಾರ ಮಾಡಿ ಹೆಚ್ಚು ದಟ್ಟಣೆ ಇರುವ ಕಡೆಗೆ ಹಸಿರು ದೀಪ ಸಿಗ್ನಲ್ ನೀಡುತ್ತದೆ.
ಎಲ್ಲ ಕಡೆಗಳಲ್ಲಿ ಅಳವಡಿಸುವ ಎಐ ಕ್ಯಾಮರಾಗಳು ಸಂಚಾರ ದಟ್ಟಣೆಯನ್ನು ಸೆರೆ ಹಿಡಿದು ಕೇಂದ್ರೀಯ ಸಂಸ್ಕರಣಾ ಕೇಂದ್ರಕ್ಕೆ ರವಾನೆ ಮಾಡಲಿದೆ. ಅದನ್ನು ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿ ಯಾವ ಸಿಗ್ನಲ್‌ನಲ್ಲಿ ಎಷ್ಟು ಸಮಯ ನೀಡಬೇಕು ಎಂದು ನಿರ್ಧಾರ ಮಾಡುತ್ತದೆ.
ರಸ್ತೆಯಲ್ಲಿ ವಾಹನ ಬರುವಾಗ ಆಕ್ಟೀವ್ ಮೋಡ್‌ನಲ್ಲಿದ್ದು, ಪ್ರತಿ ವಾಹನಗಳ ಮೇಲೆ ನಿಗಾ ವಹಿಸುತ್ತದೆ. ರೇಡಾರ್ ರೀತಿ ಇನ್ಪಾರೆಡ್ ಕಿರಣಗಳನ್ನು ಹಾಯಿಸಿ ವಾಹನಗಳ ಲೆಕ್ಕ ಹಾಕುತ್ತದೆ.
ರಿಮೋಟ್ ಮೂಲಕ ನಾವು ಕುಳಿತ ಕಡೆಯಿಂದಲೇ ನಿರ್ವಹಣೆ ಮಾಡಬಹುದಾಗಿದ್ದು, ಮಳೆ, ಬಿಸಿಲು, ಚಳಿ ನಿರೋಧಕವಾಗಿದ್ದು, ಮೋಡ ಕವಿದ ವಾತಾವರಣದಲ್ಲಿ ನಿಖರವಾಗಿ ಕೆಲಸ ಮಾಡುವ ಸಾಮರ್ಥ್ಯವಿದೆ. ಇದು ವಿಭಿನ್ನ ಕೊನಗಳಲ್ಲಿ ಸುತ್ತುವ ವ್ಯವಸ್ಥೆಯನ್ನೂ ಹೊಂದಿರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಂಡ ವಿಧಿಸಲು ಅನುಕೂಲ
ಸಿಗ್ನಲ್ ಜಂಪ್, ಅತಿವೇಗ, ಝಿಬ್ರಾ ಲೈನ್ ಕ್ರಾಸ್ ಸೇರಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ನಂಬರ್ ಪ್ಲೇಟ್‌ಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಸಂಚಾರ ನಿರ್ವಹಣಾ ಕೇಂದ್ರಕ್ಕೆ ರವಾನಿಸುತ್ತವೆ. ಇದರ ಮೇಲೆ ದಂಡ ವಿಧಿಸಲು ಪೊಲೀಸರಿಗೆ ಅನುಕೂಲವಾಗಿದೆ ಎಂದು ಅಧಿಕಾರಿಗಳ ಅಭಿಪ್ರಾಯವಾಗಿದೆ.