85ರ ಹರೆಯದ ಹೊಸ್ತಿಲಲ್ಲಿ ಡಾ. ಅಮೃತ ಸೋಮೇಶ್ವರ

Update: 2019-09-26 18:34 GMT

ಅಮೃತರು ಪಡೆದ ಪ್ರಶಸ್ತಿಗಳಲ್ಲಿ ಕೆಲವನ್ನು ಹೆಸರಿಸುವುದಾದರೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡಮಿಯಿಂದ ಜಾನಪದ ತಜ್ಞ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡಮಿಯಿಂದ ಪಾರ್ತಿಸುಬ್ಬ ಪ್ರಶಸ್ತಿ, ತುಳು ಅಕಾಡಮಿ ಪ್ರಶಸ್ತಿ, ಹಲಸಂಗಿ ಗೆಳೆಯರ ಬಳಗದ ಪ್ರಶಸ್ತಿ, ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ, ಡಾ. ಶಿವರಾಮ ಕಾರಂತ ಪ್ರಶಸ್ತಿ, ಕುಕ್ಕಿಲ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ಕು. ಶಿ. ಹರಿದಾಸ ಭಟ್ಟ ಪ್ರಶಸ್ತಿ, ನಿರಂಜನ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಆಕಾಶವಾಣಿ ಪ್ರಶಸ್ತಿ ಮುಂತಾಗಿ 40ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.

ಇಂದು 85ರ ಹರೆಯಕ್ಕೆ ಕಾಲಿಡುತ್ತಿರುವ ಅಮೃತ ಸೋಮೇಶ್ವರರು ದಕ್ಷಿಣ ಕನ್ನಡ ಜಿಲ್ಲೆಯ ಓರ್ವ ಹಿರಿಯ ವಿದ್ವಾಂಸರು. ಕನ್ನಡ, ತುಳು ಸಾಹಿತಿಯಾಗಿ, ಸಂಶೋಧಕರಾಗಿ, ಯಕ್ಷಗಾನ ಪ್ರಸಂಗಕರ್ತರಾಗಿ, ಸಮಾಜಮುಖಿ ಚಂತನೆಯುಳ್ಳ ಓರ್ವ ಸಹೃದಯಿಯಾಗಿ ಅವರು ಕರ್ನಾಟಕದ ಜನರಿಗೆ ಪರಿಚಿತರು. ಅವರ ಸಾಹಿತ್ಯ ಕೃತಿಗಳ ಮೂಲಕ, ಸಂಶೋಧನಾ ಕೃತಿಗಳ ಮೂಲಕ, ಯಕ್ಷಗಾನದಲ್ಲಿ ಅವರು ಮಾಡಿದ ಸಾಧನೆಗಳ ಮೂಲಕ ಅವರ ಪರಿಚಯ ಮಾಡಿಕೊಳ್ಳಲು ಹೋದರೆ, ಸುದೀರ್ಘ ಲೇಖನ ಬರೆದರೂ ಸಾಕಾಗದು. ಹಾಗಾಗಿ ಈ ಕಿರುಬರಹದಲ್ಲಿ ಅವರ ವೈಯಕ್ತಿಕ ಪರಿಚಯವನ್ನಷ್ಟೇ ಕೊಡಲಾಗಿದೆ. ಅಷ್ಟರಿಂದಲೇ ಅಮೃತರ ವ್ಯಕ್ತಿತ್ವದ ಒಂದು ಚಿಕ್ಕ ಅನುಭವವನ್ನು ಪಡೆದುಕೊಳ್ಳಲು ಸಾಧ್ಯವಾಗಬಹುದು.

ಅಮೃತ ಸೋಮೇಶ್ವರರು ಮಂಗಳೂರು ತಾಲೂಕಿನ ಸೋಮೇಶ್ವರ ಗ್ರಾಮದ ಅಡ್ಕ ಎಂಬಲ್ಲಿ 27.09.1935ರಂದು ಜನಿಸಿದರು. ಇವರ ತಂದೆ ಮುಂಬೈಯಲ್ಲಿ ಜರ್ಮನ್ ರಾಯಭಾರಿ ಕಚೇರಿಯ ಒಬ್ಬ ಅಧಿಕಾರಿಯ ವಾಹನ ಚಾಲಕರಾಗಿದ್ದರು. ಇವರು ಶಾಲಾ ಶಿಕ್ಷಣ ಪಡೆದಿರದಿದ್ದರೂ, ಕುತೂಹಲ ಮತ್ತು ಸ್ವಪ್ರಯತ್ನದಿಂದ 12 ಭಾಷೆಗಳನ್ನು ಕಲಿತಿದ್ದರು. ಅಮೃತರ ತಾಯಿ ಗೃಹಿಣಿಯಾಗಿದ್ದರೂ, ಮಲೆಯಾಳ ಜನಪದ ಕಥನ ಕಾವ್ಯಗಳನ್ನು ಹಾಡಬಲ್ಲವರಾಗಿದ್ದರು. ಅಮೃತರಿಗಿಂತ ಮೂರು ವರ್ಷ ಹಿರಿಯರಾದ ಅವರ ಅಕ್ಕ ಕಮಲ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದರು.

 ತಮ್ಮ ಬಾಲ್ಯವನ್ನು ಮುಂಬೈಯಲ್ಲಿ ಕಳೆದ ಅಮೃತರು, ಐದು ವರ್ಷವಾಗುವಾಗ ಊರಿಗೆ ಮರಳಿ, ಕೋಟೆಕಾರಿನಲ್ಲಿರುವ ಸ್ಟೆಲ್ಲಾ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದರು. ಅಲ್ಲಿ 5ನೇ ತರಗತಿ ವರೆಗೆ ಕಲಿತು, 1946ರಲ್ಲಿ ಆಗ ತಾನೇ ಆರಂಭವಾದ ಆನಂದಾಶ್ರಮ ಪ್ರೌಢಶಾಲೆಯ 6ನೇ ತರಗತಿಗೆ ಪ್ರಥಮ ತಂಡದ ವಿದ್ಯಾರ್ಥಿಯಾಗಿ ಸೇರಿದರು. 1954ರಲ್ಲಿ ಎಸೆಸೆಲ್ಸಿ ಉತ್ತೀರ್ಣರಾದರು.

ಅಮೃತ ಸೋಮೇಶ್ವರರು ಬಾಲ್ಯದಲ್ಲಿ ತಮ್ಮ ಸುತ್ತ ಮುತ್ತ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳನ್ನು ನೋಡುತ್ತಿದ್ದರು. ಮರುದಿನ ತನ್ನ ಗೆಳೆಯರೊಂದಿಗೆ ಅದನ್ನು ಅನುಕರಿಸಿ ಮನೆ ಸಮೀಪ ತಮ್ಮದೇ ಆಟ ಆಡುತ್ತಿದ್ದಾಗ ಅಮೃತರು ಭಾಗವತರಾಗುತ್ತಿದ್ದದ್ದು ಮಾತ್ರವಲ್ಲ ಆಶು ಪದ್ಯಗಳನ್ನು ಕಟ್ಟಿ ಹಾಡುತ್ತಿದ್ದರು. ಅಮೃತರ ಸಾಹಿತ್ಯಾಸಕ್ತಿಗೆ ಯಕ್ಷಗಾನದ ಪ್ರಭಾವವೂ ಒಂದು ಕಾರಣ. ಅಲ್ಲದೆ ಅವರ ತಾಯಿ, ದೊಡ್ಡ ತಾಯಿಯರು ಹಾಡುತ್ತಿದ್ದ ಕೇರಳದ ಜನಪದ ಕಥನಕಾವ್ಯಗಳು ಕೂಡ ಅವರ ಸಾಹಿತ್ಯಾಸಕ್ತಿಗೆ ಪ್ರೇರಣೆ ನೀಡಿದ್ದವು.

 ತಮ್ಮ ಪ್ರೌಢಶಾಲಾ ವ್ಯಾಸಂಗದ ಅವಧಿಯಲ್ಲಿ ಅಮೃತರ ಸಾಹಿತ್ಯಾಸಕ್ತಿ ಬೆಳೆಯಿತು. ಇದಕ್ಕೆ ಪ್ರೋತ್ಸಾಹ ಕೊಟ್ಟವರು ಗುರುಗಳಾದ ಅಮ್ಮೆಂಬಳ ಶಂಕರನಾರಾಯಣ ನಾವಡರು. ಪ್ರೌಢಶಾಲಾ ದಿನಗಳಲ್ಲೇ ಅಮೃತರು ಬರೆದ ಒಂದು ಕವನ, ‘ಚಿತ್ರಗುಪ್ತ’ ಪತ್ರಿಕೆಯಲ್ಲಿ ಪ್ರಕಟವಾಯಿತು. 9ನೇ ತರಗತಿಯಲ್ಲಿರುವಾಗ ಅವರು ‘ಶ್ರೀಮತೀ ಪರಿಣಯ’ ಎಂಬ ಕಾವ್ಯವನ್ನು ಭಾಮಿನಿ ಷಟ್ಪದಿಯಲ್ಲಿ ಬರೆದಿದ್ದರು. ಕಥೆ, ಕವನ, ಪ್ರಬಂಧ, ನಾಟಕ ಮತ್ತು ಯಕ್ಷಗಾನ ಪ್ರಸಂಗವನ್ನೊಳಗೊಂಡ ‘ಪಂಚಾಮೃತ’ ಎಂಬ ಕೈ ಬರಹದ ಒಂದು ಪುಸ್ತಕವನ್ನು ಕೂಡಾ ಅವರು ಆ ದಿನಗಳಲ್ಲಿ ಬರೆದಿದ್ದರು. ಎಸೆಸೆಲ್ಸಿ ಯಲ್ಲಿರುವಾಗ ಅವರೇ ಬರೆದ ‘ತನಿಯ ಗುರುವರ ಕಾಳಗ’ ಎಂಬ ಯಕ್ಷಗಾನ ಪ್ರಸಂಗದ ಪ್ರದರ್ಶನವೂ ಶಾಲೆಯಲ್ಲಿ ನಡೆದಿತ್ತು.

1954ರಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೃತರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಗೆ ಸೇರಿದರು. ಎರಡು ವರ್ಷದ ಇಂಟರ್‌ಮೀಡಿಯೆಟ್ ಶಿಕ್ಷಣವನ್ನು ವಿಜ್ಞಾನದಲ್ಲಿ ಪಡೆದರೂ, ಪದವಿ ಶಿಕ್ಷಣಕ್ಕಾಗಿ ಅವರು ಅದೇ ಕಾಲೇಜಿನಲ್ಲಿ ಬಿ.ಎ. ವಿಭಾಗಕ್ಕೆ ಸೇರ್ಪಡೆಯಾದರು. ಅಲ್ಲಿ ಪ್ರಾಧ್ಯಾಪಕರಾಗಿದ್ದ ತೆಕ್ಕುಂಜ ಗೋಪಾಲಕೃಷ್ಣ ಭಟ್ಟ ಮತ್ತು ಸೇಡಿಯಾಪು ಕೃಷ್ಣ ಭಟ್ಟರ ಒಡನಾಟದಲ್ಲಿ ಅಮೃತರ ಸಾಹಿತ್ಯಾಸಕ್ತಿ ಮತ್ತೂ ಬೆಳೆಯಿತು. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಅವರ ‘ಎಲೆಗಿಳಿ’ ಎಂಬ ಕಥಾಸಂಕಲನ ಪ್ರಕಟವೂ ಆಯಿತು. ಇದಕ್ಕೆ ಖ್ಯಾತ ಸಾಹಿತಿ ನಿರಂಜನರು ಮುನ್ನುಡಿ ಬರೆದಿದ್ದರು. 1958ರಲ್ಲಿ ಅಮೃತರು ಬಿ.ಎ. ಪದವಿಯನ್ನು ಮದ್ರಾಸು ವಿಶ್ವವಿದ್ಯಾನಿಲಯದಿಂದ ಚಿನ್ನದ ಪದಕದೊಂದಿಗೆ ಗಳಿಸಿದರು.

 1961ರಲ್ಲಿ ಅಮೃತ ಸೋಮೇಶ್ವರರು ನರ್ಮದಾ ಅವರನ್ನು ವಿವಾಹವಾದರು. ನರ್ಮದಾ ಅವರು ಮಂಗಳೂರಿನ ಗಣಪತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರಲ್ಲದೆ ಮುಂದೆ ಆ ಶಾಲೆಯ ಮುಖ್ಯೋಪಾಧ್ಯಾಯಿನಿಯೂ ಆದರು. ಅಮೃತ ಸೋಮೇಶ್ವರ ನರ್ಮದಾ ದಂಪತಿಗೆ ಇಬ್ಬರು ಗಂಡು ಮಕ್ಕಳು. ಹಿರಿಯ ಮಗ ಚೇತನ್ ಸೋಮೇಶ್ವರ್. ಕಿರಿಯ ಮಗ ಜೀವನ್ ಸೋಮೇಶ್ವರ್.

 ತಮ್ಮ ನಿವೃತ್ತಿಯ ಬಳಿಕ ಅಮೃತ ಸೋಮೇಶ್ವರರು ಅಡ್ಕದಲ್ಲೇ ಒಂದು ಮನೆ ಕಟ್ಟಿ ಅದರಲ್ಲಿ ವಾಸಿಸತೊಡಗಿದರು. ಆ ಮನೆಯ ಹೆಸರು ‘ಒಲುಮೆ’. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಸಂದರ್ಭದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಈ ಮನೆ ಬಲಿಯಾಯಿತು. ಈ ಮನೆಯಲ್ಲಿ ಅಮೃತರು 19 ವರ್ಷ ಕಾಲ ವಾಸವಾಗಿದ್ದರು. 2015ರಲ್ಲಿ ಅಮೃತರು ಮತ್ತೊಂದು ಮನೆ ಕಟ್ಟಬೇಕಾಯಿತು. ಸೋಮೇಶ್ವರದಲ್ಲೇ ಇರುವ ಈ ಹೊಸಮನೆಗೂ ಅಮೃತರು ‘ಒಲುಮೆ’ ಎಂದೇ ಹೆಸರಿರಿಸಿದ್ದಾರೆ. ಅಮೃತ ಸೋಮೇಶ್ವರರು ನಿವೃತ್ತಿ ಬಳಿಕ ಕೆಲವು ಕಾಲ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು. ಆ ಸಂದರ್ಭದಲ್ಲಿ ಅಲ್ಲಿ ಒಂದು ಯಕ್ಷಗಾನ ಮಾಹಿತಿ ಕೇಂದ್ರವನ್ನು ಆರಂಭಿಸಿದ್ದರು. ಅದು ಈಗ ಒಂದು ಯಕ್ಷಗಾನ ಕೇಂದ್ರವಾಗಿ ಬೆಳೆದು ನಿಂತಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಅಕಾಡಮಿಕ್ ಕೌನ್ಸಿಲ್‌ನ ಸದಸ್ಯತನವೂ ಅವರಿಗೆ ಸಿಕ್ಕಿತ್ತು. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದಾರೆ. 2006ರಲ್ಲಿ ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ.

ಅಮೃತರು ಪಡೆದ ಪ್ರಶಸ್ತಿಗಳಲ್ಲಿ ಕೆಲವನ್ನು ಹೆಸರಿಸುವುದಾದರೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡಮಿಯಿಂದ ಜಾನಪದ ತಜ್ಞ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡಮಿಯಿಂದ ಪಾರ್ತಿಸುಬ್ಬ ಪ್ರಶಸ್ತಿ, ತುಳು ಅಕಾಡಮಿ ಪ್ರಶಸ್ತಿ, ಹಲಸಂಗಿ ಗೆಳೆಯರ ಬಳಗದ ಪ್ರಶಸ್ತಿ, ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ, ಡಾ. ಶಿವರಾಮ ಕಾರಂತ ಪ್ರಶಸ್ತಿ, ಕುಕ್ಕಿಲ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ಕು. ಶಿ. ಹರಿದಾಸ ಭಟ್ಟ ಪ್ರಶಸ್ತಿ, ನಿರಂಜನ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಆಕಾಶವಾಣಿ ಪ್ರಶಸ್ತಿ ಮುಂತಾಗಿ 40ಕ್ಕೂ ಹೆಚ್ಚು ಪ್ರಶಸ್ತಿಗಳು.

ಅಮೃತರು ಬರೆದ ವಿವಿಧ ಗ್ರಂಥಗಳಿಗಾಗಿ ಕೇಂದ್ರ ಸರಕಾರದ ವಿದ್ಯಾ ಇಲಾಖೆಯಿಂದ, ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯಿಂದ ಎರಡು ಬಾರಿ ಗ್ರಂಥ ಪುರಸ್ಕಾರಗಳನ್ನು ಪಡೆದಿದ್ದಾರೆ.

ಪ್ರಪ್ರಥಮ ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಪ್ರಪ್ರಥಮ ವಿಶ್ವ ತುಳು ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ, ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ, ಮುಂಬೈ ಯಕ್ಷಗಾನ ಸಮ್ಮೇಳನದ ಅಧ್ಯಕ್ಷತೆ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಇವುಗಳ ಗೌರವಕ್ಕೂ ಅಮೃತರು ಪಾತ್ರರಾಗಿದ್ದರು.

ಸದ್ಯ ಮನೆಯಲ್ಲಿದ್ದುಕೊಂಡೇ ಓದು, ಬರಹ, ಅಧ್ಯಯನಗಳಲ್ಲಿ ನಿರತರಾಗಿರುವ ಅಮೃತ ಸೋಮೇಶ್ವರರು ಅವುಗಳ ಜೊತೆಗೆ ನಿತ್ಯ ಕರ್ತವ್ಯ ವೆಂಬಂತೆ ಕೈಗೊಂಡಿರುವ ರೇಡಿಯೋ ಆಲಿಸುವಿಕೆ ಮತ್ತು ಪತ್ರ ಲೇಖನವನ್ನು ತಪ್ಪದೆ ನಿರ್ವಹಿಸುತ್ತಿದ್ದಾರೆ.

ಅದೇ ವರ್ಷ ತಾವು ಕಲಿತ ಕಾಲೇಜಿನಲ್ಲೇ ಕನ್ನಡ ಅಧ್ಯಾಪಕರಾಗಿ ಅಮೃತರು ಉದ್ಯೋಗಕ್ಕೆ ಸೇರಿದರು. ಮುಂದೆ 6 ವರ್ಷಗಳ ಕಾಲ ಅಲ್ಲೇ ಕನ್ನಡ ಬೋಧನೆ ಮಾಡಿದ ಅಮೃತರು ಆ ಅವಧಿಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯುತ್ತಾ ಬಂದರು. 1959ರಲ್ಲಿ ಅವರ ಪ್ರಥಮ ಕವನ ಸಂಕಲನ ‘ವನಮಾಲೆ’ ಪ್ರಕಟವಾಯಿತು. 1961ರಲ್ಲಿ ಅವರು ಪ್ರಕಟಿಸಿದ ‘ತುಳು ಪಾಡ್ದನದ ಕಥೆಗಳು’ ಕೃತಿಗೆ ಕೇಂದ್ರ ಸರಕಾರದ ವಿದ್ಯಾ ಇಲಾಖೆಯಿಂದ ಪ್ರಶಸ್ತಿಯೂ ಬಂತು.

 1965ರಲ್ಲಿ ಅಮೃತರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಕನ್ನಡ ಪ್ರಾಧ್ಯಾಪಕರಾಗಿ ಸೇರ್ಪಡೆಯಾದರು. ಅಲ್ಲಿ ಎರಡು ವರ್ಷ ಕಾಲ ಉದ್ಯೋಗ ಮಾಡುತ್ತಲೇ ಕರ್ನಾಟಕ ವಿಶ್ವ ವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನೂ ಪಡೆದರು. ಆ ಬಳಿಕ ಪುತ್ತೂರಿನ ವಿವೇಕಾನಂದ ಕಾಲೇಜಿಗೆ 1967ರಲ್ಲಿ ಪ್ರಾಧ್ಯಾಪಕರಾಗಿ ಸೇರಿದರು. ಅಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ 26 ವರ್ಷಗಳ ಸೇವೆ ಸಲ್ಲಿಸಿ 1993ರಲ್ಲಿ ನಿವೃತ್ತರಾದರು.

 ಕನ್ನಡ ಪ್ರಾಧ್ಯಾಪಕ ವೃತ್ತಿಗೆ ಸೇರಿಕೊಂಡ ಬಳಿಕ ಅಮೃತ ಸೋಮೇಶ್ವರರು ಸಾಹಿತ್ಯ ರಚನೆ, ಜಾನಪದ ಅಧ್ಯಯನ, ತುಳು ಸಂಸ್ಕೃತಿ ಸಂಶೋಧನೆ ಮುಂತಾದ ಕೆಲಸಗಳಲ್ಲಿ ತನ್ನನ್ನು ವಿಪುಲವಾಗಿ ತೊಡಗಿಸಿಕೊಂಡರು. ಕ್ಷೇತ್ರ ಕಾರ್ಯ ನಡೆಸಲು ಅವರು ಸಾಕಷ್ಟು ಸಂಚಾರವನ್ನೂ ನಡೆಸಿದ್ದರು. ವಿಸ್ತಾರವಾದ ಓದು-ಚಿಂತನೆಗಳ ಮೂಲಕ ಅವರು ತಾವು ಕಂಡುಕೊಂಡ ವಿಚಾರಗಳನ್ನು ದಾಖಲಿಸಿ ಅವುಗಳನ್ನು ಗ್ರಂಥರೂಪದಲ್ಲಿ ಪ್ರಕಟಿಸುತ್ತಾ ಹೋದರು. ಅದೇ ವೇಳೆ ಅವರು ಯಕ್ಷಗಾನ ಕಲೆಯ ಬಗ್ಗೆ ಸಂಶೋಧನೆ ಹಾಗೂ ಪ್ರಸಂಗರಚನೆಯ ಕೆಲಸಗಳನ್ನು ಕೂಡ ವ್ಯಾಪಕವಾಗಿ ನಡೆಸುತ್ತಿದ್ದರು.

Writer - ಕೆ. ಎಸ್. ಮಂಗಳೂರು

contributor

Editor - ಕೆ. ಎಸ್. ಮಂಗಳೂರು

contributor

Similar News