ಮೊದಲ ಬಾರಿಗೆ ಟೂರಿಸ್ಟ್ ವೀಸಾ ನೀಡಲು ನಿರ್ಧರಿಸಿದ ಸೌದಿ ಅರೇಬಿಯಾ; ನಾಳೆಯಿಂದ ಅರ್ಜಿ ಸ್ವೀಕಾರ ಆರಂಭ

Update: 2019-09-27 06:18 GMT

ರಿಯಾದ್: ಪ್ರವಾಸಿಗರಿಗೆ ಖುಷಿ ನೀಡುವ ಬೆಳವಣಿಗೆಯಲ್ಲಿ ಪ್ರಥಮ ಬಾರಿಗೆಂಬಂತೆ ಸೌದಿ ಅರೇಬಿಯಾ ಟೂರಿಸ್ಟ್ ವೀಸಾ ನೀಡಲು ನಿರ್ಧರಿಸಿದ್ದು ಈ ಮೂಲಕ ತೈಲದ ಮೇಲೆಯೇ ಅತಿಯಾದ ಅವಲಂಬನೆ ತಪ್ಪಿಸುವ ನಿಟ್ಟಿನಲ್ಲಿ ಇನ್ನೊಂದು ಮಹತ್ವದ ಕ್ರಮ ಕೈಗೊಂಡಿದೆ.  ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರ ವಿಷನ್ -2030 ಕಾರ್ಯಕ್ರಮದಲ್ಲಿ ಈ ಟೂರಿಸ್ಟ್ ವೀಸಾ ಯೋಜನೆಯೂ ಅಡಕವಾಗಿದೆ.

ಸೌದಿ ಅರೇಬಿಯಾದ ತೈಲ ನಿಕ್ಷೇಪಗಳ ಮೇಲೆ ಡ್ರೋನ್ ದಾಳಿ ನಡೆದ ಎರಡು ವಾರಗಳಲ್ಲಿಯೇ ಈ ಘೋಷಣೆ ಹೊರಬಿದ್ದಿದೆ. “ಸೌದಿ ಅರೇಬಿಯಾವನ್ನು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ತೆರೆಯುವುದು ನಮ್ಮ ದೇಶಕ್ಕೆ ಒಂದು ಐತಿಹಾಸಿಕ ಕ್ಷಣವಾಗಿದೆ,'' ಎಂದು ಪ್ರವಾಸೋದ್ಯಮ ಮುಖ್ಯಸ್ಥ ಅಹ್ಮದ್ ಅಲ್-ಖತೀಬ್ ಹೇಳಿದ್ದಾರೆ. ಆನ್‍ಲೈನ್ ಟೂರಿಸ್ಟ್ ವೀಸಾಗಳಿಗೆ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಯನ್ನು ಸೌದಿ ಅರೇಬಿಯಾ 49 ದೇಶಗಳ ನಾಗರಿಕರಿಗೆ ಶನಿವಾರ ಆರಂಭಿಸಲಿದೆ. ಖತೀಬ್ ಅವರು ಹೇಳಿದಂತೆ ವಿದೇಶಿ ಮಹಿಳೆಯರಿಗೆ ಕಟ್ಟು ನಿಟ್ಟಿನ ವಸ್ತ್ರ ಸಂಹಿತೆಯೂ ಇರುವುದಿಲ್ಲ. ಸೌದಿ ಮಹಿಳೆಯರಿಗೆ ಕಡ್ಡಾಯವಾಗಿರುವ ಮೈಮುಚ್ಚುವ ಬಟ್ಟೆ ಧರಿಸಬೇಕೆಂಬ ನಿಯಮ ವಿದೇಶಿ ಪ್ರವಾಸಿಗರಿಗೆ ಅನ್ವಯವಾಗದು. ಆದರೆ ವಿದೇಶಿ ಮಹಿಳೆಯರು ಸಭ್ಯ ಉಡುಗೆಗಳನ್ನು ಧರಿಸಬೇಕು ಎಂದು ಅವರು ಹೇಳಿದ್ದಾರೆ.

ಇಲ್ಲಿಯ ತನಕ ಸೌದಿ ಅರೇಬಿಯಾದ ವೀಸಾಗಳು ವಲಸಿಗ ಕಾರ್ಮಿಕರಿಗೆ, ಅವರ  ಅವಲಂಬಿತರಿಗೆ ಹಾಗೂ ಮಕ್ಕಾ ಮದೀನಾಗೆ ಪ್ರಯಾಣಿಸುವ ಮುಸ್ಲಿಂ ಹಜ್ ಯಾತ್ರಿಗಳಿಗೆ ಮಾತ್ರ ಸೀಮಿತವಾಗಿತ್ತು.

ಕಳೆದ ವರ್ಷವಷ್ಟೇ ವಿದೇಶೀಯರಿಗೆ ಸೌದಿಯಲ್ಲಿ ನಡೆಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ತಾತ್ಕಾಲಿಕ ವೀಸಾ ನೀಡುವ ಪ್ರಕ್ರಿಯೆ ಆರಂಭಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News