ಅಪ್ಪ ಸಿಎಂ ಎನ್ನುವುದು ಮಾತ್ರವೇ ದಿನೇಶ್ ಗುಂಡೂರಾವ್ ಅರ್ಹತೆ: ಎಸ್.ಟಿ.ಸೋಮಶೇಖರ್ ವಾಗ್ದಾಳಿ

Update: 2019-09-27 12:39 GMT

ಬೆಂಗಳೂರು, ಸೆ. 27: ‘ಕೆಪಿಸಿಸಿ ಅಧ್ಯಕ್ಷನಾಗಲು ದಿನೇಶ್ ಗುಂಡೂರಾವ್‌ಗೆ ಯಾವ ಅರ್ಹತೆ ಇದೆ. ಅವರ ಅಪ್ಪ ಗುಂಡೂರಾವ್ ಸಿಎಂ ಎನ್ನುವುದು ಮಾತ್ರವೇ ಆತನ ಅರ್ಹತೆ. ನಮ್ಮನ್ನು ದೇಶದ್ರೋಹಿ ಎನ್ನಲು ಅವನ್ಯಾರು? ಅವನೇನು ಕೆಪಿಸಿಸಿ ಅಧ್ಯಕ್ಷನೋ ಅಥವಾ ಸಿದ್ದರಾಮಯ್ಯ ಅವರ ಚೇಲಾನೋ’ ಎಂದು ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್, ದಿನೇಶ್ ಗುಂಡೂರಾವ್ ವಿರುದ್ಧ ಏಕವಚನದಲ್ಲಿ ಟೀಕಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ. 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಡಾ.ಜಿ.ಪರಮೇಶ್ವರ್ ಅವರನ್ನು ನಿರ್ಲಕ್ಷ್ಯ ಮಾಡಿ ಯಾರೋ ಮೂರ್ನಾಲ್ಕು ಮಂದಿ ಎಲ್ಲವನ್ನು ತೀರ್ಮಾನ ಮಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ರಿಝ್ವಾನ್ ಅರ್ಶದ್ ಮತ್ತು ಕೃಷ್ಣಬೈರೇಗೌಡ ಮುಖ್ಯವಿಷಯಗಳನ್ನು ತೀರ್ಮಾನ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದೊಳಗೆ ಇನ್ನೊಂದು ಕಾಂಗ್ರೆಸ್ ಇದೆಯೇ? ಎಂದು ಪ್ರಶ್ನಿಸಿದ ಸೋಮಶೇಖರ್, ಇದೇನು ಸಿದ್ದರಾಮಯ್ಯನವರ ಕಾಂಗ್ರೆಸ್ ಪಕ್ಷವೇ? ಎಂದು ಟೀಕಿಸಿದರು.

ನೀನು ಯೋಗ್ಯನಾಗಿ ಕೆಲಸ ಮಾಡಿದ್ದರೆ ನಾವೇಕೆ ಪಕ್ಷ ಬಿಡುವ ಸಂದರ್ಭ ಬರುತ್ತಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ವಾಗ್ದಾಳಿ ನಡೆಸಿದ ಸೋಮಶೇಖರ್, ನಾನು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ದ್ರೋಹ ಮಾಡಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷವೂ ನಮಗೆ ಯಾವುದೇ ರೀತಿಯಲ್ಲಿ ಅನ್ಯಾಯ ಮಾಡಿಲ್ಲ. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ನಡವಳಿಕೆ ಸರಿ ಇಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದು. ಈ ವಿಷಯ ರಾಜ್ಯಕ್ಕೇ ಗೊತ್ತಿತ್ತು. ಅದನ್ನು ಸರಿಪಡಿಸಲು ಮುಂಚೂಣಿ ನಾಯಕರು ಯತ್ನಿಸಿದರೆ? ಎಂದು ಸೋಮಶೇಖರ್ ಕೇಳಿದರು.

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಲು ಕಾರಣರಾದವರಿಗೆ ನೋಟಿಸ್ ಕೊಟ್ಟರೆ? ತುಮಕೂರಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡ ಸೋಲಿಗೆ ಕಾರಣರಾದವರ ವಿರುದ್ಧ ಏನು ಕ್ರಮ ಕೈಗೊಂಡರು? ಎಂದು ಟೀಕಿಸಿದ ಅವರು, ಬಿ.ಕೆ.ಹರಿಪ್ರಸಾದ್ ಮತ್ತು ಮುನಿಯಪ್ಪ ಹೇಳಿದ್ದರಲ್ಲಿ ತಪ್ಪೇನಿದೆ? ಎಂದು ಸಮರ್ಥಿಸಿದರು.

ಈ ಹಿಂದೆ ಸ್ಪೀಕರ್ ಆಗಿದ್ದ ರಮೇಶ್‌ ಕುಮಾರ್ ನಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದು, ಈ ವಿಷಯ ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರಿಗೆ ಸಂತೋಷವಾಗಿದೆ. ಆದರೆ, ಕೋಲಾರದಲ್ಲಿ ಮುನಿಯಪ್ಪ ಸೋಲಿಗೆ ಕಾರಣರಾದ ರಮೇಶ್‌ ಕುಮಾರ್ ಅವರಿಗೆ ನೋಟಿಸ್ ಏಕೆ ಕೊಟ್ಟಿಲ್ಲ ಎಂದು ಸೋಮಶೇಖರ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News