ಅ.6 ರಿಂದ ಮಕ್ಕಳಿಗಾಗಿ ಬನ್ನೇರುಘಟ್ಟದಲ್ಲಿ ’ಝೂ ಕ್ಲಬ್’

Update: 2019-09-27 13:14 GMT

ಬೆಂಗಳೂರು, ಸೆ.27: 65ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಮಕ್ಕಳಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ವತಿಯಿಂದ ಪ್ರಕೃತಿ ಮತ್ತು ವನ್ಯಜೀವಿಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಸದವಕಾಶ ನೀಡುತ್ತಿದೆ. 12ರಿಂದ 18 ವಯಸ್ಸಿನ ಶಾಲಾ ಮಕ್ಕಳಿಗಾಗಿ ’ಝೂ ಕ್ಲಬ್-2019’ಎಂಬ ಕಾರ್ಯಕ್ರಮ ಆಯೋಜಿಸುತ್ತಿದೆ.

ಅಕ್ಟೋಬರ್ 6ರಿಂದ ಪ್ರಾರಂಭವಾಗಿ ಮುಂದಿನ ವರ್ಷ (2020) ಜ.12ರವರೆಗೆ ನಡೆಯಲಿದೆ. ಪ್ರತಿ ರವಿವಾರದಂದು ಈ ಕಾರ್ಯಕ್ರಮ ನಡೆಯಲಿದ್ದು, ಬರೋಬ್ಬರಿ 15 ವಾರಗಳ ಕಾಲ ಮಕ್ಕಳಿಗೆ ಈ ಅವಕಾಶ ಸಿಗಲಿದೆ. ಪ್ರತಿ ರವಿವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಕಾರ್ಯಾಗಾರ, ಕಾಡಿನೊಳಗೆ ಪಯಣ ಮತ್ತು ತಂಡಗಳನ್ನಾಗಿ ಮಾಡಿ ಚರ್ಚೆ ಮಾಡುವ ಕಾರ್ಯಕ್ರಮ ನಡೆಯಲಿದೆ. ನೋಂದಣಿ ಶುಲ್ಕ ಒಂದು ಸಾವಿರ ರೂ.ಆಗಿದ್ದು, ಸೆ.30 ನೋಂದಣಿಗೆ ಕೊನೆಯ ದಿನವಾಗಿರುತ್ತದೆ. ಆಸಕ್ತರು ಕೂಡಲೇ www.bannerghattab iologicalpark.org/education ಅಥವಾ ಕಾರ್ಯ ನಿರ್ವಾಹಕ ನಿರ್ದೇಶಕರ ಕಚೇರಿಯಿಂದ ನೋಂದಣಿ ಅರ್ಜಿಯನ್ನು ಪಡೆದು, ಅದನ್ನು ಭರ್ತಿ ಮಾಡಿ ಖುದ್ದು ಪೋಷಕರ ಜೊತೆಯಲ್ಲಿ ಮೃಗಾಲಯಕ್ಕೆ ಸಲ್ಲಿಸಬಹುದಾಗಿರುತ್ತದೆ.

ಅರ್ಜಿಯಲ್ಲಿ ನಮೂದಾಗಿರುವ ನಿಯಮಗಳಿಗೆ ಸಹಿ ಹಾಕಿದ ಬಳಿಕ ಪಾಸ್ ಪೋರ್ಟ್ ಅಳತೆಯ 3 ಫೋಟೋಗಳು, ಆದಾರ್ ಪ್ರತಿ, ಶಾಲೆಯ ಗುರುತಿನ ಚೀಟಿ, ಒಂದು ವೇಳೆ ಶಾಲೆಯ ಐಡಿ ಕಾರ್ಡಿನಲ್ಲಿ ಬ್ಲಡ್ ಗ್ರೂಪ್ ಇರದಿದ್ದಲ್ಲಿ ಬ್ಲಡ್ ಗ್ರೂಪಿನ ಸರ್ಟಿಫಿಕೇಟ್‌ನ್ನು ಸಲ್ಲಿಸಬೇಕು.

ಬಳಿಕ ನೋಂದಣಿ ಮಾಡಿಸಿಕೊಂಡ ಮಕ್ಕಳಿಗೆ ಬನ್ನೇರುಘಟ್ಟ ಮೃಗಾಲಯದ ವತಿಯಿಂದ ಯೂನಿಫಾರ್ಮ್ (ಟೀ ಶರ್ಟ್ ಮತ್ತು ಕ್ಯಾಪ್), ಐಡಿ ಕಾರ್ಡ್ ನೀಡಲಾಗುತ್ತದೆ. ಝೂ ಕ್ಲಬ್ ಕಾರ್ಯಕ್ರಮ ಮುಗಿದ ಬಳಿಕ ಸ್ಪರ್ಧೆಯಲ್ಲಿ ಪಾಲ್ಗೊಂಡು ಗೆದ್ದವರಿಗೆ ಪ್ರಶಸ್ತಿ ಮತ್ತು ಭಾಗವಹಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ವಿಶೇಷವಾಗಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಚಟುವಟಿಕೆಗಳು ಇರುವುದರಿಂದ ಮಕ್ಕಳು ನೀರನ್ನು ಜೊತೆಯಲ್ಲೇ ಇಟ್ಟುಕೊಳ್ಳಬೇಕು. ಬನ್ನೇರುಘಟ್ಟ ಮೃಗಾಲಯದ ವತಿಯಿಂದ ಸ್ನ್ಯಾಕ್ಸ್ ನೀಡಲಾಗುವುದು, ಮಧ್ಯಾಹ್ನದ ಊಟ ನೀಡಲಾಗುವುದಿಲ್ಲ. ಅದು ಮಕ್ಕಳ ಪೋಷಕರ ಜವಾಬ್ದಾರಿಯಾಗಿದ್ದು, ಮಧ್ಯಾಹ್ನ 1ಕ್ಕೆ ಬಂದು ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಹೆಚ್ಚಿನ ಮಾಹಿತಿಗಾಗಿ ಶಿಕ್ಷಣಾಧಿಕಾರಿ ದೂ.8884414262ಕ್ಕೆ ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News