ಹೇಗಿದೆ ಗೊತ್ತಾ ಮೈಸೂರು ರಾಜಪರಂಪರೆಯ ಖಾಸಗಿ ದರ್ಬಾರ್..?

Update: 2019-09-27 16:38 GMT
ಸಾಂದರ್ಭಿಕ ಚಿತ್ರ

ಮೈಸೂರು: ಜಗತ್ಪ್ರಸಿದ್ಧ ಮೈಸೂರು ದಸರಾ ಮಹೋತ್ಸವವು ನಾಲ್ಕು ಶತಮಾನಗಳಿಗೂ ಹೆಚ್ಚಿನ ಭವ್ಯ ಇತಿಹಾಸವನ್ನು ತನ್ನೊಡಲಲ್ಲಿ ತುಂಬಿಕೊಂಡಿದೆ.  ಇಂಥ ವೈಭವದ ನವರಾತ್ರಿ ಉತ್ಸವದ ಮೈಸೂರು ದಸರಾಕ್ಕೆ ಅದರದೇ ಆದ ಪರಂಪರೆಯ ಸೊಗಡು-ಸೊಗಸಿದೆ. ವಿಜಯನಗರ ಅರಸರ ಕಾಲದಲ್ಲಿ ವಿಜಯದ ದ್ಯೋತಕವಾಗಿ ಆರಂಭವಾದ ವಿಜಯದಶಮಿಯ ನವರಾತ್ರಿ, ಸಂಸ್ಕೃತಿ ಸಂಭ್ರಮದ ಉತ್ಸವ. ಮೈಸೂರು ಒಡೆಯರ ಕಾಲದಲ್ಲಿದು ಮುಂದುವರಿದದ್ದು ಪರಂಪರೆಯ ಪ್ರತೀಕ. ಭಾರತೀಯ ಸಂಸ್ಕೃತಿಯ ಇತಿಹಾಸದಲ್ಲಿ ಇಷ್ಟೊಂದು ಸುದೀರ್ಘ ಕಾಲದವರೆಗೆ ನಡೆಯುವ ಮತ್ತೊಂದು ಹಬ್ಬ ಕಾಣಸಿಗುವುದು ಬಹಳ ಅಪರೂಪ.

ಮೈಸೂರು ದಸರಾ ಒಂದು ನಾಡಹಬ್ಬವೆಂದೇ ಕರೆಯಲ್ಪಡುವ ಮಹೋತ್ಸವವೂ ಹೌದು. ಇದರ ಅತ್ಯಪೂರ್ವ ಪ್ರಮುಖ ಆಕರ್ಷಣೆ ಖಾಸಗಿ ದರ್ಬಾರ್.  ಇದನ್ನು ನೋಡಿಯೇ ಅನುಭವಿಸಬೇಕು. ಏಕೆಂದರೆ ಮತ್ತೆ ಮಹಾರಾಜರ ಆಳ್ವಿಕೆಯೇ ಬಂದು ಬಿಡುತ್ತೇನೋ ಎನ್ನುವಂತೆ ಭಾಸವಾಗಿ, ಸಿಂಹಾಸನಾರೂಢ ಮಹಾರಾಜರ ಗತ್ತು-ಗಾಂಭೀರ್ಯದ ಆಸ್ಥಾನದೈಸಿರಿಯು ಕಣ್ಮುಂದೆ ತೆರೆದುಕೊಳ್ಳುವ ಈ ಭವ್ಯತೆಯನ್ನು, ದಿವ್ಯತೆಯನ್ನು ವರ್ಣಿಸಲು ಕಷ್ಟವಿದೆ.

ದಸರಾ ಸಂಗೀತೋತ್ಸವ, ದಸರಾ ನಾಟಕೋತ್ಸವ, ದಸರಾ ಜನಪದೋತ್ಸವ, ದಸರಾ ಕವಿಗೋಷ್ಠಿಯ ಕಾವ್ಯೋತ್ಸವ, ದಸರಾ ಚಲನಚಿತ್ರೋತ್ಸವ, ದಸರಾ ವಸ್ತುಪ್ರದರ್ಶನ, ದಸರಾ ಫಲಪುಷ್ಪ ಪ್ರದರ್ಶನ, ದಸರಾ ಆಹಾರ ಮೇಳ, ಯುವದಸರಾ, ಹಲವು ಬಗೆಯ ಟ್ಯಾಬ್ಲೋಗಳೊಡನೆ ಜಂಬೂ ಸವಾರಿಯ ವೈಭವ ...ಹೀಗೆ ಅರಮನೆಯ ಹೊರಗೆ ನಡೆಯುವ ಮೈಸೂರು ದಸರಾ ಎಲ್ಲರೂ ಕಾಣುವ ದಸರೆ. ಆದರೆ ಅರಮನೆಯ ಒಳಗೆ ನಡೆಯುವ ದಸರೆಯೇ ಬೇರೆ. ಇದು ತೀರಾ ಖಾಸಗಿ ದಸರಾ. ಅದೇ ಒಡೆಯರ ಖಾಸಗಿ ದರ್ಬಾರ್. ಇದು ಜನ ಸಾಮಾನ್ಯರೆಲ್ಲರಿಗೂ ನೋಡಲು ಸಿಗದ ದಸರಾ. ಅಂಬಾವಿಲಾಸ ಅರಮನೆಯ ದರ್ಬಾರ್ ಹಾಲ್‍ನಲ್ಲಿ ಸಾಂಪ್ರದಾಯಿಕವಾಗಿ ಸಕಲ ವಿಧಿ-ವಿಧಾನಗಳೊಂದಿಗೆ ವೈಭವೋಪೇತವಾಗಿ ಜರುಗುವ ಈ ಖಾಸಗಿ ದರ್ಬಾರ್ ನ ಖದರ್ ಬೆರಗುಗೊಳಿಸುವಂತದ್ದು. ಇದು ನವರಾತ್ರಿ ಮಹೋತ್ಸವದ ಹತ್ತು ದಿನಗಳ ಕಾಲವೂ ನಡೆಯುತ್ತದೆ.

ಇದಕ್ಕಾಗಿ ಪ್ರಪಂಚದಲ್ಲೇ ಪುರಾತನವಾದದ್ದೆಂದು ಹೇಳಲಾಗುವ ರತ್ನ ಖಚಿತ ಚಿನ್ನದ ಸಿಂಹಾಸನವನ್ನು ದಸರೆಗೆ ಮೊದಲೇ ದರ್ಬಾರ್ ಹಾಲ್‍ನಲ್ಲಿ ಜೋಡಿಸಲಾಗುತ್ತದೆ. ಈ ಸಿಂಹಾಸನ ಜೋಡಣೆಯ ಕೆಲಸ ಮಾಡುವವರು ಮೈಸೂರು ಸಮೀಪದ ಗೆಜ್ಜಗಳ್ಳಿ ಗ್ರಾಮದ ಆಯ್ದ ಜನರು ಮಾತ್ರ. ಇದು ದಸರಾ ಆರಂಭದ ಕಾಲದಿಂದಲೂ ನಡೆದು ಬಂದಿರುವ ಪದ್ಧತಿ. ನವರಾತ್ರಿ ವೇಳೆ ಅರಮನೆಯ ಸಂಪ್ರದಾಯಬದ್ಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಒಡೆಯರ್ ಮನೆತನದ ರಾಜ ಪ್ರತಿದಿನ ಸರಿ ಸುಮಾರು ಮುಕ್ಕಾಲು ಗಂಟೆ ಕಾಲ ಈ ಸಿಂಹಾಸನವನ್ನು ಅಲಂಕರಿಸಿ ಖಾಸಗಿ ದರ್ಬಾರ್ ನಡೆಸುವುದು ವಾಡಿಕೆ. ಅದರಂತೆ ಮೈಸೂರು ಮಹಾರಾಜರ ಕೊನೆಯ ಕುಡಿ ಯುವರಾಜ, ಮಾಜಿ ಸಂಸದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರತಿವರ್ಷ ಇದನ್ನು ನಡೆಸಿಕೊಂಡು ಬರುತ್ತಿದ್ದರು. 2013 ಡಿಸೆಂಬರ್ 10ರಂದು ಅವರು ನಿಧನರಾದ ನಂತರ ಉತ್ತಾರಾಧಿಕಾರಿಯಾಗಿ ಅವರ ದತ್ತು ಪುತ್ರ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ 2015ರಿಂದ ಖಾಸಗಿ ದಸರಾ ದರ್ಬಾರ್ ನಡೆಸುತ್ತಿದ್ದಾರೆ.

ಈ ಖಾಸಗಿ ದರ್ಬಾರ್ ಎಂದರೆ ಸಾಕ್ಷಾತ್ ಮಹಾರಾಜರ ಮಹಾವೈಭವ. ರಾಜಾಳ್ವಿಕೆ ಕೊನೆಗೊಳ್ಳುವ ಮೊದಲು ಮಹಾರಾಜರ ಕಾಲದಲ್ಲಿ ಯಾವ ರೀತಿಯ ರಾಜ ದರ್ಬಾರ್ ನಡೆಯುತ್ತಿತ್ತೋ ಅದೇ ರೀತಿ ಪರಂಪರಾಗತ ವಿಧಿ-ವಿಧಾನಗಳಂತೆಯೇ ಒಡೆಯರ್ ಖಾಸಗಿ ದರ್ಬಾರ್ ನಡೆಸುತ್ತಾರೆ. ನವರಾತ್ರಿಯ ಮೊದಲನೆಯ ದಿನ ಅಂದರೆ ಪಾಡ್ಯದ ದಿನ ಪ್ರಸ್ತುತ ಮಹಾರಾಜರಾಗಿ ಖಾಸಗಿ ದರ್ಬಾರ್ ನಡೆಸುವ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಬೆಳಿಗ್ಗೆ ಎದ್ದ ತಕ್ಷಣವೇ ಆರತಿ ಎತ್ತಿ ಎಣ್ಣೆ ಶಾಸ್ತ್ರ ಮಾಡಿ, ಅರಮನೆಯಲ್ಲಿ ಕ್ಷೌರಿಕರಿಂದ ಚೌಲ ಮಾಡಿಸಿ ನಂತರ ಮಂಗಳಸ್ನಾನ ಮಾಡಿಸಲಾಗುವುದು. ಮುತ್ತೈದೆಯರು ಮತ್ತು ಪುರೋಹಿತ ಮನೆತನದ ಹೆಂಗಸರು ಒಡೆಯರ್ ಅವರಿಗೆ ಆರತಿ ಬೆಳಗುತ್ತಾರೆ. ಆನಂತರ ಪೂಜೆಗೆ ಅಣಿಯಾಗುವ ಒಡೆಯರ್, ಮೊದಲಿಗೆ ಚಾಮುಂಡಿತೊಟ್ಟಿಯಲ್ಲಿ ಗಣಪತಿಗೆ ಪೂಜೆ ಮಾಡಿ ಬಳಿಕ ಕಳಶಪೂಜೆ, ಕಂಕಣಪೂಜೆ ನಡೆಸಿ ತಮ್ಮ ಕುಲದೇವತೆ ಚಾಮುಂಡಿ ಸನ್ನಿಧಿಯಲ್ಲಿ ಕಂಕಣ ಧರಿಸುತ್ತಾರೆ. ಒಡೆಯರ್ ಜೊತೆಗೆ ಅವರ ಶ್ರೀಮತಿ ತ್ರೀಷಿಕಾಕುಮಾರಿ ಸಿಂಗ್ ಒಡೆಯರ್ ಕೂಡ ರಾಜಮನೆತನದ ಪದ್ಧತಿಯಂತೆ ಮಹಾರಾಣಿ ಸ್ಥಾನದಲ್ಲಿ ನಿಂತು ತಾವೂ ಕಂಕಣ ಧರಿಸುತ್ತಾರೆ. ಅಲ್ಲಿಂದ ಎಲ್ಲಾ ರೀತಿಯ ಕಠಿಣವ್ರತಗಳನ್ನೂ ಅರಮನೆಯ ಸಂಪ್ರದಾಯದಂತೆ ಚಾಚೂ ತಪ್ಪದೇ ನಡೆಸುತ್ತಾರೆ.

ಚಂಡಿಕಾಹೋಮ, ಬಲಿ, ಮಹಿಷವಧೆ, ಶಮೀವೃಕ್ಷ ಪೂಜೆ ಸೇರಿದಂತೆ ಅನೇಕ ಪೂಜಾವಿಧಿಗಳು ಸಾಂಗೋಪವಾಗಿ ನಡೆದು ದೇವೀ ಭಾಗವತವನ್ನು ಪಾರಾಯಣ ಮಾಡುವಾಗ ಮಹಿಷಾಸುರನನ್ನು ಸಾಂಕೇತಿಕವಾಗಿ ಸಂಹರಿಸಲಾಗುತ್ತದೆ. ಇದಕ್ಕಾಗಿ ಮರದಿಂದ ಮಹಿಷಾಸುರನ ಪ್ರತಿಕೃತಿಯನ್ನು ತಯಾರಿಸಿ ಅದಕ್ಕೆ ಕುಂಕುಮದ ರಕ್ತವರ್ಣವನ್ನು ಸುರಿಯಲಾಗುತ್ತದೆ.

ಕಾಳಿಕಾ ಪುರಾಣದ ಪ್ರಕಾರ ವೈದಿಕವಾಗಿ ಅರಮನೆಯೊಳಗೆ ಕಾರ್ಯಕ್ರಮ ನಡೆಸುವ ಮುನ್ನ ಬೆಳಗ್ಗೆ ರತ್ನಸಿಂಹಾಸನಕ್ಕೂ ಪೂಜೆ ಸಲ್ಲಿಸಲಾಗುತ್ತದೆ. ಈ ನಡುವೆ ಕಂಕಣಧಾರಿಗಳಾದ ಒಡೆಯರ್ ದಂಪತಿಗಳಿಗೆ ದಂಪತಿಪೂಜೆ ಮಾಡಲಾಗುತ್ತದೆ. ಹಾಗೆಯೇ ದರ್ಬಾರಿಗೆ ಬರುವುದಕ್ಕೂ ಮೊದಲು ಒಡೆಯರ್ ಪತ್ನಿ ತ್ರೀಷಿಕಾಕುಮಾರಿ ಸಿಂಗ್, ಸುಮಂಗಲೆಯರೊಡನೆ ಒಡೆಯರ್ ಅವರ ಪಾದಪೂಜೆ ಮಾಡಿ ಹಣೆಗೆ ತಿಲಕ ಇಡುತ್ತಾರೆ. ಹತ್ತು ದಿನಗಳೂ ಒಡೆಯರ್ ಗೆ ಈ ರೀತಿ ಪಾದಪೂಜೆ ಮಾಡಲಾಗುತ್ತದೆ. ಇದು ಅರಮನೆಯ ಕಲ್ಯಾಣಮಂಟಪದ ಮೇಲ್ಭಾಗದಲ್ಲಿ ನಡೆಯುತ್ತದೆ.

ಈ ಎಲ್ಲಾ ವಿಧಿ-ವಿಧಾನ ಪೂಜೆಗಳ ಜೊತೆ ವಿವಿಧ ಬಗೆಯ ದಂತದ ಗೊಂಬೆಗಳನ್ನು ಗೊಂಬೆತೊಟ್ಟಿಯಲ್ಲಿ ಜೋಡಿಸಿ ಕೂರಿಸಿ ಗೊಂಬೆಯಾರತಿ ಮಾಡಲಾಗುತ್ತದೆ. ಈ ಸಂಪ್ರದಾಯ ಅರಮನೆಯಿಂದಾಚೆಗೂ ಮುಂದುವರಿದಿದ್ದು ಪಟ್ಟದರಾಜ, ಪಟ್ಟದರಾಣಿ ಪರಿಕಲ್ಪನೆಯಲ್ಲಿ ಗೊಂಬೆ ಕೂರಿಸುವ ಪದ್ಧತಿಯನ್ನು ಈಗಲೂ ದಸರಾ ಸಂದರ್ಭದಲ್ಲಿ ಹಲವಾರು ಮನೆಗಳಲ್ಲಿ ನಾವು ಕಾಣಬಹುದಾಗಿದೆ.

ಖಾಸಗಿ ದರ್ಬಾರಿನಲ್ಲಿ ಒಡೆಯರ್ ಅವರ ರಾಜಪೋಷಾಕೇ ಒಂದು ಅದ್ಭುತ. ಇದನ್ನು ಮೈಸೂರಿನ ವಿಶಿಷ್ಟ ದರ್ಜಿಯೊಬ್ಬರು ಸಿದ್ಧಪಡಿಸುತ್ತಾರೆ. ಮಿನುಗುವ ಚಿನ್ನದ ಎಳೆಗಳನ್ನೊಳಗೊಂಡ ಉಡುಪುಗಳನ್ನು ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಧರಿಸಿರುತ್ತಾರೆ. ಹೀಗೆ ಇಡೀ ಅಂಬಾವಿಲಾಸ ಅರಮನೆಯನ್ನು ಬೆಳಗುವ ಚಂದ್ರನಂತೆ ಅರಸೊತ್ತಿಗೆಯ ದಿನಗಳನ್ನು ನೆನಪುಗೊಳಿಸುವ ಒಡೆಯರ್ ಸಿಂಹಾಸನ ಪೂಜೆ ಮಾಡಿ ರಾಜಗಾಂಭೀರ್ಯದಿಂದ ರತ್ನಸಿಂಹಾಸನ ಏರಿ ಆ ಸ್ಥಾನಕ್ಕೆ ಬಲಗೈ ಎತ್ತಿ ಸೆಲ್ಯೂಟ್ ಮಾಡಿ ಗತ್ತಿನಿಂದ ಕುಳಿತುಕೊಳ್ಳುತ್ತಾರೆ. 

ದರ್ಬಾರ್ ನಲ್ಲಿ ದಿನಕ್ಕೆ ಇಬ್ಬರಂತೆ ಅಧಿಕೃತ ಹೊಗಳು ಭಟರು ಇರುತ್ತಾರೆ. ಅನಧಿಕೃತವಾಗಿ ಹಲವು ಮಂದಿ ಇದ್ದು ಮಹಾರಾಜರ ಮೇಲಿನ ಅಭಿಮಾನ-ಗೌರವದಿಂಧ ಬಹುಪರಾಕ್ ಹಾಕುವುದುಂಟು. ನವರಾತ್ರಿಯ ಮೊದಲನೆ ದಿನ ಅಂದರೆ ಪಾಡ್ಯದ ದಿನ ಬೆಳಗ್ಗೆಯಿಂದ ಈ ಖಾಸಗಿ ದರ್ಬಾರ್ ನಡೆಯುತ್ತದೆ.  ಉಳಿದ ದಿನಗಳಲ್ಲಿ ಸಂಜೆ ವೇಳೆಯಲ್ಲಿ ನಡೆಯುತ್ತದೆ. ದ್ವಾರಪಾಲಕರು, ಪರಾಕು ಹೇಳುವವರು, ಒಡೆಯರ್ ಆಪ್ತ ಸಿಬ್ಬಂದಿ, ರಾಜದಂಡ ಹಿಡಿದ ಆಸ್ಥಾನ ಅಧಿಕಾರಿಗಳು, ರಾಜಪುರೋಹಿತರು, ವಿದ್ವಾಂಸರು, ಒಡೆಯರ್ ವಂಶಸ್ಥರು, ಬಂಧುಮಿತ್ರರೆಲ್ಲರೂ ಖಾಸಗಿ ದರ್ಬಾರಿನಲ್ಲಿರುತ್ತಾರೆ.

ಪ್ರತಿದಿನ ಸಂಜೆ ಖಾಸಗಿ ದರ್ಬಾರ್ ನಡೆಯುವ ಮುನ್ನ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಳಿಗೆ ಅಲಂಕಾರ ಮಾಡಿ ಅರಮನೆ ಆವರಣದಲ್ಲಿರುವ ಕೋಟೆ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಅರಮನೆಯೊಳಗೆ ಇವುಗಳ ಪ್ರವೇಶವಾದ ನಂತರ ಖಾಸಗಿ ದರ್ಬಾರ್ ಶುರುವಾಗುತ್ತದೆ. ಸಿಂಹಾಸನಾರೂಢರಾದ ಒಡೆಯರ್ ಗೆ ದೇವಾಲಯಗಳಿಂದ ಬಂದ ಪುರೋಹಿತರು ಪ್ರಸಾದ ಮತ್ತು ಮಂತ್ರಪುಷ್ಪ ಹಾಗೂ ಮಂಗಳಾಕ್ಷತೆ ನೀಡುವುದು, ನಜರ್ ಒಪ್ಪಿಸುವುದು ನಡೆಯುತ್ತದೆ. ನಂತರ ಸಿಂಹಾಸನಾರೂಢ ಒಡೆಯರ್ ರಿಂದ ರಾಜಪರಿವಾರದ ಮಂದಿಗೆ ಕಾಣಿಕೆ ನೀಡಲಾಗುತ್ತದೆ. ಹತ್ತು ದಿನಗಳು ನಡೆಯುವ ಈ ಖಾಸಗಿ ದರ್ಬಾರ್ ನಲ್ಲಿ ದಿನವೂ ನಡೆಯುವ ಪೂಜಾ ವಿಧಾನಗಳಲ್ಲಿ ಬದಲಾವಣೆಗಳಿರುವುದಿಲ್ಲ.

ವಿಜಯದಶಮಿಯ ಹತ್ತು ದಿನಗಳ ಅವಧಿಯಲ್ಲಿ 108 ಸಲ ದೇವಿ ಭಾಗವತ ಪಠಣ, 10 ಮಂದಿ ವೇದಮೂರ್ತಿಗಳಿಂದ ಸಪ್ತಶತಿ ಪಠಣ, ನವಮಿಯ ರಾತ್ರಿ ಆಲಮೇಲಮ್ಮನ ದೇವಸ್ಥಾನದಲ್ಲಿ ಪೂಜೆ, ಆಯುಧಶಾಲೆಯಲ್ಲಿ ಆಯುಧಪೂಜೆ, ವಿಜಯದಶಮಿಯ ದಿನ ಜಟ್ಟಿಗಳ ವಜ್ರಮುಷ್ಠಿ ಕಾಳಗ, ಇದೇ ದಿನ ಶಮೀಪೂಜೆ ಮುಂತಾದ ಧಾರ್ಮಿಕ ಕಾರ್ಯಗಳನ್ನು ಖಾಸಗಿ ದರ್ಬಾರಿನ ಹಿನ್ನೆಲೆಯಲ್ಲಿ ಅತ್ಯಂತ ಶ್ರದ್ಧಾಭಕ್ತಿಗಳಿಂದ ಶಾಸ್ತ್ರೋಕ್ತವಾಗಿ ನೆರವೇರಿಸಲಾಗುವುದು.

ಮಾರ್ಕಂಡೇಯ ಪುರಾಣದ ಆಧಾರದ ಪೂಜಾ ಪದ್ಧತಿಯುಳ್ಳ ಅರಮನೆಯೊಳಗಿನ ಈ ಖಾಸಗಿ ದಸರಾದಲ್ಲಿ ಅನೇಕ ಬಗೆಯ ವಿಧಿ-ವಿಧಾನಗಳಿವೆ.  ಇಂದಿಗೂ ಇವೆಲ್ಲವನ್ನೂ ಒಡೆಯರ್ ಕುಟುಂಬದವರು ಚಾಚೂ ತಪ್ಪದೆ ಆಚರಿಸಿಕೊಂಡು ಬರುತ್ತಿದ್ದಾರೆ. ಖಾಸಗಿ ದರ್ಬಾರಿನ ಆ ಹತ್ತು ದಿನಗಳೂ ಪ್ರಜಾನುಷ್ಠಾನಗಳನ್ನು ನಡೆಸಿಕೊಡಲು 57 ಮಂದಿ ಪುರೋಹಿತರು ಪಾಲ್ಗೊಳ್ಳುತ್ತಾರೆಂದರೆ ಇದರ ಮಹತ್ವ ಯಾರಿಗಾದರೂ ಅರಿವಾದೀತು.

ನವರಾತ್ರಿ ಸಮಯದಲ್ಲಿ ಮಹಾರಾಜರು ಕಂಕಣಧಾರಿಯಾದರೆ ನವರಾತ್ರಿ ಉತ್ಸವದ ಪೂಜಾವಿಧಿಗಳು ಮುಗಿಯುವತನಕವೂ ಅವರು ಎಲ್ಲೂ ಹೋಗುವಂತಿಲ್ಲ. ಅರಮನೆಯಲ್ಲೇ ಪ್ರತಿದಿನವೂ ವ್ರತನಿಷ್ಠರಾಗಿರಬೇಕು. ಬಹಳಷ್ಟು ಕಟ್ಟುನಿಟ್ಟಿನ ಆಚರಣೆಗಳು ಇವರಲ್ಲಿದ್ದರೂ ಉಪವಾಸ ವ್ರತ ಮಾತ್ರ ಇಲ್ಲ. ಅದರಲ್ಲೂ ವಿಶೇಷವಾಗಿ ಒಡೆಯರ್ ವಂಶದಲ್ಲಿ ಗೃಹಸ್ಥರಂತೂ ಉಪವಾಸ ಮಾಡಲೇಬಾರದು. ಹಾಗೆಯೇ ಯಾವುದೇ ಪೂಜೆ ಪುನಸ್ಕಾರಗಳಿರಲಿ ಇವರಲ್ಲಿ ಶಂಖ ಊದುವಂತಿಲ್ಲ, ಕೊಂಬು ವಾದ್ಯದ ಸದ್ದು ಮಾಡುವಂತಿಲ್ಲ. ಇದೆಲ್ಲವನ್ನೂ ಯುದ್ಧದ ಸಂದರ್ಭದಲ್ಲಿ ಮಾತ್ರ ಇವರು ಬಳಸುತ್ತಾರಷ್ಟೆ.
ಒಟ್ಟಿನಲ್ಲಿ ನವರಾತ್ರಿಯ ದಸರಾ ಸಂಭ್ರಮೋಲ್ಲಾಸದಲ್ಲಿ ಮೈಸೂರು ಯದುವಂಶಸ್ಥರ ದಿವ್ಯ ಸಾನಿಧ್ಯದಲ್ಲಿ ಜರುಗುವ ಖಾಸಗಿ ದರ್ಬಾರ್ ಆಳರಸರ ಗತಕಾಲದ ವೈಭವವನ್ನು ತೆರೆದಿಡುವ ನೆನಪುಗಳ ಮಹಾಮೆರವಣಿಗೆಯೇ ಸರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News