ಐಎಂಎ ಹಗರಣ: ಮಾಹಿತಿ ನೀಡಲು ಈಡಿಗೆ ಹೈಕೋರ್ಟ್ ಆದೇಶ

Update: 2019-09-27 16:58 GMT

ಬೆಂಗಳೂರು, ಸೆ.27: ಬಹುಕೋಟಿ ಐಎಂಎ(ಐ-ಮಾನಿಟರಿ ಅಡ್ವೈಸರಿ) ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಲು ಜಾರಿ ನಿರ್ದೇಶನಾಲಯಕ್ಕೆ ಹೈಕೋರ್ಟ್ ಆದೇಶಿಸಿದೆ.

ಈ ಕುರಿತು ಸಿಬಿಐ ತನಿಖೆಗೆ ಕೋರಿ ಚಿತ್ರದುರ್ಗದ ಮುಹಮ್ಮದ್ ಸಿರಾಜುದ್ದೀನ್ ಸೇರಿ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ನ್ಯಾಯಪೀಠವು ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಈಡಿ, ಸಕ್ಷಮಪ್ರಾಧಿಕಾರ ತನಿಖೆಯ ವಿಚಾರವನ್ನು ವಿನಿಮಯ ಮಾಡಿಕೊಂಡು ಕೆಲಸ ಮಾಡಬೇಕೆಂದು ನಿರ್ದೇಶನ ನೀಡಿ, ಈಡಿಗೆ ಇಲ್ಲಿಯವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಲು ಆದೇಶಿಸಿತು.

ಐಎಂಎ ಹಗರಣದ ತನಿಖೆ ವೇಳೆಯಲ್ಲಿ 21 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 2 ಕೋಟಿ 85 ಲಕ್ಷ ರೂ.ಹಣ, 59 ಲಕ್ಷ ರೂ. ಮೌಲ್ಯದ ವಾಹನ ಸೇರಿ ಇನ್ನಿತರ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಕ್ಷಮ ಪ್ರಾಧಿಕಾರವು ಪೀಠಕ್ಕೆ ತಿಳಿಸಿತು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಈಡಿಗೆ ಮಾಹಿತಿ ನೀಡಲು ಆದೇಶಿಸಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News