ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಹೆಚ್ಚಿದೆ: ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ

Update: 2019-09-27 17:08 GMT

ಬೆಂಗಳೂರು, ಸೆ.27: ಗ್ರಾಮ ಪಂಚಾಯತ್ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಜವಾಬ್ದಾರಿ ಹೆಚ್ಚಿದ್ದು, ಸ್ಥಳೀಯ ಸಮಸ್ಯೆಗಳ ನಿವಾರಿಸುವ ಮೂಲಕ ಗ್ರಾಮೀಣ ಭಾಗದ ಬದುಕನ್ನು ಹಸನುಗೊಳಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಅಪ್ಪಾಜಿ ಗೌಡ ತಿಳಿಸಿದ್ದಾರೆ. 

ಶುಕ್ರವಾರ ಗಾಂಧಿ ಭವನದ ಬಾಪೂ ಸಭಾಂಗಣದಲ್ಲಿ ಕರ್ನಾಟಕ ಪಂಚಾಯತ್ ರಾಜ್ ಪರಿಷತ್‌ನಿಂದ ಆಯೋಜಿಸಿದ್ದ ಪರಿಷತ್‌ನ ವಾರ್ಷಿಕ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಿ ಜಾರಿಗೊಳಿಸುವ ಯೋಜನೆಗಳು ಜನರಿಗೆ ತಲುಪಬೇಕಾದರೆ ಸ್ಥಳೀಯ ಜನಪ್ರತಿನಿಧಿಗಳು ಸಕ್ರಿಯವಾಗಿ ಕಾರ್ಯೋನ್ಮುಖರಾಗಬೇಕೆಂದು ಹೇಳಿದರು.

ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಕಳೆದ 50 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಆದರೂ ನಮ್ಮ ಜನರು ಅಧಿಕಾರಿಗಳ ಮೇಲೆ ಅವಲಂಬಿತರಾಗಿದ್ದಾರೆ. ಇದು ಅತ್ಯಂತ ಶೋಚನೀಯ ಸಂಗತಿಯಾಗಿದ್ದು, ಸರಕಾರಿ ಯೋಜನೆಗಳ ಬಗ್ಗೆ ಸೂಕ್ತ ಮಾಹಿತಿ ನೀಡದ ಅಧಿಕಾರಿಗಳು ಜನರ ದಾರಿ ತಪ್ಪಿಸುತ್ತಿದ್ದಾರೆ. ಇದರಿಂದ ಸರಕಾರಿ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತ್ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ತಮ್ಮ ಸ್ಥಾನದ ಘನತೆ, ಗೌರವ ಅರಿತುಕೊಂಡು ಜವಾಬ್ದಾರಿ ನಿಭಾಯಿಸಿದರೆ ಜನರ ಸಮಸ್ಯೆಗಳಿಗೆ ಬಹುಬೇಗ ಪರಿಹಾರ ಕಂಡುಕೊಳ್ಳಬಹುದು. ಒಂದು ಗ್ರಾಮ ಪಂಚಾಯತ್ ಅಭಿವೃದ್ಧಿಗೆ ಪೂರಕವಾದ ನೀತಿ, ನಿಯಮ ಹಾಗೂ ಕಾನೂನುಗಳ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಬೇಕು. ನಂತರ ಅಧಿಕಾರಿಗಳು ಸೂಚಿಸುವಂತ ಯೋಜನೆಗಳ ಅನುಷ್ಠಾನ ಪತ್ರಗಳಿಗೆ ಸಹಿ ಹಾಕಬೇಕೆಂದು ಅವರು ಹೇಳಿದರು.

ದೇಶದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತವೆ. ಇಂತಹ ಆಲೋಚನೆಗಳಿಗೆ ಜನಪ್ರತಿನಿಧಿಗಳು ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ. ಪರಿಷತ್ ಸಹ ಇನ್ನೂ ಹೆಚ್ಚು ಜನರಿಗೆ ಹತ್ತಿರವಾಗುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಗ್ರಾಮ ಪಂಚಾಯತ್ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಜಾಗೃತಿ ಮೂಡಿಸಲು ಚರ್ಚಾಕೂಟ, ಕಾರ್ಯಾಗಾರ, ಸಮಾವೇಶಗಳನ್ನು ಆಯೋಜಿಸುವತ್ತ ಗಮನ ಹರಿಸಬೇಕೆಂದು ಅವರು ಹೇಳಿದರು.

ಕರ್ನಾಟಕ ಪಂಚಾಯತ್ ರಾಜ್ ಪರಿಷತ್‌ನ ಕಾರ್ಯಾಧ್ಯಕ್ಷ ಸಿ.ನಾರಾಯಣಸ್ವಾಮಿ ಮಾತನಾಡಿ, ಅಧಿಕೃತ ಸಂಸ್ಥೆಯಾಗಿರುವ ಈ ಪರಿಷತ್‌ನ ಆಡಳಿತ ಮಂಡಳಿ ರಚನೆ ಸೇರಿದಂತೆ ವಿವಿಧ ಕಾರ್ಯಗಳಿಗೆ ಪೂರಕವಾಗಿದ್ದ ಉಪ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಜಿಲ್ಲಾ ಮಟ್ಟದಲ್ಲಿ ಆಡಳಿತ ಮಂಡಳಿ ಸ್ಥಾಪನೆಗೆ ಅವಕಾಶವಿದೆ. ಹೀಗಾಗಿ ರಾಜ್ಯದ ಎಲ್ಲ ಭಾಗದ ಜನರಿಗೂ ಅವಕಾಶ ಒದಗಿಸುವ ನಿಟ್ಟಿನಲ್ಲಿ ಪರಿಷತ್ ಕಾರ್ಯ ನಿರ್ವಹಿಸುತ್ತಿದೆ. ಸರಕಾರದ ಅನುಧಾನಕ್ಕೆ ಸೀಮಿತವಾಗಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಹೆಚ್ಚಿನ ವಿಶೇಷ ಅನುಧಾನಕ್ಕಾಗಿ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ಯ ಅಧ್ಯಯನ ಪೀಠ ಸ್ಥಾಪನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡಸಲಾಯಿತು. ಈ ವೇಳೆ ಉಪಾಧ್ಯಕ್ಷರಾದ ವಿ.ವೈ.ಘೋರ್ಪಡೆ, ಡಿ.ಆರ್. ಪಾಟೀಲ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣೇಗೌಡ, ಖಜಾಂಚಿ ಚಿಕ್ಕಕೊಮಾರಿ ಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News