ನೂತನ ಪ್ರವಾಸೋದ್ಯಮ ನೀತಿಯಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ: ಸಿ.ಟಿ.ರವಿ

Update: 2019-09-27 17:22 GMT

ಬೆಂಗಳೂರು, ಸೆ.27: ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ದೃಷ್ಟಿಯಿಂದ ನೂತನ ಪ್ರವಾಸೋದ್ಯಮ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತ ಸಚಿವ ಸಿ.ಟಿ.ರವಿ ತಿಳಿಸಿದರು.

ಶುಕ್ರವಾರ ನಗರದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಎಂ.ಎಸ್.ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಿದ್ದ ‘ವಿಶ್ವ ಪ್ರವಾಸೋದ್ಯಮ ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರವಾಸೋದ್ಯಮ ಅಭಿವೃದ್ಧಿಯೊಂದಿಗೆ ಉದ್ಯೋಗಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ವಿಶಿಷ್ಟವಾಗಿ ರೂಪಿಸಲಾಗಿದ್ದು, ಇದರಿಂದಾಗಿ ಯುವಕರಿಗೆ ಉಪಯೋಗವಾಗಲಿದೆ ಎಂದು ಹೇಳಿದರು.

ರಾಜ್ಯದಲ್ಲಿರುವ ವಿಶ್ವ ದರ್ಜೆಯ ಪ್ರವಾಸಿ ತಾಣಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಕಾರ್ಯಪ್ರವೃತ್ತರಾಗಿದ್ದೇವೆ. ರಾಜ್ಯವನ್ನು ಜಗತ್ತಿನ ಆಕರ್ಷಕ ಪ್ರವಾಸೋದ್ಯಮ ಕೇಂದ್ರವನ್ನಾಗಿಸುವ ಉದ್ದೇಶದಿಂದ ಕೆಲವು ಪ್ರವಾಸಿ ಕ್ಷೇತ್ರಗಳನ್ನು ಖಾಸಗಿ ಸಹಭಾಗಿತ್ವದಲ್ಲಿ, ಕೆಲವು ಕ್ಷೇತ್ರಗಳನ್ನು ಸ್ವಯಂ ಸೇವಾ ಸಂಘಗಳ ಸಹಕಾರದಲ್ಲಿ ಹಾಗೂ ಕೆಲವು ಪ್ರವಾಸಿ ತಾಣಗಳನ್ನು ಸರಕಾರಿ ಅನುದಾನ ಬಳಸಿ ಅಭಿವೃದ್ಧಿಪಡಿಸಲಾಗುವುದು ಎಂದರು.

ರಾಜ್ಯವನ್ನು ಜಗತ್ತಿಗೆ ಪರಿಚಯಿಸುವ ಕಾರ್ಯದಲ್ಲಿ ಜನರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಯಾವುದೇ ಸಂಘ ಸಂಸ್ಥೆಗಳು ರಾಜ್ಯದ ಯಾವುದಾದರೂ ಒಂದು ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಿ ನಿರ್ವಹಣೆಯ ಜವಾಬ್ದಾರಿ ಹೊರಲು ಬಯಸಿದ್ದಲ್ಲಿ ಹಸ್ತಾಂತರಿಸಲಾಗುವುದು. ಎಂ.ಎಸ್.ರಾಮಯ್ಯ ಸಂಸ್ಥೆ ಸಹ ಈ ಕಾರ್ಯದಲ್ಲಿ ಆಸಕ್ತಿ ತೋರಿದರೆ ಸುಪರ್ದಿಗೆ ವಹಿಸಿಕೊಡಲಾಗುವುದು ಎಂದು ತಿಳಿಸಿದರು.

ನಾಡಿನಲ್ಲಿ ಮಾತ್ರ ಅಂತರ್‌ರಾಷ್ಟ್ರೀಯ ಹಾಗೂ ಅಂತರ್‌ರಾಜ್ಯ ಮಟ್ಟದಲ್ಲಿ ಗಮನ ಸೆಳೆಯಬಹುದಾದ 1500ಕ್ಕೂ ಹೆಚ್ಚು ಕೇಂದ್ರ ಹಾಗೂ ರಾಜ್ಯ ಪುರಾತತ್ವ ಕಟ್ಟಡಗಳು ಕಾಣಸಿಗುತ್ತದೆ. ಸಾಂಸ್ಕೃತಿಕವಾಗಿ ಭಿನ್ನತೆಯಿಂದ ಕೂಡಿರುವ ರಾಜ್ಯವು ಭಾಷೆ ಮತ್ತು ಆಹಾರದಲ್ಲಿ ವೈವಿಧ್ಯತೆಯಿಂದ ಕೂಡಿದೆ. ಇಂದಿನ ದಿನಮಾನಗಳಲ್ಲಿ ಅನುಭವಗಳನ್ನು ಕಟ್ಟಿಕೊಡುವ ಪ್ರವಾಸೋದ್ಯಮ ಜನರನ್ನು ಆಕರ್ಷಿಸುತ್ತಿದೆ. ಶಿಲಾಯುಗದಿಂದ ಮೊದಲುಗೊಂಡು ಜಾಗತೀಕರಣದ ಆಧುನಿಕ ಯುಗದವರೆಗೂ ತನ್ನದೇ ಆದ ಹೆಜ್ಜೆ ಗುರುತನ್ನು ಮೂಡಿಸಿರುವ ರಾಜ್ಯ ನಮ್ಮದು. ಇದು ಹೆಮ್ಮೆಯ ವಿಚಾರವಾಗಿದೆ ಎಂದರು.

ಎಂ.ಎಸ್. ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಎಂ.ಆರ್.ಜಯರಾಂ ಮಾತನಾಡಿ, ದೇಶದಲ್ಲಿ ಪಾರಂಪರಿಕ ತಾಣಗಳು, ವೈವಿದ್ಯಮಯವಾದ ಸಂಸ್ಕೃತಿ ಸಂಪತ್ತಿದೆ. ಆದರೆ, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುತ್ತಿಲ್ಲ. ನಮ್ಮ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಬೇಕಿದೆ. ಇದರಿಂದ ಉದ್ಯೋಗ ಸೃಷ್ಟಿಗೂ ಅವಕಾಶವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಹಲವು ದೇಶಗಳು ಪ್ರವಾಸೋದ್ಯಮವನ್ನೇ ಆದಾಯ ಮೂಲವಾಗಿಸಿಕೊಂಡಿವೆ. ಅಮೆರಿಕಾ, ಯುರೋಪ್, ಫ್ರಾನ್ಸ್ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದರಿಂದ ಅಭಿವೃದ್ಧಿಯತ್ತ ಸಾಗುತ್ತಿವೆ. ರಾಜ್ಯ ಸರಕಾರ ಇಂದು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಆಸಕ್ತಿ ತೋರಿಸುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್‌ ಕುಮಾರ್, ನಿರ್ದೇಶಕ ಕೆ.ಎನ್.ರಮೇಶ್, ಕರ್ನಾಟಕ ಟೂರಿಸಂ ಸೊಸೈಟಿ ಅಧ್ಯಕ್ಷ ಶ್ಯಾಮ್‌ರಾಜು, ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಶರ್ಮಾ, ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಶಿವಗುರು ಎಸ್.ಶ್ರೀತಾರನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News