ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೇಂದ್ರ ಸರಕಾರದ ವಿರುದ್ಧ ರಕ್ಷಣಾ ಇಲಾಖೆ ನೌಕರರ ಧರಣಿ

Update: 2019-09-27 17:51 GMT

ಬೆಂಗಳೂರು, ಸೆ.27: ಕೇಂದ್ರ ಸರಕಾರ ಶೀಘ್ರದಲ್ಲಿಯೇ ರಕ್ಷಣಾ ಇಲಾಖೆಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳಿಗೆ ಒತ್ತಾಯಿಸಿ, ಸೇನಾ ವಲಯದ ನೌಕರರು ಪ್ರತಿಭಟನೆ ನಡೆಸಿದರು.

ಶುಕ್ರವಾರ ನಗರದ ಜಯಮಹಲ್ ರಸ್ತೆ ಸಮೀಪದ ಸಿಕ್ಯೂಎಎಲ್ ಕಚೇರಿ ಮುಂಭಾಗ ಆಲ್ ಇಂಡಿಯಾ ಡಿಫೆನ್ಸ್ ಎಂಪ್ಲಾಯೀಸ್ ಫೆಡರೇಷನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನೌಕರರು, ರಕ್ಷಣಾ ಇಲಾಖೆಯ ಡಿಫೆನ್ಸ್ ಆಫ್ ಕ್ವಾಲಿಟಿ ಅಷ್ಯೂರೆನ್ಸ್ (ಡಿಜಿಕ್ಯುಎ) ದಿನಾಚರಣೆ ವಿರೋಧಿಸಿದ್ದೇವೆ ಎಂದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಫೇಡರೇಷನ್ ಉಪಾಧ್ಯಕ್ಷ ಎಂ.ಕೆ.ರವೀಂದ್ರನ್ ಪಿಳ್ಳೆ, ರಕ್ಷಣಾ ನೌಕರರ ಹಲವು ನ್ಯಾಯಯುತವಾಗಿರುವ ಬೇಡಿಕೆಗಳು ನನೆಗುದಿಗೆ ಬಿದ್ದಿದೆ. ಈ ಸಂಬಂಧ ಹಲವು ಬಾರಿ ಸೇನಾ ಮುಖ್ಯಸ್ಥರಿಗೆ ಮನವಿ ಮಾಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ, ಡಿಜಿಕ್ಯುಎ ದಿನಾಚರಣೆ ವಿರೋಧಿಸಿ, ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು ಎಂದರು.

ರಕ್ಷಣಾ ಇಲಾಖೆಯಲ್ಲಿ ಖಾಲಿ ಉಳಿದಿರುವ ಹುದ್ದೆಗಳು ಭರ್ತಿ ಮಾಡಬೇಕು. ಜತೆಗೆ, ಇದರಲ್ಲಿನ ನೇಮಕಾತಿ ನಿಯಮಗಳನ್ನು ಸುಲಭಗೊಳಿಸಬೇಕು. ಅದೇ ರೀತಿ, ಸೇವೆಯಲ್ಲಿಯೇ ಸಾವನ್ನಪ್ಪುವ ಸೇನಾ ನೌಕರರ ಕುಟುಂಬಗಳಿಗೆ ತುರ್ತು ಪರಿಹಾರ ಹಾಗೂ ಅವಲಂಬಿತರನ್ನು ತಕ್ಷಣ ನೇಮಿಸಬೇಕೆಂದು ಹೇಳಿದರು.

ಅದೇ ರೀತಿಯಲ್ಲಿ, ಕೇಂದ್ರ ಸರಕಾರ ಪ್ರಸ್ತುತ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಿರುವಂತೆ, ಎಚ್‌ಆರ್‌ಎಗೆ ಸಂಬಂಧಿಸಿದಂತೆ ಅನುಕೂಲಗಳನ್ನು ಮಾಡಿಕೊಡಬೇಕು. ಜತೆಗೆ ಸಣ್ಣ ಶಸ್ತ್ರಾಸ್ತ್ರಗಳಿಗೆ ಸೇರಿದ ಕೇಂದ್ರ ಪ್ರಧಾನ ಕಾರ್ಯದರ್ಶಿ ಘಾನಶ್ಯಾಮ್ ತ್ರಿಪಾಠಿ ಅವರು ಸಭೆ ನಡೆಸಿ, ತಮ್ಮ ಬೇಡಿಕೆಗಳನ್ನು ಈಡೇರಿಸುವ ಆಶ್ವಾಸನೆ ನೀಡಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News