ಉಪಚುನಾವಣೆಯಲ್ಲಿ ಆಯೋಗ ಬಿಜೆಪಿಯ ಡಮ್ಮಿ ಅಭ್ಯರ್ಥಿಯೇ?

Update: 2019-09-28 04:36 GMT

ಕರ್ನಾಟಕ ಉಪಚುನಾವಣೆಯಲ್ಲಿ ಚುನಾವಣಾ ಆಯೋಗವೇ ಸ್ಪರ್ಧೆಗಿಳಿಯಲು ನಿರ್ಧರಿಸಿದಂತಿದೆ. ರಾಜ್ಯದಲ್ಲಿ ಚುನಾವಣಾ ಆಯೋಗ ಏಕಾಏಕಿ ಉಪಚುನಾವಣೆಯನ್ನು ಮುಂದೂಡಿರುವುದನ್ನು ಬೇರಾವ ರೀತಿಯಲ್ಲೂ ವಿಶ್ಲೇಷಿಸಲು ಸಾಧ್ಯವಿಲ್ಲ. ಈವರೆಗೆ ರಾಜ್ಯದ ‘ಅನರ್ಹ ಶಾಸಕರ’ ವಿವಾದ ರಾಜಕೀಯ ಪಕ್ಷಗಳಿಗಷ್ಟೇ ಸೀಮಿತವಾಗಿತ್ತು. ಅನರ್ಹ ಶಾಸಕರು ಸ್ಪರ್ಧಿಸಬೇಕೋ ಬೇಡವೋ ಎನ್ನುವುದರ ಕುರಿತಂತೆ ಬಿಜೆಪಿಯೊಳಗೇ ಭಿನ್ನಮತವಿದೆ. ಅನರ್ಹ ಶಾಸಕರಿಗೆ ಟಿಕೆಟ್ ನೀಡಬಾರದು ಎಂದು ಬಿಜೆಪಿಯ ‘ಮೂಲನಿವಾಸಿ’ಗಳು ಈಗಾಗಲೇ ವರಿಷ್ಠರಿಗೆ ಒತ್ತಡವನ್ನು ಹೇರಿದ್ದಾರೆ. ಇತ್ತ ಅನರ್ಹ ಶಾಸಕರ ಅತಂತ್ರ ಸ್ಥಿತಿಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಬಹಿರಂಗವಾಗಿ ಅಣಕಿಸತೊಡಗಿವೆ. ಅನರ್ಹರ ಕುರಿತಂತೆ ಮತದಾರರಲ್ಲೂ ಅನುಕಂಪವಿಲ್ಲ. ಹೀಗೆ ಯಾರಿಗೂ ಬೇಡವಾದ ಉಂಡು ಎಸೆದ ಬಾಳೆಯೆಲೆಯಂತೆ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಬಾಗಿಲ ಮುಂದೆ ಅಲವತ್ತುಕೊಳ್ಳುತ್ತಿದ್ದಾರೆ.

ಸಾಧಾರಣವಾಗಿ ಉಪಚುನಾವಣೆಗಳನ್ನು ಘೋಷಿಸಲ್ಪಡುವುದು, ಆಯಾ ಕ್ಷೇತ್ರದ ಜನಪ್ರತಿನಿಧಿಗಳು ಮೃತಪಟ್ಟಾಗ ಅಥವಾ ತೀವ್ರ ಅನಾರೋಗ್ಯಕ್ಕೀಡಾಗಿ ತನ್ನ ಕ್ಷೇತ್ರಕ್ಕೆ ರಾಜೀನಾಮೆ ನೀಡಿದಾಗ. ಕೆಲವೊಮ್ಮೆ ಹಗರಣಗಳಲ್ಲಿ ಸಿಲುಕಿ ಬಂಧನವಾಗುವ ಹಂತದಲ್ಲಿ ರಾಜೀನಾಮೆ ನೀಡಲೇಬೇಕಾಗುತ್ತದೆ. ಆಗ ಆ ಕ್ಷೇತ್ರ ಹೊಸ ಜನಪ್ರತಿನಿಧಿಯನ್ನು ಆರಿಸುವುದು ಅನಿವಾರ್ಯವಾಗುತ್ತದೆ. ಆದರೆ ಇಲ್ಲಿ, ಅನರ್ಹ ಶಾಸಕರು ರಾಜೀನಾಮೆ ನೀಡಿರುವುದು ತೀರಾ ವೈಯಕ್ತಿಕ ರಾಜಕೀಯ ಕಾರಣಗಳಿಗಾಗಿ. ಈ ರಾಜೀನಾಮೆ ಮತದಾರರಿಗೆ ಶಾಸಕರು ಮಾಡಿದ ವಂಚನೆಯಾಗಿದೆ. ಇವರನ್ನು ಆಯ್ಕೆ ಮಾಡಿದ ತಪ್ಪಿಗೆ ಕ್ಷೇತ್ರದ ಜನರು ಇನ್ನೊಂದು ಚುನಾವಣೆಯನ್ನು ತಲೆಯ ಮೇಲೆ ಹೇರಿಕೊಳ್ಳಬೇಕಾಗಿದೆ. 15 ಕ್ಷೇತ್ರಗಳಲ್ಲಿ ನಡೆಯುವ ಚುನಾವಣೆಯ ಖರ್ಚುವೆಚ್ಚಗಳನ್ನು ಜನರ ತೆರಿಗೆಯ ಹಣದಿಂದಲೇ ಭರಿಸಬೇಕಾಗಿದೆ. ಆರಿಸಿದ ಜನಪ್ರತಿನಿಧಿಗಳು ತಮ್ಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಮತದಾರರನ್ನು ಅವರು ನಿರಾಶೆಗೊಳಿಸಿದ್ದಾರೆ. ನೆರೆಯಿಂದ ತತ್ತರಿಸಿರುವ ಕರ್ನಾಟಕ ಪರಿಹಾರಕ್ಕಾಗಿ ಚಡಪಡಿಸುತ್ತಿರುವ ಹೊತ್ತಿನಲ್ಲಿ ಮತ್ತೊಂದು ಚುನಾವಣೆಗೆ ಸಜ್ಜಾಗಬೇಕಾಗಿರುವುದು ವಿಪರ್ಯಾಸವೇ ಸರಿ. ಕೊನೆಗೂ ಉಪಚುನಾವಣೆ ಘೋಷಣೆಯಾಗಿದೆ. ಚುನಾವಣೆಯಲ್ಲಿ ಭಾಗವಹಿಸಿ ಅರ್ಹ ಪ್ರತಿನಿಧಿಗಳನ್ನು ಆರಿಸಲು ಮತದಾರರು ಮಾನಸಿಕವಾಗಿ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಮತದಾನವನ್ನು ಕೇವಲ ‘ಅನರ್ಹ’ರಿಗಾಗಿ ಚುನಾವಣಾ ಆಯೋಗ ಮುಂದೂಡಿದೆ. ಇದೀಗ ಹೊಸ ಹೊಸ ದಿನಾಂಕವನ್ನೂ ಘೋಷಿಸಿದೆ.

 ಅನರ್ಹರ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದೆ. ನ್ಯಾಯಾಲಯ ತನ್ನದೇ ಮಾರ್ಗದಲ್ಲಿ ಈ ವಿಚಾರಣೆಯನ್ನು ನಡೆಸುತ್ತಿದೆ. ಅನರ್ಹರಿಗೆ ಅಗತ್ಯವಿದೆ ಎನ್ನುವ ಕಾರಣಕ್ಕಾಗಿ ಅದು ಆತುರಾತುರವಾಗಿ ವಿಚಾರಣೆ ನಡೆಸುವಂತಿಲ್ಲ. ಈ ಶಾಸಕರು ಈಗಾಗಲೇ ತಮ್ಮ ವಿಧಾನಸಭಾ ಕ್ಷೇತ್ರಗಳಿಗೆ ರಾಜೀನಾಮೆ ನೀಡಿರುವುದರಿಂದ ಅಲ್ಲಿ ಚುನಾವಣೆ ಘೋಷಿಸುವುದಕ್ಕೆ ಆಯೋಗಕ್ಕೆ ಯಾವ ಅಡ್ಡಿಯೂ ಇಲ್ಲ. ರಾಜೀನಾಮೆ ನೀಡಿದವರು ಮುಂದಿನ ದಿನಗಳಲ್ಲಿ ಚುನಾವಣೆಗೆ ಸ್ಪರ್ಧಿಸಲು ಅರ್ಹರೋ ಅಲ್ಲವೋ ಎನ್ನುವುದನ್ನಷ್ಟೇ ಸುಪ್ರೀಂಕೋರ್ಟ್ ನಿರ್ಧರಿಸುತ್ತದೆಯೇ ಹೊರತು ಅವರ ರಾಜೀನಾಮೆ ಸಿಂಧುತ್ವದ ಬಗ್ಗೆ ವಿಚಾರಣೆ ನಡೆಯುತ್ತಿರುವುದಲ್ಲ. ಅವರ ರಾಜೀನಾಮೆ ಈಗಾಗಲೇ ಅಂಗೀಕಾರವಾಗಿರುವುದರಿಂದ, ಆ ಕ್ಷೇತ್ರಗಳು ಜನಪ್ರತಿನಿಧಿಗಳಿಲ್ಲದೆ ಖಾಲಿ ಉಳಿದಿವೆ. ಅಲ್ಲಿ ಚುನಾವಣೆ ನಡೆಸಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವುದು ಆಯೋಗದ ಕರ್ತವ್ಯ. ಸ್ಪರ್ಧೆಯಲ್ಲಿ ಅನರ್ಹರು ಭಾಗಿಯಾಗಬೇಕು ಎಂದು ಚುನಾವಣಾ ಆಯೋಗ ಯಾಕೆ ಭಾವಿಸುತ್ತದೆ? ಸುಪ್ರೀಂಕೋರ್ಟ್ ನಾಳೆ ಶಾಸಕರನ್ನು ‘ಅರ್ಹರು’ ಎಂದು ಘೋಷಿಸಿತು ಎಂದೇ ತಿಳಿದುಕೊಳ್ಳೋಣ. ನಾಳೆ ಯಾವ ಪಕ್ಷಗಳೂ ಅವರಿಗೆ ಟಿಕೆಟ್ ನೀಡದೇ ಇದ್ದರೆ ಅಥವಾ ಈ ರಾಜೀನಾಮೆ ನೀಡಿದ ಶಾಸಕರು ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರೆ ಚುನಾವಣಾ ಆಯೋಗ ಮುಜುಗರಕ್ಕೀಡಾಗುವುದಿಲ್ಲವೇ?

 ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಬೇಕಾದುದು ಬಿಜೆಪಿಯೊಳಗಿನ ಅಗತ್ಯವೇ ಹೊರತು, ಆಯಾ ಕ್ಷೇತ್ರದ ಜನರ ಅಗತ್ಯ ಖಂಡಿತ ಅಲ್ಲ. ‘ನಾಮಪತ್ರ ಯಾರು ಬೇಕಾದರೂ ಸಲ್ಲಿಸಬಹುದು. ಆದರೆ ನಿಯಮಾನುಸಾರವಾಗಿ ಅದು ಅಂಗೀಕಾರವಾದರೆ ಮಾತ್ರ ಸ್ಪರ್ಧಿಸಬಹುದು’ ಎಂದು ಆಯೋಗ ಈ ಹಿಂದೆ ಹೇಳಿಕೆ ನೀಡಿತ್ತು. ಈ ಕಾರಣದಿಂದ ಅನರ್ಹರು ನಾಮಪತ್ರ ಸಲ್ಲಿಸುವುದಕ್ಕೆ ಯಾವ ಅಡ್ಡಿಯೂ ಇರಲಿಲ್ಲ. ಒಂದು ವೇಳೆ ಅಷ್ಟರೊಳಗೆ ಸುಪ್ರೀಂಕೋರ್ಟ್ ತೀರ್ಪು ಹೊರಬೀಳದಿದ್ದರೆ ಅದಕ್ಕೆ ಹೊಣೆಗಾರ ಆಯೋಗ ಖಂಡಿತ ಅಲ್ಲ. ಸ್ವತಃ ರಾಜೀನಾಮೆ ನೀಡಿದ ಶಾಸಕರೇ ಅದಕ್ಕೆ ಹೊಣೆಗಾರರರು. ಆದುದರಿಂದ ಅನರ್ಹ ಶಾಸಕರಿಗಾಗಿ ಚುನಾವಣಾ ಆಯೋಗ ಮತದಾರರ ಹಿತಾಸಕ್ತಿಯನ್ನು ಬಲಿಕೊಡುವ ಅಗತ್ಯ ಖಂಡಿತ ಇದ್ದಿರಲಿಲ್ಲ.

ಇದೀಗ ಅವರು ಅರ್ಹರೋ ಅಲ್ಲವೋ ಎನ್ನುವ ತೀರ್ಪು ಹೊರಬೀಳುವವರೆಗೆ ಚುನಾವಣೆಯನ್ನು ಮುಂದೂಡುತ್ತೇನೆ ಎಂದು ಹೇಳುವ ಮೂಲಕ ಆಯೋಗ, ಪರೋಕ್ಷವಾಗಿ ಅನರ್ಹರ ಬೆನ್ನಿಗೆ ನಿಂತಿದೆ. ಅನರ್ಹರ ಬೆನ್ನಿಗೆ ನಿಂತಿದೆ ಎನ್ನುವುದಕ್ಕಿಂತ ಬಿಜೆಪಿಯ ಬೆನ್ನಿಗೆ ನಿಂತಿದೆ. ಇಂತಹದೊಂದು ನಿರ್ಧಾರವನ್ನು ಸುಪ್ರೀಂಕೋರ್ಟ್ ಸ್ವಯಂ ಅಪೇಕ್ಷಿಸಿರಲಿಲ್ಲ. ಆಯೋಗವೇ ಸ್ವಯಂ ಉದಾರತೆಯನ್ನು ಪ್ರದರ್ಶಿಸಿರುವುದು ರಾಜಕೀಯನಾಯಕರಿಂದ ಪ್ರಶ್ನೆಗೊಳಗಾಗುತ್ತಿದೆ. ಸಾಧಾರಣವಾಗಿ ಘೋಷಿಸಿದ ಚುನಾವಣೆಯನ್ನು ಮುಂದೂಡಬೇಕಾದರೆ, ಪ್ರಕೃತಿ ವಿಕೋಪಗಳು ಸಂಭವಿಸಬೇಕು ಅಥವಾ ರಾಜ್ಯದ ನಾಯಕರು ನಿಧನರಾಗಬೇಕು. ಅಂತಹ ಯಾವ ಘಟನೆಗಳೂ ನಡೆದಿಲ್ಲ. ತಮ್ಮ ಸಮಯ ಸಾಧಕ ರಾಜಕಾರಣಕ್ಕಾಗಿ ಅನರ್ಹರಾಗಿರುವ ಶಾಸಕರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಒಂದೇ ಕಾರಣಕ್ಕಾಗಿ ಉಪಚುನಾವಣೆಯನ್ನು ಮುಂದೂಡಿರುವುದು, ಆಯೋಗದ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ.

ಡಿಸೆಂಬರ್ ತಿಂಗಳಲ್ಲಿ ಆಯೋಗ ಚುನಾವಣೆ ಘೋಷಿಸಿದೆ. ಯಾವುದೋ ಕಾರಣಕ್ಕಾಗಿ ಆ ದಿನಾಂಕದೊಳಗೆ ಅನರ್ಹ ಶಾಸಕರ ತೀರ್ಪು ಹೊರಬೀಳದೆ ಇದ್ದರೆ ಅಥವಾ ಇನ್ನೇನೋ ಗೊಂದಲಗಳು ನಡೆದು ವಿಚಾರಣೆ ಮುಂದೂಡಿಕೆಯಾದರೆ ಆಗ ಚುನಾವಣಾ ಆಯೋಗ ಉಪಚುನಾವಣೆಯನ್ನು ಮತ್ತೆ ಮುಂದೂಡುತ್ತದೆಯೇ? ಅಥವಾ ಆಯೋಗ ಘೋಷಿಸಿದ ಚುನಾವಣಾ ದಿನಾಂಕ, ಸುಪ್ರೀಂಕೋರ್ಟ್‌ಗೆ ‘ಈ ದಿನಾಂಕದೊಳಗೆ ನಿಮ್ಮ ತೀರ್ಪನ್ನು ನೀಡಿರಿ’ ಎಂದು ನೀಡಿದ ಆದೇಶವೇ? ಈ ಉಪಚುನಾವಣೆಯಲ್ಲಿ ಆಯೋಗವೂ ಬಿಜೆಪಿ ಪರವಾಗಿ ಡಮ್ಮಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹೊರಟಿದೆ ಎಂದರೆ ಅದರಲ್ಲಿ ಅತಿಶಯೋಕ್ತಿ ಇದೆಯೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News