ಬೈಪೋಲಾರ್ ಸಮಸ್ಯೆ-2

Update: 2019-09-28 13:41 GMT

ಮಕ್ಕಳ ಸುಳ್ಳಿನ ಪ್ರಪಂಚ: ಭಾಗ-8

► ಅತಿರೇಕಗಳ ನಡುವೆ

ಬೈಪೋಲಾರ್ ಸಮಸ್ಯೆ ಇರುವವರಲ್ಲಿ ಯಾವುದಾದರೂ ಎರಡು ಬಗೆಯ ಅತಿರೇಕಗಳಿರುತ್ತವೆ. ಯಾವುದೋ ಒಂದು ಅವಧಿಯಲ್ಲಿ ಮಗುವಾಗಲಿ, ವಯಸ್ಕರಾಗಲಿ ಒಂದೇ ತಣ್ಣನೆ, ಅನಾಸಕ್ತಿಯಿಂದ, ಸೋಮಾರಿತನದಿಂದ ಅನುತ್ಪಾದಕವಾಗಿ ಇರುವುದು ಮೇನಿಯಾ ಎನ್ನುವುದಾದರೆ, ಅತೀ ಚಟುವಟಿಕೆಯಿಂದ, ತಡೆಯಲಾರದಷ್ಟು ಚುರುಕಿನಿಂದ ಕೂಡಿರುವುದು ಹೈಪೋಮೇನಿಯಾ.

ಹಾಗೆ ನೋಡಿದರೆ, ಬೈಪೋಲಾರ್ ಸಮಸ್ಯೆ ಒಂದು ಸಾಧಾರಣ ಮಾನಸಿಕ ಆರೋಗ್ಯದ ಸಮಸ್ಯೆ. ಯಾರಿಗೆ ಬೇಕಾದರೂ ಬರಬಹುದು. ಯಾರಲ್ಲಾದರೂ ಇರಬಹುದು. ವೈದ್ಯರಿಗೆ ಅಷ್ಟೇನೂ ನಿಖರವಾದ ಕಾರಣಗಳನ್ನು ಕೊಡಲಾಗಿಲ್ಲ. ಆದರೂ ಸ್ಥೂಲವಾಗಿ, ಸಾಧ್ಯತೆಗಳನ್ನು ತಳ್ಳಿ ಹಾಕಲು ಆಗದಂತಹ ಕೆಲವು ಕಾರಣಗಳನ್ನು ಪಟ್ಟಿ ಮಾಡಬಹುದು.

1.ಆನುವಂಶೀಯ: ಮನೆಯ ಹಿರಿಯರಿಗೆ ಅಥವಾ ಒಡಹುಟ್ಟುಗಳಿಗೆ ಬೈಪೋಲಾರ್ ಇರುವುದರಿಂದ ಮಗುವಾಗಲಿ ಅಥವಾ ದೊಡ್ಡವರಿಗಾಗಲಿ ಇದು ಬರಬಹುದು. ಹಾಗೆಯೇ, ಮನೆಯಲ್ಲಿ ಇತರರಿಗೆ ಬೈಪೋಲಾರ್ ಇರುವಾಗ ಅದೇ ಮನೆಯ ಕೆಲವರಿಗೆ, ಅದೇ ರಕ್ತ ಹಂಚಿಕೊಂಡಿರುವವರಿಗೆ ಎಂದೂ ಬರದೇ ಇರುವ ಉದಾಹರಣೆಗಳೂ ಸಾಕಷ್ಟಿವೆ.

2.ಮೆದುಳಿನ ರಚನೆ: ಕೆಲವರಿಗೆ ಮೆದುಳಿನ ರಚನೆಯಲ್ಲಿಯೇ ವ್ಯತ್ಯಾಸವಿದ್ದು ಬೈಪೋಲಾರ್ ಬರುವ ಸಾಧ್ಯತೆಗಳಿರುತ್ತವೆ.

3.ಪರಿಸರದ ಪ್ರಭಾವಗಳು: ಒತ್ತಡದ ಪರಿಸ್ಥಿತಿಗಳಿಂದಾಗಿ, ಆಘಾತಗಳಿಂದಾಗಿ, ಶಾರೀರಿಕ ಸಮಸ್ಯೆಗಳಿಂದಾಗಿಯೂ ಕೂಡಾ ಬೈಪೋಲಾರ್ ಸಮಸ್ಯೆ ಬರಬಹುದು.

► ರೋಗಲಕ್ಷಣಗಳು

ಕೆಲವು ಲಕ್ಷಣಗಳನ್ನು ಗಮನಿಸಿಕೊಂಡು, ಗುರುತಿಸಿಕೊಂಡು ಮನೋವೈದ್ಯರ ಬಳಿಗೆ ಮಗುವನ್ನು ಕರೆದೊಯ್ಯಬೇಕು. ಅದು ದಿನದಲ್ಲಿ ಕೆಲವು ನಿರ್ದಿಷ್ಟ ಸಮಯದಲ್ಲಿ ಮಂಕಾಗಿರುವುದು, ಕಳಾಹೀನವಾಗಿರುವುದು, ಅನ್ಯಮನಸ್ಕರಾಗಿರುವುದು ಕಂಡುಬಂದರೆ ಎಚ್ಚರವಹಿಸಬೇಕು. ಕೆಲವೊಮ್ಮೆ ದಿನಗಟ್ಟಳೆ, ವಾರಗಟ್ಟಳೆ ಅದೇ ಸ್ಥಿತಿಯಲ್ಲಿ ಇರುವುದನ್ನು ಗುರುತಿಸಿದರೂ ಎಚ್ಚರವಹಿಸಬೇಕು. ವಯಸ್ಕರಲ್ಲಾದರೂ ಇದನ್ನು ಗುರುತಿಸಬಹುದು. ಆದರೆ ಮಕ್ಕಳಲ್ಲಿ ಅಥವಾ ಹದಿಹರೆಯದವರಲ್ಲಿ ಇದನ್ನು ಗುರುತಿಸುವುದು ಸ್ವಲ್ಪ ಕಷ್ಟವೇ. ಅವರ ಭಾವಾಭಿವ್ಯಕ್ತಿಯಲ್ಲಿ ಕಾಣುವ ಕ್ಷಿಪ್ರ ವ್ಯತ್ಯಾಸಗಳು ಬೈಪೋಲಾರ್ ಸಮಸ್ಯೆಯಿಂದ ಉಂಟಾಗಿರುವುದೋ ಅಥವಾ ವಾತಾವರಣದ ಪ್ರಭಾವದಿಂದ ಪ್ರತಿಕ್ರಿಯೆಯ ರೂಪದಲ್ಲಿ ಸಹಜವಾಗಿ ಮಕ್ಕಳ ಮನಸ್ಥಿತಿಗಳು ಹೆಚ್ಚೂಕಡಿಮೆ ಆಗಿರುತ್ತದೆಯೋ ಎಂದು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಬೇಕು. ಏಕೆಂದರೆ, ಶಾಲೆಯಲ್ಲಿ ಶಿಕ್ಷಕರ ಒತ್ತಡವೋ, ಸಹಪಾಠಿಗಳ ಒತ್ತಡವೋ, ಯಾವುದಾದರೂ ಬೇರೆ ರೀತಿಯ ಮಾನಸಿಕ ಕಿರುಕುಳವೋ, ಅದು ಮನೆಯವರಿಗೆ ಬೇಗನೆ ಗೊತ್ತಾಗುವುದಿಲ್ಲ. ಅದರಲ್ಲೂ ಮಕ್ಕಳು ಹೇಳದೇ ಹೋದರೆ ಕೆಲವು ಪಾಲಕರು ಏನೂ ವಿಚಾರಿಸುವುದೇ ಇಲ್ಲ. ಹಾಗಾಗಿ ಇಲ್ಲಿ ಸ್ವಲ್ಪ ಸೂಕ್ಷ್ಮತೆಯ ಅಗತ್ಯವಿದೆ. ಮಕ್ಕಳಲ್ಲಿ ವರ್ತನೆಗಳ ಸಮಸ್ಯೆ, ಚೈತನ್ಯಗಳ ಮಟ್ಟದ ಸಮಸ್ಯೆ (ಎನರ್ಜಿ ಲೆವೆಲ್) ಮತ್ತು ಭಾವುಕತೆಯ ಮನಸ್ಥಿತಿ (ಮೂಡ್) ಇವುಗಳು ಪರಿಸರದ ಪ್ರಭಾವದಿಂದ ಏರುಪೇರಾಗುತ್ತಿರುತ್ತದೆ. ಆದರೆ ಬೈಪೋಲಾರ್ ಸಮಸ್ಯೆಯನ್ನು ಗುರುತಿಸಿ ಅದಕ್ಕೆ ಸೂಕ್ತ ಚಿಕಿತ್ಸೆ ಕೊಡಿಸದೇ ಹೋದರೆ ಸಮಸ್ಯೆ ಉಲ್ಬಣಗೊಳ್ಳುವುದು ಮಾತ್ರವಲ್ಲದೇ, ಮಗುವಿನ ಅಥವಾ ವ್ಯಕ್ತಿಯ ಮನಸ್ಥಿತಿಯ ಸಮಸ್ಯೆಯು ವಿಪರೀತಕ್ಕೆ ಹೋಗುವ ಎಲ್ಲಾ ಸಾಧ್ಯತೆಗಳಿರುತ್ತವೆ. ಬೈಪೋಲಾರ್ ಸಮಸ್ಯೆಗಳನ್ನು ಬಿಂಬಿಸುವಂತಹ ಹೆಚ್ಚು ಹೆಚ್ಚು ಸಂಗತಿಗಳು ಮರುಕಳಿಸುತ್ತಾ ಇವೆ ಎಂದರೆ, ವಿಪರೀತಕ್ಕೆ ಹೋಗುತ್ತಿವೆ ಎಂದೇ ಅರ್ಥ. ಬೈಪೋಲಾರ್ ಸಮಸ್ಯೆಗೆ ಚಿಕಿತ್ಸೆಯನ್ನು ತೆಗೆದುಕೊಂಡಿದ್ದೇ ಆದರೆ, ಆರೋಗ್ಯಕ ರವಾದ ಮತ್ತು ಉತ್ಪಾದಕ ಬದುಕನ್ನು ಚೆಂದವಾಗಿ ನಡೆಸಲು ಸಾಧ್ಯವಿದೆ.

► ಹೇಗೆಲ್ಲಾ ಪರೀಕ್ಷಿಸಬಹುದು?

ಹಲವಾರು ಬಗೆಯ ಪರೀಕ್ಷೆಗಳಿಂದ ಬೈಪೋಲಾರನ್ನು ಗುರುತಿಸಬಹುದು. ಅವುಗಳಲ್ಲಿ ಈ ಕೆಲವು ಕೂಡಾ ಇವೆ.

1.ಭೌತಿಕ ಪರೀಕ್ಷೆ: ರಕ್ತ ಮತ್ತು ಮೂತ್ರದ ಪರೀಕ್ಷೆಗಳು ಸಹಾಯಕವಾಗುತ್ತದೆ.

2.ಮಾನಸಿಕ ಆರೋಗ್ಯದ ತಪಾಸಣೆ:  ಸೈಕಾಲಜಿಸ್ಟ್ ಅಥವಾ ಸೈಕಿಯಾಟ್ರಿಸ್ಟ್ ಅವರ ಸಹಾಯದಿಂದ ಮಾನಸಿಕ ಸ್ಥಿತಿಯ ಸಾಮಾನ್ಯ ತಪಾಸಣೆ ಮಾಡಿಸಬಹುದು.

3.ಮನಸ್ಥಿತಿಗಳ ಬದಲಾವಣೆ: ಮೂಡುಗಳ ಅಥವಾ ಮನಸ್ಥಿತಿಗಳ ಡೋಲಾಯಮಾನಸ್ಥಿತಿಯಲ್ಲಿದ್ದರೆ ಅದನ್ನು ಗುರುತು ಹಾಕಿಕೊಂಡು ಪಟ್ಟಿ ಮಾಡಬೇಕು. ಎಷ್ಟೆಷ್ಟು ಸಮಯ ಈ ರೀತಿ ಮನಸ್ಥಿತಿಯು ಅಥವಾ ವರ್ತನೆಗಳ ಅಭಿವ್ಯಕ್ತಿಗಳು ಬದಲಾಗುತ್ತಿರುತ್ತವೆ ಎಂಬುದನ್ನು ಗಮನಿಸಬೇಕು.

4.ದ ಡಯಾಗ್ನೋಸ್ಟಿಕ್ ಆ್ಯಂಡ್ ಸ್ಟಾಟಿಸ್ಟಿಕಲ್ ಮ್ಯಾನ್ಯುಲ್ ಆಫ್ ಮೆಂಟಲ್ ಡಿಸಾರ್ಡರ್ಸ್ (ಡಿಸಿಎಂ): ಇದೊಂದು ಕೈಪಿಡಿ. ನಾನಾ ಬಗೆಯ ಮನೋರೋಗಗಳ ಲಕ್ಷಣಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಇದರಿಂದ ನಾವೇ ನೋಡಿಕೊಳ್ಳಬಹುದು. ವೈದ್ಯರೂ ಕೂಡಾ ಇದರ ನೆರವನ್ನು ಪಡೆದು ರೋಗಲಕ್ಷಣಗಳನ್ನು ಗುರುತಿಸಬಹುದು.

► ಚಿಕಿತ್ಸೆ

ವ್ಯತ್ಯಸ್ತವಾಗುವಂತಹ ಮನೋಭಾವನೆಗಳನ್ನು, ಮನಸ್ಥಿತಿಯನ್ನು ಪಲ್ಲಟವಾಗದಿರುವಂತೆ ಮಾಡುವ ಕೆಲವು ಬಗೆಯ ಔಷಧಿಗಳನ್ನು ನೀಡಲಾಗುತ್ತದೆ. ಆದರೆ ಅವನ್ನು ಇಲ್ಲಿ ನಾನು ಹೆಸರಿಸುವುದು ತರವಲ್ಲ. ಏಕೆಂದರೆ, ವೈದ್ಯರನ್ನು ಸಂಪರ್ಕಿಸದೇ, ಅವರ ಸಲಹೆಯನ್ನು ತೆಗೆದುಕೊಳ್ಳದೇ ಮೂಡ್ ಸ್ಟೇಬಲೈಸರ್‌ಗಳನ್ನು, ಆ್ಯಂಟಿಸೈಕೋಟಿಕ್‌ಗಳನ್ನು, ಆ್ಯಂಟಿಡಿಪ್ರೆಸ್ಸ್ಯಾಂಟ್‌ಗಳನ್ನು ಮತ್ತು ಆ್ಯಂಟಿಆಂಕ್ಸೈಟಿ ಮೆಡಿಕೇಶನ್‌ಗಳನ್ನು ತೆಗೆದುಕೊಳ್ಳಬಾರದು. ಅದು ಪ್ರಮಾಣಗಳಲ್ಲಿ ವ್ಯತ್ಯಾಸವಾಗಬಹುದು. ಕೆಲವರ ಶರೀರ ಪ್ರಕೃತಿಗಳಿಗೆ ಒಗ್ಗದಿರಬಹುದು. ಅಲರ್ಜಿ ಇರಬಹುದು. ಆಮೇಲೆ ಎಷ್ಟು ಕಾಲ ತೆಗೆದುಕೊಳ್ಳಬೇಕು ಎಂಬುದನ್ನೂ ಕೂಡಾ ತಿಳಿಯಬೇಕಾಗಬಹುದು. ಜೊತೆಗೆ ನಾನೊಬ್ಬ ಸಮಾಲೋಚಕನೇ ಹೊರತು ಔಷಧಿಯ ಪರಿಣಿತನೂ ಅಲ್ಲದ ಕಾರಣ, ರೋಗಲಕ್ಷಣಗಳನ್ನು ಗುರುತಿಸಲು ಸಹಾಯ ಮಾಡಿ, ಸಾಧ್ಯವಾದರೆ ಸಮಾಲೋಚನೆಯಿಂದ ಸರಿಪಡಿಸಲು ಯತ್ನಿಸಿ, ಮುಂದಿನ ಚಿಕಿತ್ಸೆಗಳಿಗೆ ವೈದ್ಯರನ್ನು ಸೂಚಿಸಬಹುದು.

ಮಾನಸಿಕ ಸಮಸ್ಯೆಗಳು ಎಷ್ಟೋ ಬಾರಿ ಪುನರಾವರ್ತಿತ ಸಮಾಲೋಚನೆಗಳಿಂದಲೇ ಸರಿಹೋಗುವ ಸಾಧ್ಯತೆಗಳಿರುವು ದರಿಂದ ಮನಸ್ಸಿನ ಆಲೋಚನಾ ಕ್ರಮಗಳನ್ನು ಬದಲಿಸುವ, ತಮ್ಮನ್ನು ಮತ್ತು ತಮ್ಮ ಮಾನಸಿಕ ವಾತಾವರಣವನ್ನು ಅರ್ಥ ಮಾಡಿಕೊಳ್ಳುವ ದಿಕ್ಕಿನಲ್ಲಿ ಸಹಾಯ ಮಾಡಬಹುದು. ಮಕ್ಕಳ ವಿಷಯದಲ್ಲಂತೂ ಮನೆಯ ವಾತಾವರಣ, ಶಾಲೆಯ ವಾತಾವರಣ, ಪಾಲಕರ ಮತ್ತುಶಿಕ್ಷಕರ ಸೂಕ್ತ ನಡವಳಿಕೆಗಳು ಬೈಪೋಲಾರ್ ಸಮಸ್ಯೆಯನ್ನು ನಿವಾರಣೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಒಟ್ಟಾರೆ ಈ ವಿಷಯಗಳ ಬಗ್ಗೆ ಜಾಗ್ರತೆ, ಅದನ್ನು ನಿರ್ವಹಿಸುವ ಅರಿವೇ ಎಷ್ಟೋ ಚಿಕಿತ್ಸಕವಾಗಿ ಕಾರ್ಯ ನಿರ್ವಹಿಸುತ್ತದೆ. ಇದಕ್ಕೆ ಎಲೆಕ್ಟ್ರೋಕನ್ವಲ್ಸಿವ್ ಚಿಕಿತ್ಸೆ (ಇಸಿಟಿ), ನಿದ್ರಾ ಚಿಕಿತ್ಸೆ, ಆಹಾರ ಮತ್ತು ಪೇಯಗಳಲ್ಲಿ ಪೂರಕವಾಗಿರುವಂತಹವುಗಳನ್ನು ನೀಡುವುದು, ಆಕ್ಯುಪಂಕ್ಚರ್ ಅಥವಾ ಆಕ್ಯುಪ್ರೆಶರ್ ಮತ್ತು ಧ್ಯಾನಗಳಂತಹ ವಿಧಾನಗಳನ್ನೂ ಕೂಡಾ ಚಿಕಿತ್ಸೆಗಳಾಗಿ ಬಳಸುವುದುಂಟು.

ಸೂಕ್ತ ಮತ್ತು ಉತ್ತಮ ಜೀವನ ಪದ್ಧತಿಯ ಬಳಕೆ, ನಿಯಮಿತ ವಾಗಿ ಆಹಾರ ಮತ್ತು ನಿದ್ರೆ, ಸ್ನೇಹಿತರು ಮತ್ತು ಕುಟುಂಬದವರ ಜೊತೆ ಮುಕ್ತವಾಗಿ ತಮ್ಮ ಸಮಸ್ಯೆಯ ಕುರಿತಾಗಿ ಮಾತಾಡಿ ಅದಕ್ಕೆ ಚಿಕಿತ್ಸಕವಾಗಿ ಸಹಕರಿಸುವುದಕ್ಕೆ ಕೋರುವುದು ಕೂಡಾ ಚಿಕಿತ್ಸೆಯ ಭಾಗಗಳೇ ಆಗಿವೆ. ಮಕ್ಕಳಾಗಲಿ ಅಥವಾ ದೊಡ್ಡವರಾಗಲಿ ಬೈಪೋಲಾರ್ ಸಮಸ್ಯೆಯಿಂದ ಅತಿಯಾಗಿ ಚಟುವಟಿಕೆಯಿಂದ ಕೂಡಿದ್ದರೆ ಅಥವಾ ಖಿನ್ನತೆಯಿಂದ ಕುಸಿದಿರುವಂತೆ ತೋರಿದರೆ, ತಜ್ಞ ಸಮಾಲೋಚಕರ ಬಳಿಗೆ ಒಯ್ಯಬೇಕು ಅಥವಾ ಮನೋ ವೈದ್ಯರನ್ನು ಕಾಣಬೇಕು. ಯಾವುದಕ್ಕೂ ವೃತ್ತಿಪರ ಚಿಕಿತ್ಸಕ ನೆರವು ಸಿಗುವವರೆಗೂ ಸಮಸ್ಯೆ ಇರುವ ಮಗುವನ್ನಾಗಲಿ, ದೊಡ್ಡವರನ್ನಾಗಲಿ ಮೆಲ್ಲನೆ ಮಾತಾಡಿಸಿಕೊಂಡು, ಸಮಾಧಾನಕರವಾದ ವರ್ತನೆಗಳಿಂದ ಜೊತೆಗಿರಬೇಕು. ಹರಿತವಾದ ವಸ್ತುಗಳಾಗಲಿ, ಮಾರಕಾಸ್ತ್ರಗಳಾಗಲಿ ಕೈಗೆಟಕದಂತೆ ಅಥವಾ ಸಮೀಪವಿರದಂತೆ ನೋಡಿಕೊಳ್ಳಬೇಕು. ಎತ್ತರವಾದ ಸ್ಥಳವಿದ್ದರೂ ಎಚ್ಚರಿಕೆಯಿಂದ ಕಾಯಬೇಕು. ಸಮಸ್ಯೆ ಇರುವವರು ಮಾತಾಡಿಸಿದರೆ ಮಾತಾಡಬೇಕು. ಅವರು ವ್ಯತಿರಿಕ್ತವಾಗಿ ಮಾತಾಡಿದರೂ ವಾದ ಮಾಡಬಾರದು. ಅವರು ಇಚ್ಛಿಸಿದರೆ ಸಂಗೀತವನ್ನು ಮೆಲುದನಿಯಲ್ಲಿ ಹಾಕಬಹುದು. ನೃತ್ಯ ಇತ್ಯಾದಿ ಕಾರ್ಯಕ್ರಮವನ್ನು ನೋಡಬಹುದು. ಪ್ರಕೃತಿಯ ಸುಂದರ ದೃಶ್ಯಗಳನ್ನು ತೋರಿಸುವಂತಹ ಕೆಲಸ ಮಾಡಬೇಕು. ಮೀನೆಣ್ಣೆ ಮತ್ತು ಅಮಿನೋ ಆಸಿಡ್ ಇರುವಂತಹ ಸಪ್ಲಿಮೆಂಟುಗಳೂ ಕೂಡಾ ಬೈಪೋಲಾರ್‌ಗೆ ಚಿಕಿತ್ಸಕ ಪರಿಣಾಮಗಳನ್ನು ಬೀರುತ್ತದೆ ಎಂದು ಹೇಳುತ್ತಾರೆ. ಒಟ್ಟಾರೆ ಬೈಪೋಲಾರ್ ಇರುವವರು ಮತ್ತು ಅವರ ಜೊತೆಯಲ್ಲಿರುವವರು ಪ್ರಜ್ಞಾಪೂರ್ಣವಾಗಿ ಸಹನೆಯನ್ನು ಅಭ್ಯಾಸ ಮಾಡಲೇಬೇಕು. ಬೇರೆ ದಾರಿಯಿಲ್ಲ

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News