'ಇದು ಅಂತಿಮ ಎಚ್ಚರಿಕೆ, ಬಿಜೆಪಿಗೆ ಬನ್ನಿ' ಎಂಬ ಆಹ್ವಾನ ನಿರಾಕರಿಸಿದ್ದಕ್ಕೆ ಅಣ್ಣ ಜೈಲಿನಲ್ಲಿದ್ದಾರೆ

Update: 2019-09-28 14:20 GMT

ಬೆಂಗಳೂರು, ಸೆ. 28: ‘ನಿಮಗಿದು ಅಂತಿಮ ಎಚ್ಚರಿಕೆ, ಬಿಜೆಪಿಗೆ ಬನ್ನಿ ಎಂಬ ಆಹ್ವಾನ ನಿರಾಕರಿಸಿದ ಪರಿಣಾಮವಾಗಿಯೇ ನನ್ನ ಅಣ್ಣ ತಿಹಾರ್ ಜೈಲಿನಲ್ಲಿರಬೇಕಾಗಿ ಬಂದಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಇಂದಿಲ್ಲಿ ಹೇಳಿದ್ದಾರೆ.

ಶನಿವಾರ ಕನಕಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಈಡಿ, ಐಟಿ, ಸಿಬಿಐ ಸೇರಿದಂತೆ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸರಕಾರ ಏನೇ ಮಾಡಿದರೂ, ನ್ಯಾಯಾಲಯದ ಮೇಲೆ ಮಾತ್ರ ನಮಗೆ ಬಲವಾದ ವಿಶ್ವಾಸವಿದೆ. ಹೀಗಾಗಿ ಶೀಘ್ರವೇ ಸಹೋದರ ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ಸಿಗುವ ಸಾಧ್ಯತೆಗಳಿವೆ ಎಂದು ಡಿ.ಕೆ.ಸುರೇಶ್ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

ಖಾಸಗಿ ಸುದ್ದಿ ವಾಹಿನಿಗಳು ನಮ್ಮ ಮೇಲೆ ಇಲ್ಲ-ಸಲ್ಲದ ಊಹಾಪೋಹದ ಸುದ್ದಿಗಳನ್ನು ನಿತ್ಯ ಪ್ರಕಟಿಸುತ್ತಿವೆ. ಆಧಾರರಹಿತ ಆರೋಪಗಳನ್ನು ನಮ್ಮ ಮೇಲೆ ಹೊರಿಸಲಾಗುತ್ತಿದೆ. ಹೀಗಾಗಿ ಎಲ್ಲ ಸುದ್ಧಿ ವಾಹಿನಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಸುರೇಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News