‘ಚುನಾವಣಾ ಆಯೋಗ’ ಬಿಜೆಪಿ ಸದಸ್ಯತ್ವ ಪಡೆಯಲಿ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

Update: 2019-09-28 15:12 GMT

ಬೆಂಗಳೂರು, ಸೆ. 28: ಬಿಜೆಪಿಗೆ ಅನುಕೂಲ ಆಗುವ ರೀತಿಯಲ್ಲಿ ಚುನಾವಣಾ ಆಯೋಗ ಉಪಚುನಾವಣೆ ಘೋಷಣೆ ಮಾಡಿದೆ. ಆಯೋಗ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ದಿನಾಂಕ ಘೋಷಣೆ ಮಾಡಿ ನವೆಂಬರ್ 11ರಿಂದ ಮಾದರಿ ನೀತಿ ಸಂಹಿತೆ ಎಂದರೆ, ಅಲ್ಲಿಯವರೆಗೆ ರಾಜ್ಯ ಸರಕಾರ ಏನು ಬೇಕಾದರೂ ಆಮಿಷವೊಡ್ಡಬಹುದೇ? ಇದು ಆಡಳಿತ ಯಂತ್ರದ ದುರ್ಬಳಕೆ ಅಲ್ಲವೇ? ಎಂದು ಪ್ರಶ್ನಿಸಿದರು.

ಬಿಜೆಪಿ ಏಜೆಂಟ್: ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ರೀತಿ ವರ್ತಿಸುತ್ತಿದೆ. ಆಯೋಗ ಬಿಜೆಪಿಯ ಸದಸ್ಯತ್ವ ತೆಗೆದುಕೊಳ್ಳಬೇಕು ಎಂದು ಲೇವಡಿ ಮಾಡಿದ ಅವರು, ಬಿಜೆಪಿ ಹೇಳಿದಂತೆ ಕೇಳುವ ಆಯೋಗ ತನ್ನ ಸ್ವಾಯತ್ತತೆ ಕಳೆದುಕೊಂಡಿದೆ. ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಸಲು ಸಾಧ್ಯವಾಗದೆ ಇದ್ದಲ್ಲಿ ಚುನಾವಣಾ ಆಯೋಗ ಅಗತ್ಯವೇ? ಎಂದು ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದರು.

ಐಟಿ, ಈಡಿ, ಸುಪ್ರೀಂ ಕೋರ್ಟ್ ಎಲ್ಲರೂ ಸ್ವಾಯತ್ತತೆ ಕಳೆದುಕೊಂಡರೆ ನಮ್ಮ ಗತಿಯೇನು? ವ್ಯವಸ್ಥೆ ಎಲ್ಲಿಗೆ ಹೋಗಿ ಮುಟ್ಟುತ್ತಿದೆ? ಹಿಟ್ಲರ್ ಆಡಳಿತ ದೇಶದಲ್ಲಿ ಮತ್ತೆ ಜಾರಿಯಾಗುತ್ತಿದೆ ಎಂಬ ಸಂಶಯ ಕಾಡುತ್ತಿದೆ ಎಂದ ಅವರು, ಚುನಾವಣಾ ಆಯೋಗಕ್ಕೆ ತಕ್ಷಣವೇ ನೀತಿ ಸಂಹಿತೆ ಜಾರಿಗೆ ಮನವಿ ಮಾಡುತ್ತೇವೆ ಎಂದರು.

ಗೊಂದಲ: ಚುನಾವಣಾ ಆಯೋಗದ ನಡವಳಿಕೆ ಖಂಡನೀಯ. ಒಮ್ಮೆ ಅನರ್ಹ ಶಾಸಕರು ಸ್ಪರ್ಧೆ ಮಾಡುವಂತಿಲ್ಲ. ಮತ್ತೊಮ್ಮೆ ಅನರ್ಹರು ಸ್ಪರ್ಧೆಗೆ ಯಾವುದೇ ಅಡ್ಡಿ ಇಲ್ಲ ಎಂದು ಚುನಾವಣಾ ಆಯೋಗವೇ ಗೊಂದಲ ಸೃಷ್ಟಿಸುತ್ತಿದೆ. ಒಮ್ಮೆ ಮುಂದೂಡಿಕೆ, ಮತ್ತೆ ಚುನಾವಣಾ ಘೋಷಣೆ ಮಾಡಲಾಗಿದೆ ಎಂದು ದಿನೇಶ್ ಗುಂಡೂರಾವ್ ಟೀಕಿಸಿದರು.

ಅನರ್ಹ ಶಾಸಕರಿಗೆ ನಮ್ಮ ಪಕ್ಷದ ವಿಚಾರಗಳ ಅಗತ್ಯವೇನು? ಈಗಾಗಲೇ ಅವರೆಲ್ಲ ಪಕ್ಷವನ್ನು ತ್ಯಜಿಸಿದ್ದಾರೆ. ಈಗಾಗಲೇ ಅವರೆಲ್ಲರನ್ನೂ ಉಚ್ಚಾಟನೆ ಮಾಡಲಾಗಿದೆ. ಅವರಿಗೆ ನಮ್ಮ ಬಗ್ಗೆ ಏಕೆ ಚಿಂತೆ ಎಂದು ಪ್ರಶ್ನಿಸಿದ ಅವರು, ಅವರು ಎಲ್ಲಿದ್ದಾರೋ ಅಲ್ಲಿಯೇ ಚೆನ್ನಾಗಿ ಇರಲಿ. ಅಲ್ಲೆ ಮಂತ್ರಿಗಳು ಆಗಲಿ. ಅವರನ್ನು ಯಾವುದೇ ಕಾರಣಕ್ಕೂ ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

‘ಅಧಿಕಾರಕ್ಕಾಗಿ ಪಕ್ಷ ತ್ಯಜಿಸಿಲ್ಲ’ ಎಂದು ಇದೀಗ ಪಕ್ಷದ ಬಗ್ಗೆ ಮಮತೆ ವ್ಯಕ್ತಪಡಿಸುವುದು ಕ್ಷುಲ್ಲಕ. ಪಕ್ಷದಲ್ಲಿ ಏನೂ ಪಡೆದುಕೊಳ್ಳಲು ಸಾಧ್ಯವಾಗದ ಹಲವು ಮಂದಿ ನಿಷ್ಠಾವಂತರಿದ್ದಾರೆ. ಆದರೆ, ಎಲ್ಲ ಪದವಿಗಳನ್ನು ಪಡೆದವರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ಅನರ್ಹ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.

‘ಕೇಂದ್ರ ಸರಕಾರದ ಸಂವಿಧಾನ ವಿರೋಧಿ ಕ್ರಮಗಳನ್ನು ವಿರೋಧಿಸುವ ಧೈರ್ಯ ಯಾರೂ ಮಾಡುತ್ತಿಲ್ಲ, ಒಂದು ವೇಳೆ ವಿರೋಧ ವ್ಯಕ್ತಪಡಿಸಿದರೆ ಜೈಲಿಗೆ ಹಾಕುತ್ತಾರೆ. ಇದನ್ನು ಗಮನಿಸಿದರೆ ಪೊಲೀಸ್, ಗೂಂಡಾ ರಾಜ್ಯ ಆಗುತ್ತಿರುವುದು ಆತಂಕಕಾರಿ’

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News