ಕವಿಗಳು ಕಂಡ ಗಾಂಧೀಜಿ

Update: 2019-09-28 16:04 GMT

► ಮಹಾತ್ಮಾ ಗಾಂಧಿ

ಈ ಮಹಾಸ್ವಾತಂತ್ರರಣಯಾಗ ಧೂಮದಲಿ

ಶ್ವೇತಾಗ್ನಿ ಜ್ವಾಲೆಯೊಂದುರಿಯುತಿದೆ ನಿಶ್ಚಲಂ

ರಂಜಿಸುತ್ತಿದೆ-ಶಾಂತಿಯಲಿ ಹಿಮಮಹಾಚಲಂ

ರಾರಾಜಿಪಂತೆ ನೀಲಿಮ ನಭೋಧಾಮದಲಿ

ಲೋಕಲೋಚನದಂತರಾಳದಾರಾಮದಲಿ

ವಿಶ್ವಕಂಪನಕಾರಿಯಾದ ಧರ್ಮದ ಬಲಂ

ಮೂರ್ತಿಗೊಳೆ ಮೂಡಿದೀತನು ಮಹಾತ್ಮನೆ ವಲಂ!

ಬಾಳು ಪಾವನಮಾದುದೀತನಿಂ ಭೂಮಿಯಲಿ!

ಓ ಮಹಾತ್ಮನೇ, ನಿನ್ನ ಸಾನ್ನಿಧ್ಯತೀರ್ಥದಲಿ

ಮಾನವನ ಮೋಹಮದಮಾತ್ಸರ್ಯಗಳು ಮಿಂದು

ಪ್ರೇಮದಿ ಪ್ಪುನೀತವಾಗಿಹವು! ಸುಮೂಹೂರ್ತದಲಿ

ಭಾರತಾಂಬೆಯ ಸಿರಿವಸಿರಿನಿಂದಲೈ ತಂದು

ಧರ್ಮದಲಿ ನೆಚ್ಚುಗೆಡುತಿದ್ದೆಮಗೆ ನೀನಿತ್ತೆ,

ಪ್ರಚ್ಛನ್ನ ಕಲ್ಕಿಯೇ ದೃಢಭಕ್ತಿಯನು ಮತ್ತೆ!

  • ರಾಷ್ಟ್ರ ಕವಿ ಕುವೆಂಪು

► ಇನ್ನಿನಿಸು, ನೀ ಮಹಾತ್ಮಾ, ಬದುಕಬೇಕಿತ್ತು!

ಇನ್ನಿನಿಸು ನೀ, ಮಹಾತ್ಮಾ, ಬದುಕಬೇಕಿತ್ತು!

ಈಗ ಭಾರತಕತ್ಯಗತ್ಯವಿದೆ ನಿನ್ನ,

ಬಿರುಗಾಳಿಗೊಲೆವ ಹಡಗಂತಿಹುದದಾಸತ್ತು,

ನಿನ್ನ ಹೊರತಾರೊಯ್ಯೆ ರೇವಿನೊಳದನ್ನ?

ಹಿಮನಗವೊ ನಿನ್ನಚಲ ವಿಮಲ ಭಗವದ್ಭಕ್ತಿ,

ಜಗವನ್ನುಪ್ಪ್ಪುವ ವಾರ್ಧಿಯೆನೆ ಜಗತ್‌ಪ್ರೀತಿ,

ನಿನ್ನ ಸೂರ್ಯಾತಪಕಭಿನ್ನಮಾತ್ಮಿಕಶಕ್ತಿ-

ಕಾದುವೈ ನಮ್ಮ ನೀವರಮೇಕರೀತಿ!

ಸ್ವಾರ್ಥಪರರಾಗಿಹೆವು ದೇವರಿಲ್ಲೆಮಗಿಂದು,

ಸೋದರತೆ ಇಲ್ಲ, ಮುಂದಿನದಿಲ್ಲ ಗೊಡವೆ!

ಧರ್ಮಬಾಹಿರರೆಮ್ಮನೆತ್ತಲಿನ್ನಾರೆಂದು

ತೋಚದೆ, ಮಹಾತ್ಮಾ, ನಿನಗಿಂತು ಮೊರೆಯಿಡುವೆ ಗಾಳಿ ಕಾಣದೆ ಬೀಸಿ ಉಸುರುಗೊಳಿಪಂತೆ,

ತಾರ ನವಜೀವನವ ನಮ್ಮನುಳಿಪಂತೆ!

  • ರಾಷ್ಟ್ರ ಕವಿ ಎಂ. ಗೋವಿಂದ ಪೈ

► ನಮ್ಮ ಬಾಪೂ

ಒಂದೆ ಹಿಡಿಮೂಳೆ ಚಕ್ಕಳ ಅಷ್ಟೆ; ಅದಕೆ ಸುರಿ

ಮೂರು ನಾಲ್ಕೊ ಚಮಚ ರಕ್ತ, ಮಾಂಸ, ಜೊತೆಗಿರಿಸು ಪಾಪವಂ ನೆರೆತೊರೆದ ಕಡಲಿನಾಳದ ಮನಸ,

ನೆರೆಬಂದ ಕಡಲಿನೊಲ್ ಪ್ರೇಮವಂ ತುಂಬಿದೆದೆಯ;

ಹಚ್ಚು-ಮೊರಕಿವಿಯೆರಡ, ಎರಡು ಪಿಳಿಪಿಳಿ ಕಣ್ಣ;

ಹಾಲುಹಸುಳೆಯ ಮಂದಹಾಸವನು ಲೇಪಿಸದಕೆ,

ಒಳಗಿರಿಸು, ಜೇನು ನಗುವವೊಲಿನಿಯ ನಾಲಿಗೆಯ

ಮೇಣ್ ಹಿಮಗಿರಿಯ ಮೀರಿಸಿ ನಿಮಿರ್ದ ಹಿರಿಯಾತ್ಮವ

ಪೂರಣವೊ? ಸೋಯಬೀನ್ಸ್, ಖರ್ಜೂರ, ಮೇಕೆ ಹಾಲು!

ಮೇಲಿನಂಚಿನವರೆಗು ದುಃಖಿಗಳ ಕಣ್ಣೀರು ತುಂಬಿ

ಪಕ್ವ ಮಾಡೀ ಇದನು ಸೆರೆಮನೆಯೊಳೊಂದಿನಿತು ವರುಷ

ಹೊರಗೆ ತೆಗೆ ಪರಯ ಪರಿವಾರದಿಂ ಗಮಗಮಿಸಗೊಳಿಸಿ,

ಚಿಂದಿಯಂ ಸುತ್ತಿ, ಸೆಳಬೊಂಬಿನಾಲಂಬವನ್ನಿತ್ತು

ಬಡಿಸು ತಾ! ಅವನೆ ಕಾಣ್! ಲೋಕತಾರಕ! ನಮ್ಮ ಬಾಪೂ!

  • ಇಂಗ್ಲಿಷ್ ಮೂಲ: ಟಿ.ಪಿ.ಕೈಲಾಸಂ
  • ಕನ್ನಡ ಅನುವಾದ: ಜಿ.ಪಿ. ರಾಜರತ್ನಂ

► ಗಾಂಧಿ

ಇಳೆಗಹಿಂಸೆಯ ಪರಮ ತತ್ವವನು ತೋಳೆತ್ತಿ

ಉಸಿರ ಬಲವುಳ್ಳನಕ ಸಾರಿದ ಗುರು;

ದರ್ಪವನು ಧೈರ್ಯದಲಿ, ಶಸ್ತ್ರವನು ಸಹನೆಯಲಿ,

ಶಠತೆಯನು ಸತ್ಯದಲಿ ಜಯಿಸಿದ ಕಲಿ;

ಹುಡಿಯ ಹುಳಗಳನೆತ್ತಿ ವಜ್ರ ಹೃದಯವ ಬಿತ್ತಿ

ವೀರ ಜನ್ಮವನಿತ್ತ ಹಿರಿಯ ತಂದೆ;

ನೆಲದ ನಡೆವಳಿಕೆಯಲಿ ನಾಕದೌನ್ನತ್ಯವನು

ಮೇಳವಿಸಿ ತೋರಿದ ಪವಾಡಪುರುಷ;

ಪ್ರೇಮ ಸಂಸ್ಥಾಪನೆಯ ವಿಶ್ವಜಿದ್ಯಜ್ಞದಲಿ

ಪ್ರಾಣ ಪೂರ್ಣಾಹುತಿಯನಿತ್ತ ದಾನಿ;

ಭಾರತದ ಭಾಗ್ಯರವಿ; ದೀನದಲಿತರ ರಕ್ಷೆ;

ವಿಮಲ ಧರ್ಮದ ವಾಣಿ; ಜನತೆಯಂತಸಾಕ್ಷಿ;

ಸರ್ವೋದಯದ ಸೂತ್ರಧಾರ ಗಾಂಧಿ!

  • ತೀ.ನಂ. ಶ್ರೀಕಂಠಯ್ಯ

► ಮರಣ?

ಅದ್ಭುತವು ಅದ್ಭುತವು ವಿಶ್ವಕದ್ಭುತವು

ಸತ್ಯಶರಣನ ಸಂದ ಮರಣದದ್ಭುತವು

ಮಣಿಹ ಸಂದಿತು; ದೇಹ ಕೆಳಗೆ ಇಟ್ಟ;

ಧ್ಯೇಯವನೆ ನಕ್ಷತ್ರ ಮಾಡಿಬಿಟ್ಟ

ಎಂಥ ನಗು! ಎಂಥ ಮಗು! ಎಂಥ ಮನುಜ!

ನಮ್ಮಂತೆ ಕಂಡರೂ ದೇವತನುಜ

ಗಾಂಧಿಯೆಂಬುದು ಹೆಸರೆ? ಮುಪ್ಪಿನಾಕೃತಿಯೆ?

ಗಾಂಧಿಯೆಂಬುದು ನಿಖರ ದಿವ್ಯ ಕೃತಿಯೆ!

ಕಡ್ಡಿಯಲುಗದು ಅಕಸ್ಮಾತ್ತಿನಿಂದ

ಗುಡ್ಡ ಉರುಳಿತೇನು ಗುಂಡಿನಿಂದ?

  • ದ.ರಾ.ಬೇಂದ್ರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News