ಮಾಜಿ ಪ್ರಧಾನಿ ಚಂದ್ರಶೇಖರ್ ಸಿದ್ಧಾಂತಗಳು ರಾಜಕೀಯ ಬಿಕ್ಕಟ್ಟುಗಳಿಗೆ ಪರಿಹಾರ: ಬಸವರಾಜ ಬೊಮ್ಮಾಯಿ

Update: 2019-09-28 17:33 GMT

ಬೆಂಗಳೂರು, ಸೆ.28: ಮಾಜಿ ಪ್ರಧಾನಿ ಚಂದ್ರಶೇಖರ್ ಎಂದೂ ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ. ಜನರಿಗಾಗಿ ರಾಜಕಾರಣ ಮಾಡಿದವರು. ಅವರ ನೀತಿ, ಸಿದ್ಧಾಂತಗಳು ವರ್ತಮಾನ, ಭವಿಷ್ಯದ ರಾಜಕೀಯ ಬಿಕ್ಕಟ್ಟುಗಳಿಗೆ ಪರಿಹಾರ ತೋರುವ ಮಾರ್ಗದರ್ಶಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಶನಿವಾರ ಭಾರತ ಯಾತ್ರಾ ಕೇಂದ್ರ ಮತ್ತು ಬಯಲು ಪರಿಷತ್ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ರಾಜ್ಯಸಭೆಯ ಉಪಸಭಾಪತಿ ಹರಿವಂಶರಾಯ್ ಮತ್ತು ರವಿದತ್ತ ವಾಜಪೇಯಿ ಬರೆದಿರುವ ಚಂದ್ರಶೇಖರ್ ‘ದಿ ಲಾಸ್ಟ್ ಐಕಾನ್ ಆಫ್ ದಿ ಐಡಿಯಾಲಾಜಿಕಲ್ ಪಾಲಿಟಿಕ್ಸ್’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜಕಾರಣವೆಂದರೆ ಆಡಳಿತ ಪಕ್ಷ, ವಿರೋಧ ಪಕ್ಷವೆಂಬಂತಾಗಿದೆ. ರಾಜಕಾರಣ ಜನರಿಗಾಗಿ ಎಂಬುದು ಹಿನ್ನೆಲೆಗೆ ಸರಿದಿದೆ. ರಾಜಕಾರಣ ಜನರಿಗಾಗಿ ಎಂಬ ಬದಲಾವಣೆ ಆಗಬೇಕಿದೆ. ಈ ಬದಲಾವಣೆಗಾಗಿ ಜನ ಭಾಗವಹಿಸುವಿಕೆಯ ರಾಜಕಾರಣ ದೇಶದಲ್ಲಿ ಆರಂಭವಾಗಬೇಕಾಗಿದೆ. ಆಗ ಮಾತ್ರ ಪ್ರಜಾಪ್ರಭುತ್ವದ ಘನತೆ ಉಳಿಯಲು ಸಾಧ್ಯ ಎಂದು ಅವರು ತಿಳಿಸಿದರು.

ಚಂದ್ರಶೇಖರ್ ಅವರ ಭಾರತಯಾತ್ರಾ ಸಾವಿರಾರು ಯುವಕರಿಗೆ ಸ್ಫೂರ್ತಿಯಾಗಿತ್ತು. ಅವರನ್ನು ಎಂದೂ ನೋಡದವರು ಭೇಟಿಯಾಗದವರು ಚಂದ್ರಶೇಖರ್ ಅವರ ಕ್ರಾಂತಿಕಾರಿಕ ಭಾಷಣಗಳಿಂದ ಸ್ಫೂರ್ತಿ ಪಡೆದು ತುರ್ತು ಪರಿಸ್ಥಿತಿಯಲ್ಲಿ ಸರಕಾರದ ವಿರುದ್ಧ ಹೋರಾಟಕ್ಕಿಳಿಸಿದ್ದರು ಎಂದು ಅವರು ಸ್ಮರಿಸಿದರು.

ಪುಸ್ತಕದ ಲೇಖಕ ರಾಜ್ಯಸಭೆಯ ಉಪಸಭಾಪತಿ ಹರಿವಂಶರಾಯ್ ಮಾತನಾಡಿ, ಚಂದ್ರಶೇಖರ್ ಜನಪ್ರಿಯ ರಾಜಕಾರಣ ಮಾಡಿದವರಲ್ಲ. ರಾಜಕಾರಣ ಎಂದರೆ ಶೇ.10ರಷ್ಟು, ಶೇ.90ರಷ್ಟು ಮಾನವೀಯ ಸಂಬಂಧ ಎಂಬ ಸಿದ್ಧಾಂತದಲ್ಲಿ ನಂಬಿಕೆಯಿಟ್ಟಿದ್ದರು ಎಂದರು. ದೇಶದ ಇಂದಿನ ಯುವ ತಲೆಮಾರಿಗೆ ಚಂದ್ರಶೇಖರ್ ಅವರ ಬದುಕು ಜೀವನ ಪ್ರೇರಣೆ ನೀಡುವಂತದ್ದು, ಅತ್ಯಂತ ಹಿಂದುಳಿದ ಪ್ರದೇಶದಿಂದ ಬಂದು ಸ್ವಂತ ಸಾಮರ್ಥ್ಯದ ಮೇಲೆ ಬೆಳೆದು ದೇಶದ ಅತ್ಯುನ್ನತ ಸ್ಥಾನಕ್ಕೆ ಏರಿದ ಚಂದ್ರಶೇಖರ್ ಸಾಧನೆ ಯುವಜನಾಂಗಕ್ಕೆ ಪ್ರೇರಣೆಯಾಗುವಂತದ್ದು ಎಂದು ಅವರು ಹೇಳಿದರು.

ಚಂದ್ರಶೇಖರ್ ಪ್ರಜಾ ಸೋಯಲಿಸ್ಟ್ ಪಕ್ಷ ತೊರೆದು ಕಾಂಗ್ರೆಸ್ ಸೇರುವ ಸಂದರ್ಭದಲ್ಲಿ ಇಂದಿರಾಗಾಂಧಿಯವರನ್ನು ಭೇಟಿಯಾದ ಸಂದರ್ಭದಲ್ಲಿ ಕಾಂಗ್ರೆಸ್‌ ಅನ್ನೇ ಸಮಾಜವಾದಿ ಮಾಡುತ್ತೇನೆ ಎಂದಿದ್ದರು. ಆಗ ಇಂದಿರಾಗಾಂಧಿಯವರು ಅದು ಆಗದಿದ್ದರೆ ಎಂದಾಗ ಕಾಂಗ್ರೆಸ್‌ನ್ನೇ ಇಬ್ಭಾಗ ಮಾಡುತ್ತೇನೆ ಎಂದು ಹೇಳಿ ದಿಟ್ಟತನ ಮೆರೆದಿದ್ದ ಮಹಾನ್ ನಾಯಕ ಎಂದು ಅವರು ಬಣ್ಣಿಸಿದರು.

ಈ ಸಂದರ್ಭದಲ್ಲಿ ವಿಧಾನಸಭೆಯ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್, ಭಾರತಯಾತ್ರಾ ಕೇಂದ್ರದ ಅಧ್ಯಕ್ಷ ಸುಧೀಂದ್ರ ಬದೂರಿಯಾ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಡಿ.ವೈ. ಪಾಟೀಲ್, ರಾಜ್ಯದ ಭಾರತಯಾತ್ರಾ ಕೇಂದ್ರದ ಅಧ್ಯಕ್ಷ ಡಿ.ಎಲ್. ಶಂಕರ್, ಬಯಲು ಪರಿಷತ್‌ನ ಅಧ್ಯಕ್ಷ ವೈ.ಎಸ್.ವಿ.ದತ್ತ ಸೇರಿದಂತೆ ಚಂದ್ರಶೇಖರ್ ಅವರ ಭಾರತಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಿವಿಧ ರಾಜ್ಯಗಳ ಹಲವು ಪಾದಯಾತ್ರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News