×
Ad

ಮೆಟ್ರೋ ರೈಲುಗಳು ಗುತ್ತಿಗೆಯಲ್ಲಿ ಪಡೆಯಲು ಚಿಂತನೆ

Update: 2019-09-28 23:20 IST

ಬೆಂಗಳೂರು, ಸೆ.28: ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್) ನಮ್ಮ ಮೆಟ್ರೋದ ಎರಡನೆ ಹಾಗೂ ಮೂರನೆ ಹಂತದಲ್ಲಿ ರೈಲುಗಳನ್ನು ಗುತ್ತಿಗೆ ರೂಪದಲ್ಲಿ ಪಡೆಯಲು ಚಿಂತನೆ ನಡೆಸಲಾಗಿದೆ.

ನಮ್ಮ ಮೆಟ್ರೋ ಎರಡನೇ ಹಂತದ ಕಾರ್ಯಾಚರಣೆ ಮತ್ತು ನಿರ್ವಹಣೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಗುತ್ತಿಗೆ ನೀಡಲು ನಿರ್ಧರಿಸಿದ ಬೆನ್ನಲ್ಲೇ 2ಎ ಮತ್ತು 3ನೇ ಹಂತದಲ್ಲಿ ರೈಲುಗಳನ್ನೂ ಗುತ್ತಿಗೆ ರೂಪದಲ್ಲಿ ಪಡೆಯಲು ನಿಗಮ ಚಿಂತನೆ ನಡೆಸಿದೆ. ದಿಲ್ಲಿ ಮೆಟ್ರೋ ರೈಲು ಯೋಜನೆಯಲ್ಲಿ 35 ವರ್ಷ ಲೀಸ್‌ನಲ್ಲಿ ಪಡೆಯಲು ಉದ್ದೇಶಿಸಲಾಗಿದೆ. ಇದೇ ಮಾದರಿಯನ್ನು ಇಲ್ಲಿ ಪರಿಚಯಿಸುವ ಚಿಂತನೆ ನಡೆದಿದೆ.

ಮೆಟ್ರೋ ರೈಲುಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚವನ್ನು ಸಾಧ್ಯವಾದಷ್ಟು ತಗ್ಗಿಸುವ ಮೂಲ ಉದ್ದೇಶದಿಂದ ಗುತ್ತಿಗೆ ವ್ಯವಸ್ಥೆ ವಿಸ್ತರಣೆಗೆ ಮುಂದಾಗಿದ್ದು, ಇದರಿಂದಾಗುವ ಉಳಿತಾಯವನ್ನು ಯೋಜನಾ ನಿರ್ಮಾಣಕ್ಕೆ ವಿನಿಯೋಗಿಸುವ ಲೆಕ್ಕಾಚಾರ ಇದರ ಹಿಂದಿದೆ ಎನ್ನಲಾಗಿದೆ.

2ಎ ಕೆ.ಆರ್.ಪುರದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಇದ್ದು, ಸುಮಾರು 18 ಕಿ.ಮೀ. ಮಾರ್ಗ ನಿರ್ಮಿಸಲಾಗುತ್ತಿದೆ. ಅದೇ ರೀತಿ, 3ನೇ ಹಂತದಲ್ಲಿ ಸುಮಾರು 83 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ನಿರ್ಮಿಸಲು ಉದ್ದೇಶಿಸಿದ್ದು, ಇದು ಬಹುತೇಕ ನಗರದ ಹೊರವರ್ತುಲವನ್ನು ಸುತ್ತುವರಿಯಲಿದೆ.

ನಾಗವಾರದಿಂದ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ, ಕೋಗಿಲು ಕ್ರಾಸ್‌ನಿಂದ ರಾಜಾನುಕುಂಟೆ, ಹೆಬ್ಬಾಳದಿಂದ ಜೆ.ಪಿ.ನಗರ ಸೇರಿದಂತೆ ಹಲವು ಮಾರ್ಗಗಳಲ್ಲಿ ಹಾದುಹೋಗಲಿದೆ. ಆದರೆ, ಈ ಕುರಿತ ಸಮಗ್ರ ಯೋಜನಾ ವರದಿ ಇನ್ನೂ ಅಂತಿಮಗೊಂಡಿಲ್ಲ. ಹಾಗಾಗಿ, ರೈಲುಗಳ ನಿಯೋಜನೆಯೂ ಇನ್ನೂ ನಿರ್ಧಾರ ಆಗಿಲ್ಲ. ರೈಲುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೇ ಖರ್ಚು ಮಾಡುತ್ತಿದ್ದರೆ, ನಿರೀಕ್ಷಿತ ವೇಗದಲ್ಲಿ ಮೆಟ್ರೋ ಮಾರ್ಗ ವಿಸ್ತರಿಸಲು ಸಾಧ್ಯವಾಗುವುದಿಲ್ಲ. ಈ ಮಾದರಿಗಳಿಗೆ ಸರಕಾರ ಅನುದಾನವನ್ನು ಹೆಚ್ಚು ಅವಲಂಬಿಸಬೇಕಾಗುತ್ತದೆ ಅಥವಾ ವಿದೇಶಿ ಬ್ಯಾಂಕ್‌ಗಳಿಂದ ಸಾಲ ಪಡೆಯಬೇಕು. ಹೀಗೆ ಸಾಲ ಪಡೆದರೂ, ಪಾವತಿಸಲು ಹರಸಾಹಸ ಮಾಡಬೇಕಾಗುತ್ತದೆ. ಹೀಗಾಗಿ, ಹೊರೆ ಕಡಿಮೆ ಮಾಡಿಕೊಳ್ಳಲು ಈ ಕ್ರಮ ಕೈಗೊಳ್ಳಲು ಚಿಂತಿಸಲಾಗಿದೆ.

ರೈಲುಗಳು ಮತ್ತು ನಿಲ್ದಾಣಗಳ ನಿರ್ವಹಣೆಗಾಗಿ ತಿಂಗಳಿಗೆ 25 ಕೋಟಿ ರೂ. ಖರ್ಚಾಗುತ್ತಿದೆ. ಅಂದರೆ ದಿನಕ್ಕೆ ಹೆಚ್ಚು-ಕಡಿಮೆ ಒಂದು ಕೋಟಿ ರೂ. ಆಗುತ್ತದೆ. ಇದರಲ್ಲಿ ರೈಲುಗಳ ವೆಚ್ಚ ಅಧಿಕವಾಗಿದೆ. ಒಂದು ಮೆಟ್ರೋ ರೈಲು ಕಾರ್ಯಾಚರಣೆ ಆರಂಭಿಸುವ ಮುನ್ನ ಸಿಗ್ನಲಿಂಗ್, ಬ್ರೇಕ್, ಸ್ವಚ್ಛತೆ, ವಿದ್ಯುತ್ ವ್ಯವಸ್ಥೆ ಸೇರಿದಂತೆ ಪ್ರತಿ ದಿನ ಆ ರೈಲಿನ ಅರ್ಹತಾ ಪ್ರಮಾಣಪತ್ರ ನೀಡಲಾಗುತ್ತದೆ. ಪ್ರಮಾಣಪತ್ರ ನೀಡುವವರಿಂದ ಹಿಡಿದು, ಆ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಎಂಜಿನಿಯರ್‌ಗಳ ವೇತನವೂ ಸೇರಿರುತ್ತದೆ. ಅದೆಲ್ಲವೂ ಲಕ್ಷಗಟ್ಟಲೆ ಆಗುತ್ತದೆ. ನಿತ್ಯ ಎಲ್ಲ ರೈಲುಗಳೂ ಕಾರ್ಯಾಚರಣೆ ಮಾಡುವುದಿಲ್ಲ, ನೇರಳೆಯಲ್ಲಿ ಸುಮಾರು 20 ಹಾಗೂ ಹಸಿರು ಮಾರ್ಗದಲ್ಲಿ 17ರಿಂದ 18 ರೈಲುಗಳು ಬಳಕೆ ಆಗುತ್ತವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News