ಮಾದಕ ವಸ್ತು ಮಾರಾಟ ಜಾಲ ಬೇಧಿಸಿದ ಪೊಲೀಸರು: ನಾಲ್ವರ ಬಂಧನ, 56 ಕೆಜಿ ಗಾಂಜಾ ಜಪ್ತಿ

Update: 2019-09-28 18:10 GMT

ಬೆಂಗಳೂರು, ಸೆ.28: ಹೊರ ರಾಜ್ಯದಿಂದ ಮಾದಕ ವಸ್ತು ಗಾಂಜಾ ಆಮದು ಮಾಡಿಕೊಂಡು, ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಬೊಮ್ಮನಹಳ್ಳಿ ಠಾಣಾ ಪೊಲೀಸರು, 56 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ.

ಬಿಹಾರದ ಬರ್ತಾಪುರ್‌ನ ಸಂಜಯ್ ಕುಮಾರ್ ದಾಸ್, ಹಾಲನಾಯಕ ನಹಳ್ಳಿಯ ಚಂದ್ರಪ್ರಸಾದ್ ಶರ್ಮಾ, ಜನಗನಪಾಳ್ಯದ ಆಶೀಶ್ ರಬೀದಾಸ್ ಹಾಗೂ ದಿಬಾಕರ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಒರಿಸ್ಸಾದ ಕೆಲ ಪ್ರದೇಶದಿಂದ ಗಾಂಜಾವನ್ನು ಸೂಟ್‌ಕೇಸ್ ಹಾಗೂ ಏರ್ ಬ್ಯಾಗ್‌ಗಳಲ್ಲಿ ತುಂಬಿಕೊಂಡು ಬಸ್ ಹಾಗೂ ರೈಲುಗಳಲ್ಲಿ ನಗರಕ್ಕೆ ತೆಗೆದುಕೊಂಡು ಬರುತ್ತಿದ್ದರು. ಬೊಮ್ಮನಹಳ್ಳಿ ಸುತ್ತಮುತ್ತಲ ಪ್ರದೇಶಗಳ ಐಟಿ-ಬಿಟಿ ಉದ್ಯೋಗಿಗಳು, ವೃತ್ತಿಪರ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಗಾಂಜಾ ಮಾರಾಟ ಮಾಡಿ, ಐಷಾರಾಮಿ ಜೀವನ ನಡೆಸುತ್ತಿದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ಬೊಮ್ಮನಹಳ್ಳಿಯ ಗಾಂಜಾ ಗಿರಾಕಿಯೊಬ್ಬರು ನೀಡಿದ ಮಾಹಿತಿಯಾಧರಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News