ಗೋಡ್ಸೆ ವಿಚಾರಧಾರೆಯುಳ್ಳವರನ್ನು ದೇಶದಿಂದ ಹೊರದಬ್ಬಿ: ದೇವನೂರು ಮಹಾದೇವ

Update: 2019-09-29 12:03 GMT

ಬೆಂಗಳೂರು, ಸೆ.29 : ಭಾರತದಲ್ಲಿಂದು ಮಹಾತ್ಮನನ್ನು ಕೊಂದ ಗೋಡ್ಸೆಗೆ ದೇಗುಲ ನಿರ್ಮಿಸಿ, ಅವನ ವಿಚಾರಧಾರೆಯನ್ನು ಹರಡುತ್ತಿರುವವನ್ನು ದೇಶದಿಂದ ಹೊರದಬ್ಬಬೇಕಾಗಿದೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಎಂ.ಚಂದ್ರಶೇಖರ ಪ್ರತಿಷ್ಠಾನ ಹಾಗೂ ಲೋಹಿಯಾ ಜನ್ಮಶತಾಬ್ಧಿ ಪ್ರತಿಷ್ಠಾನ ಸಹಯೋಗದಲ್ಲಿ ಡಿ.ಎಸ್.ನಾಗಭೂಷಣ್ ಅವರ ಗಾಂಧಿ ಕಥನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಯನ್ನು ಬ್ರಿಟಿಷ್ ಅಧಿಕಾರಿಯೊಬ್ಬ ಹೊರದಬ್ಬಿದ. ಹೀಗೆ, ಹೊರದಬ್ಬಿಸಿಕೊಂಡ ವ್ಯಕ್ತಿಯೇ, ಮುಂದೆ ಭಾರತದಿಂದ ಬ್ರಿಟಿಷರನ್ನು ಹೊರದಬ್ಬುತ್ತಾನೆ ಎಂಬುದು ಅವನಿಗೆ ಗೊತ್ತಾಗಿದ್ದರೆ ಹಾಗೆ ಮಾಡುತ್ತಿರಲಿಲ್ಲ ಎನಿಸುತ್ತದೆ ಎಂದರು.

ಬ್ರಿಟಿಷರನ್ನು ದೇಶದಿಂದ ಹೊರದಬ್ಬಿದ ವ್ಯಕ್ತಿಯನ್ನು ಕೊಲೆ ಮಾಡಿದಂತಹ ಸಂತತಿ ಇಂದು ವ್ಯಾಪಕವಾಗಿ ಬೆಳೆಯುತ್ತಿದೆ. ಅವರನ್ನು ದೇಶದಿಂದ ಹೊರಗಿಡಬೇಕಾಗಿದೆ ಎಂದ ದೇವನೂರು ಮಹಾದೇವ, ಗಾಂಧಿಯನ್ನು ಕೊಲೆ ಮಾಡಿದ ಸಂತತಿಯವರು ವಿದೇಶಗಳಿಗೆ ಭೇಟಿ ನೀಡಿದರೆ ನಾನು ಬುದ್ಧನ ನಾಡಿನಿಂದಲೋ, ಗಾಂಧಿ, ಅಂಬೇಡ್ಕರ್ ನಾಡಿನಿಂದಲೋ ಬಂದಿದ್ದೇನೆ ಎನ್ನಬೇಕು. ಅದು ಬಿಟ್ಟರೆ ಬೇರೆ ದಾರಿಯೇ ಇಲ್ಲ ಎಂದರು.

ವರ್ತಮಾನದಲ್ಲಿ ಗೋಡ್ಸೆ ವಿಚಾರಧಾರೆಯ ಸಂತಾನಗಳು ಕೂಡ ವಿದೇಶಕ್ಕೆ ಹೋದರೆ ಇದೇ ಮಾತು ಹೇಳಬೇಕು. ಇತ್ತೀಚೆಗೆ ತಾನೆ ಪ್ರಧಾನಿ ನರೇಂದ್ರ ಮೋದಿಯವರು ವಿದೇಶದಲ್ಲಿ ತಾವು ಜಗತ್ತಿಗೆ ಬುದ್ಧನನ್ನು ಕೊಟ್ಟಿದ್ದೇವೆ, ಯುದ್ಧವನ್ನಲ್ಲ ಎಂದು ಹೇಳಿದ್ದಾರೆ ಎಂದು ನುಡಿದರು.

ಹೊರ ಹಾಕುವ ಯತ್ನ: ಜೈ ಶ್ರೀರಾಮ್ ಎಂಬ ಹಿಂಸೆಯು, ಹೇ ರಾಮ್ ಎಂಬ ಅಹಿಂಸೆಯನ್ನು ಭಾರತದಿಂದ ಹೊರಹಾಕಲು ಇಂದು ಟೊಂಕ ಕಟ್ಟಿ ನಿಂತಿದೆ. ಇಂತಹ ಸಂದರ್ಭದಲ್ಲಿ ಅಹಿಂಸೆಯನ್ನು ಕಾಪಾಡಿಕೊಳ್ಳಲು ಎಲ್ಲರೂ ಮುಂದಾಗಬೇಕು. ಗಾಂಧಿಯವರ ಆರ್ಥಿಕ ಚಿಂತನೆಯ ಬಿತ್ತನೆ ಬೀಜಗಳನ್ನು ನಾವು ಫ್ರೈ ಮಾಡಿಟ್ಟುಕೊಂಡಿದ್ದೆವೆಯೇ ವಿನಾ, ಅವುಗಳನ್ನು ಬಿತ್ತಿ ಬೆಳೆದಿಲ್ಲ ಎಂದರು.

ಬೆಟ್ಟದ ಮೇಲೊಂದು ಸಹನೆ, ಪ್ರೀತಿ, ಸಹಬಾಳ್ವೆ, ಸಮಾನತೆಯ ಗುಡಿಯೊಂದು ಇದೆ. ಉತ್ತರದ ಕಡೆಯಿಂದ ಗಾಂಧಿ, ದಕ್ಷಿಣದ ಕಡೆಯಿಂದ ಅಂಬೇಡ್ಕರ್ ಬೆಟ್ಟ ಹತ್ತುತ್ತಾರೆ. ಆರಂಭದಲ್ಲಿ ಅವರುಗಳ ಮೊದಲ ಹೆಜ್ಜೆಗಳ ದೂರ ಅಳತೆ ಮಾಡಿದರೆ ಅವು ಪರಸ್ಪರ ಬಲು ದೂರ. ಆದರೆ, ನಾವು ಏನು ಮಾಡುತ್ತಿದ್ದೇವೆಂದರೆ, ಅವರು ಇಡುವ ಹೆಜ್ಜೆಗಳನ್ನು ಕಟ್ಟಿ ಗಾಜು ಹಾಕಿಸಿ ಗೋಡೆಗೆ ನೇತಾಕುತ್ತಿದ್ದೇವೆ. ಚಲನೆಯನ್ನು ಗಮನಿಸುತ್ತಿಲ್ಲ, ನಡಿಗೆಯ ದಿಕ್ಕನ್ನು ಗಮನಿಸುತ್ತಿಲ್ಲ ಎಂದು ಹೇಳಿದರು.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ನಾಥೂರಾಮ್ ಗೋಡ್ಸೆ ಗಾಂಧಿ ಹತ್ಯೆಗೆ ಹದಿನೈದು ದಿನಗಳ ಮೊದಲು ಆರೆಸ್ಸೆಸ್ ಸಮಾವೇಶವೊಂದರಲ್ಲಿ ಪಾಲ್ಗೊಳ್ಳುವುದಕ್ಕೆ ಬೆಂಗಳೂರಿಗೆ ಆಗಮಿಸಿದ್ದರು. ಅಂದು ಸ್ವಾಗತ ಸಮಿತಿಯ ಅಧ್ಯಕ್ಷರ ಮನೆಯಲ್ಲಿಯೇ ಉಳಿದಿದ್ದರು ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಗಾಂಧಿಯನ್ನು ಗೋಡ್ಸೆ ಹತ್ಯೆ ಮಾಡಿದ ಬಳಿಕ ಅವರಿಗೂ ನಮಗೂ ಸಂಬಂಧವಿಲ್ಲ ಎನ್ನುತ್ತಾರೆ. ಆದರೆ, ಗೋಡ್ಸೆ ಸಂಘ ಪರಿವಾರದೊಂದಿಗೆ ಸಂಬಂಧದ ಕುರಿತು ಹಲವು ಸಾಕ್ಷಾಧಾರಗಳಿವೆ. ಅದನ್ನು ಆರೆಸ್ಸೆಸ್ ಒಪ್ಪಿಕೊಳ್ಳಲು ಮುಂದಾಗುತ್ತಿಲ್ಲ ಎಂದು ಅವರು ಆಕ್ಷೇಪಿಸಿದರು.

ಮಹಾತ್ಮಗಾಂಧಿಯವರು ಸ್ವಾತಂತ್ರದ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಬೇಕು ಎಂದಿದ್ದ ವಿಷಯ ಸತ್ಯ. ಕಾಂಗ್ರೆಸ್ ವಿಸರ್ಜನೆ ಮಾಡಿ, ಲೋಕ ಸೇವಾ ದಳ ಎಂಬ ಸಂಘಟನೆ ರಚಿಸಿ ಆಳುವವರನ್ನು ತಿದ್ಧಬೇಕು ಎಂದುಕೊಂಡಿದ್ದರು. ಆದರೆ, ಪ್ರಧಾನಿ ಮೋದಿ ಗಾಂಧಿಯವರ ವಾಕ್ಯವನ್ನು ಪೂರ್ಣಗೊಳಿಸದೇ ಕಾಂಗ್ರೆಸ್ ವಿಸರ್ಜಿಸಲು ಹೇಳಿದ್ದರು ಎಂಬುದನ್ನು ವೈಭವೀಕರಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಕಾರ್ಯಕ್ರಮದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ನಿತ್ಯಾನಂದ ಬಿ.ಶೆಟ್ಟಿ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ವೂಡೇ ಪಿ.ಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಭಾರತ- ಪಾಕ್ ಪ್ರಧಾನಿಗಳಿಗೆ ಸವಾಲು

ದೇಶದಲ್ಲಿ ಆರ್ಥಿಕತೆ ಕುಸಿಯುತ್ತಿದ್ದು, ಯುವಜನತೆಗೆ ಉದ್ಯೋಗ ದೊರೆಯುತ್ತಿಲ್ಲ. ಇಂತ ಸ್ಥಿತಿಯೂ ಪಾಕಿಸ್ತಾನಲ್ಲಿ ನಿರ್ಮಾಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ತಮ್ಮ ದೇಶದ ನಿವಾಸಿಗಳಿಗೆ ಯಾರು ಮೊದಲು ಗೌರವಯುತವಾಗಿ ಉದ್ಯೋಗ ನೀಡುತ್ತಾರೆ ಅವರು ಸ್ಪರ್ಧೆಯಲ್ಲಿ ಗೆದ್ದಂತೆ. ಇಲ್ಲದಿದ್ದರೆ ಇಬ್ಬರಿಗೂ ಸೋಲು. ಇವರಿಬ್ಬರೂ ಸ್ಪರ್ಧೆಗಿಳಿಯುವ ಮೊದಲು ಅವರವರ ಫ್ಯಾನ್ಸಿ ಡ್ರಸ್ಸ್ ಕಳಚಬೇಕು. ಇವರಿಬ್ಬರು ಸ್ಪರ್ಧೆಗೆ ರೆಡಿಯಾ ಎಂದು ಲೇಖಕ ದೇವನೂರು ಮಹಾದೇವ ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News