ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ನಿರ್ಣಾಯಕ ಹೋರಾಟ: ವಿ.ಎಸ್.ಉಗ್ರಪ್ಪ

Update: 2019-09-29 14:39 GMT

ಬೆಂಗಳೂರು, ಸೆ. 29: ಪರಿಶಿಷ್ಟ ಪಂಗಡದ(ಎಸ್ಟಿ) ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಶೇ.7.5 ಮೀಸಲಾತಿಯನ್ನು ಹೆಚ್ಚಿಸುವಂತೆ ಒತ್ತಾಯಿಸಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಸ್ವಾಮಿ ನೇತೃತ್ವದಲ್ಲಿ ನಿರ್ಣಾಯಕ ಹೋರಾಟ ಮಾಡಲಾಗುವುದು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ. 

ರವಿವಾರ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ವತಿಯಿಂದ ನಗರದ ಆನಂದ್ ರಾವ್ ವೃತ್ತದ ಬಳಿಯ ಕೆಇಬಿ ಇಂಜಿನಿಯರ್ಸ್ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಅಖಿಲ ಭಾರತ ವಾಲ್ಮೀಕಿ ನಾಯಕ ಮಹಾಸಭೆಯ ನೂತನ ರಾಜ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಸಂಬಂಧಿಸಿದಂತೆ ಸಚಿವ ಶ್ರೀರಾಮುಲು, ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಶೇ.7.5ರಷ್ಟು ಹೆಚ್ಚಳ ಮಾಡಲಾಗುವುದುಯೆಂದು ಹೇಳಿದ್ದರು. ಆದರೆ, ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ತಿಪ್ಪೇ ಸಾರುವ ಕೆಲಸ ಮಾಡುತ್ತಿದೆ. ಹೀಗಾಗಿ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಶೀಘ್ರವೇ ನಿರ್ಣಾಯಕ ಹೋರಾಟ ಮಾಡಲಾಗುವುದು ಎಂದು ಅವರು ಹೇಳಿದರು.

ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಕೆಲವು ಜಾತಿಗಳು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಸರಕಾರಕ್ಕೆ ಒತ್ತಾಯಿಸುತ್ತಿವೆ. ಇದಕ್ಕೆ ವಾಲ್ಮೀಕಿ ಸಮುದಾಯದಿಂದ ಯಾವುದೇ ವಿರೋಧವಿಲ್ಲ. ಆದರೆ, ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಳ ಮಾಡಿ, ಇದಕ್ಕೆ ಮುಂದಾದರೆ ನಮ್ಮ ಅಭ್ಯಂತರವಿಲ್ಲವೆಂದು ಅವರು ಹೇಳಿದರು.

ವಾಲ್ಮೀಕಿ ಸಮುದಾಯದ ಜನತೆ ಜೂಜು, ಕುಡಿತ ಹಾಗೂ ಹಿಂಸಾ ಮನೋಭಾವವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಸ್ವಾಭಿಮಾನ, ಉದ್ಯೋಗ, ವಿದ್ಯೆಯನ್ನು ಪಡೆದುಕೊಳ್ಳಬೇಕು. ಇದರ ಜೊತೆಗೆ ತಮ್ಮ ಸಮುದಾಯದ ಮುತ್ತಜ್ಜ ಬರೆದಿರುವ ವಾಲ್ಮೀಕಿ ರಾಮಾಯಣವನ್ನು ಪ್ರತಿಯೊಬ್ಬರು ಓದಿ ಮನನ ಮಾಡಿಕೊಳ್ಳಬೇಕೆಂದು ಅವರು ಆಶಿಸಿದರು.

ಹಿರಿಯ ಸಾಹಿತಿ ಕಮಲಾ ಹಂಪನ ಮಾತನಾಡಿ, ವಾಲ್ಮೀಕಿ ಸಮಾಜದ ಅಭಿವೃದ್ಧಿ ಹೆಣ್ಣು ಮಕ್ಕಳ ಪಾತ್ರ ಮುಖ್ಯ. ಅವರನ್ನು ಸಮಾಜ ಬಾಂಧವರು ಜತೆಯಲ್ಲಿ ಕರೆದೊಯ್ಯಬೇಕು. ಇದು ಆಗಲೇಬೇಕಾದ ಕೆಲಸವಾಗಿದೆ. ಇದರತ್ತ ನಮ್ಮ ಜನಾಂಗದ ಮುಖಂಡರು ಗಮನ ಹರಿಸಬೇಕೆಂದು ತಿಳಿಸಿದರು.

ಹಿರಿಯ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯಕ ಮಾತನಾಡಿ, ಕೆಲ ದಶಕಗಳ ಹಿಂದೆ ವಾಲ್ಮೀಕಿ ಸಮಾಜದವರೆಂದು ಬಹಿರಂಗವಾಗಿ ಹೇಳಿಕೊಳ್ಳಲು ಹಿಂಜರಿಯುವಂತಹ ಪರಿಸ್ಥಿತಿ ಇದೆ. ಆದರೀಗ ಅಂತಜ ಪರಿಸ್ಥಿತಿ ಇಲ್ಲ. ಕಾರಣ ಶಿಕ್ಷಣ ಪಡೆದು ಮುಂದೆ ಬಂದಿದ್ದಾರೆ. ಈಗ ನಾನಾ ಕ್ಷೇತ್ರಗಳಲ್ಲೂ ಮುಂದೆ ಬಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಾಲ್ಮೀಕಿ ಸಮುದಾಯದಿಂದ ರಾಜಕೀಯವಾಗಿ ಅಧಿಕಾರ ಪಡೆದವರು ಹಾಗೂ ಸರಕಾರದ ಭಾಗವಾಗಿರುವ ಅಧಿಕಾರಿಗಳು ಸಮಾಜ ಏಳಿಗೆಗೆ ಶ್ರಮಿಸಬೇಕಾಗಿದೆ. ಇನ್ನೂ ಗ್ರಾಮೀಣ ಭಾಗದಲ್ಲಿ ಸಮುದಾಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಹೀಗಾಗಿ ಇವುಗಳ ನಿವಾರಣೆಗೆ ಅಧಿಕಾರದಲ್ಲಿರುವವರು ಶ್ರಮಿಸಬೇಕಿದೆ ಎಂದು ಅವರು ಹೇಳಿದರು.

ನಾಯಕ ಮಹಾಸಭಾದ ನೂತನ ಅಧ್ಯಕ್ಷರಾಗಿ ಜಿ.ಟಿ.ಚಂದ್ರಶೇಖರಪ್ಪರಿಗೆ ಅಧಿಕಾರವನ್ನು ಹಸ್ತಾಂತರಿಸಲಾಯಿತು. ಈ ವೇಳೆ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಸ್ವಾಮೀಜಿ ಉಪಸ್ಥಿತರಿದ್ದರು.

ನನ್ನ ಸಮುದಾಯ ನನಗೆ ತಾಯಿ ಇದ್ದಂತೆ. ತಾಯಿಯ ಸೇವೆ ಮಾಡುವುದು ಮಗನಾದ ನನ್ನ ಕರ್ತವ್ಯ. ಹೀಗಾಗಿ ನನ್ನ ಅಧಿಕಾರದ ವ್ಯಾಪ್ತಿಯಲ್ಲಿ ನನ್ನಿಂದಾದ ಸಹಾಯವನ್ನು ಮಾಡುತ್ತಾ ಬಂದಿದ್ದೇನೆ. ಆದರೆ, ಇವತ್ತಿನ ರಾಜ್ಯ ರಾಜಕಾರಣ ಕಲುಷಿತಗೊಂಡಿರುವುದಕ್ಕೆ ನಮ್ಮ ಸಮುದಾಯದ ನಾಯಕರು ಕಾರಣರಾಗಿದ್ದಾರೆಂಬುದು ನೋವಿನ ಸಂಗತಿಯಾಗಿದೆ. ಎಲ್ಲ ಜಾತಿ ಸಮುದಾಯಗಳ ಪ್ರೀತಿ, ವಿಶ್ವಾಸ ಗಳಿಸಿಕೊಳ್ಳದೆ ವಾಲ್ಮೀಕಿ ಸಮುದಾಯದ ಮುಖ್ಯವಾಹಿನಿಗೆ ಬರುವುದು ಕಷ್ಟವಾಗುತ್ತದೆ.

-ವಿ.ಎಸ್.ಉಗ್ರಪ್ಪ, ಮಾಜಿ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News