ಸರಕಾರ ತಾರತಮ್ಯ ಸರಿಪಡಿಸಲಿದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ: ರಾಮಲಿಂಗಾರೆಡ್ಡಿ ಎಚ್ಚರಿಕೆ

Update: 2019-09-29 14:45 GMT

ಬೆಂಗಳೂರು, ಸೆ.29: ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿರುವ ಕ್ಷೇತ್ರಗಳಿಗೆ ಹಿಂದಿನ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರ ನಿಗದಿ ಮಾಡಿದ್ದ ಅನುದಾನ ಕಡಿತ ಮಾಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರವಿವಾರ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಮುಂಭಾಗ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿ, ಬಿಜೆಪಿ ನಾಯಕರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಬಿಟಿಎಂ ಬಡಾವಣೆ ಕ್ಷೇತ್ರದ ಶಾಸಕ ರಾಮಲಿಂಗಾ ರೆಡ್ಡಿ, ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳ ಅನುದಾನ ಕಡಿತ ಮಾಡುವ ಮೂಲಕ ಯಡಿಯೂರಪ್ಪ ನೇತೃತ್ವದ ಸರಕಾರ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸುತ್ತಿದೆ. ಹಿಂದಿನ ಯಾವ ಸರಕಾರಗಳು ಸಹ ಪ್ರತಿಪಕ್ಷ ಶಾಸಕರ ಕ್ಷೇತ್ರಗಳ ಅನುದಾನ ಕಡಿತ ಮಾಡುವ ದುಸ್ಸಾಹಾಸಕ್ಕೆ ಕೈ ಹಾಕಿರಲಿಲ್ಲ. ಹಾಲಿ ಬಿಜೆಪಿ ಸರಕಾರದ ಧೋರಣೆ ಖಂಡನೀಯ. ತಾರತಮ್ಯ ಸರಿಪಡಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಸರಕಾರ ನಿಗದಿ ಮಾಡಿದ್ದ ಅನುದಾನದಡಿ ಕಾಮಗಾರಿ ಆರಂಭಿಸಲಾಗಿದ್ದು, ಇದೀಗ ಅನುದಾನ ಕಡಿಮೆ ಮಾಡಿದರೆ ಕಾಮಗಾರಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಜತೆಗೆ ಕಾಮಗಾರಿಗಳು ಅರ್ಧದಲ್ಲೇ ನಿಂತು ಜನ ಸಾಮಾನ್ಯರು ತೀವ್ರ ತೊಂದರೆ ಎದುರಿಸಬೇಕಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಂಭೀರವಾಗಿ ಪರಿಗಣಿಸಬೇಕೆಂದು ಅವರು ಒತ್ತಾಯಿಸಿದರು.

ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ, ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಹಿಂದಿನ ಸಮ್ಮಿಶ್ರ ಸರಕಾರ 316.55 ಕೋಟಿ ರೂ ಅನುದಾನ ನಿಗದಿಪಡಿಸಿತ್ತು. ಆದರೆ, ಈಗಿನ ಬಿಜೆಪಿ ಸರಕಾರ 194.55 ಕೋಟಿ ರೂ ಅನುದಾನ ಕಡಿತಗೊಳಿಸಿ ಆದೇಶ ಹೊರಡಿಸಿದೆ. ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದ ಯಡಿಯೂರಪ್ಪ ಅವರು ಈಗ ಮಾಡುತ್ತಿರುವುದು ಏನು ಎಂದು ಪ್ರಶ್ನಿಸಿದರು.

ಬಿಬಿಎಂಪಿಯಿಂದ ಈ ವರ್ಷ ನಿಗದಿಮಾಡಿದ್ದ ಅನುದಾನದಲ್ಲಿಯೂ ಶೇ.50 ರಷ್ಟು ಕಡಿತ ಮಾಡಲಾಗಿದೆ. ರಾಜ್ಯದಲ್ಲೇ ಅತ್ಯಂತ ಮಾದರಿ ಕ್ರೀಡಾಂಗಣ ಎಂದೇ ಗುರುತಿಸಿಕೊಂಡಿರುವ ಜಯನಗರ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣಕ್ಕೆ ನಿಗದಿಮಾಡಿದ್ದ ಐದು ಕೋಟಿ ರೂ ಅನುದಾನವನ್ನು ವಾಪಸ್ ಪಡೆದಿದೆ. ಏಷ್ಯಾದಲ್ಲೇ ನಂಬರ್ ಒನ್ ವಾಣಿಜ್ಯ ಸಂಕಿರ್ಣವಾಗಿರುವ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಅಭಿವೃದ್ಧಿಗೆ ಮೀಸಲಿರಿಸಿದ್ದ 50 ಕೋಟಿ ರೂ ಅನುದಾನದಲ್ಲಿ 35 ಕೋಟಿ ರೂ ಕಡಿತಮಾಡಲಾಗಿದೆ. ಇದರಿಂದ ವ್ಯಾಪಾರಿಗಳು ತೊಂದರೆ ಎದುರಿಸಬೇಕಾಗುತ್ತದೆ. ಇದು ಖಂಡನೀಯ ಎಂದು ಅವರು ತರಾಟೆಗೆ ತೆಗೆದುಕೊಂಡರು.

ವಿಧಾನಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ಮಾತನಾಡಿ, ರಾಮಲಿಂಗಾ ರೆಡ್ಡಿ ಮತ್ತು ಸೌಮ್ಯ ರೆಡ್ಡಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ಅವರಿಗೆ ಉತ್ತಮ ಹೆಸರು ಬರುತ್ತದೆ ಎನ್ನುವ ಕಾರಣದಿಂದ ಅನುದಾನ ಕಡಿತ ಮಾಡಲಾಗಿದೆ. ಇದು ಬಿಜೆಪಿ ಸರಕಾರದ ದ್ವೇಷ ರಾಜಕಾರಣದ ಪರಮಾವಧಿ ಎಂದು ಟೀಕಿಸಿದರು. ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News