ಕಣ್ಣ ಮುಂದೆ ಕುಣಿಯುವಂತೆ ಮಾಡುವ ಕಲೆ ಭಾಷಾಂತರದಲ್ಲಿ ಇರಬೇಕು: ನ್ಯಾ.ಎ.ಜೆ.ಸದಾಶಿವ

Update: 2019-09-29 14:56 GMT

ಬೆಂಗಳೂರು, ಸೆ.29: ಮೂಲ ಕೃತಿಯನ್ನು ಓದುಗರ ಕಣ್ಣ ಮುಂದೆ ಕುಣಿಯುವಂತೆ ಮಾಡುವ ಕಲೆ ಭಾಷಾಂತರದಲ್ಲಿ ಇರಬೇಕು ಎಂದು ನ್ಯಾ.ಎ.ಜೆ.ಸದಾಶಿವ ಅಭಿಪ್ರಾಯಪಟ್ಟರು.

ರವಿವಾರ ಚಾಮರಾಜಪೇಟೆಯ ಕಸಾಪದಲ್ಲಿ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ನಾಡೋಜ ಡಾ.ದೇಜಗೌ ಒಂದು ನೆನಪು ಹಾಗೂ ವಿಶ್ವಚೇತನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಾತೃ ಭಾಷೆಯನ್ನು ಅಧ್ಯಯನ ಮಾಡದೇ ಬೇರೆ ಭಾಷೆಯನ್ನು ಎಷ್ಟೇ ಭಾಷಾಂತರ ಮಾಡಿದರೂ, ಅದು ಅಚ್ಚುಕಟ್ಟಾದ ಭಾಷಾಂತರ ಎನ್ನಿಸಿಕೊಳ್ಳುವುದಿಲ್ಲ ಎಂದು ಹೇಳಿ ದರು.

ಡಾ.ದೇಜಗೌ ಕನ್ನಡದ ಸೊಗಬನ್ನು ನೈಜವಾಗಿ ಕಟ್ಟಿಕೊಟ್ಟವರು. ಹೀಗಾಗಿ, ಅವರ ಹೆಸರಲ್ಲಿ ಪ್ರಶಸ್ತಿ ಕೊಡುತ್ತಿರುವುದು ನಾಡಿಗೆ ನೀಡುತ್ತಿರುವ ಗೌರವವಾಗಿದೆ. ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಆಗಿದ್ದಾಗ ಎಲ್ಲ ವಿಷಯಗಳನ್ನು ಕನ್ನಡದಲ್ಲೇ ಬೋಧಿಸಬೇಕು ಎಂದು ನಿಯಮ ಮಾಡಿದ್ದರು ಎಂದು ಸ್ಮರಿಸಿದರು.

ಇಂಗ್ಲಿಷ್‌ನ ಎಲ್ಲ ವೈಜ್ಞಾನಿಕ ಗುಣದ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದ ದೇಜಗೌ, ಇಂಗ್ಲಿಷ್‌ನ್ನು ಕನ್ನಡಕ್ಕೆ ಹೇಗೆ ಭಾಷಾಂತರ ಮಾಡಬೇಕೆಂದು  ಅನೇಕ ಭಾಷಾಂತರಗಳಿಂದ ತಿಳಿಸಿಕೊಟ್ಟಿದ್ದಾರೆ. ಇನ್ನು, ನೈಜ ಘಟನೆಗಳನ್ನು ಭಾಷಾಂತರ ಮಾಡಿ ಅನೇಕ ಅನುವಾದಿತ ಕೃತಿಗಳನ್ನು ಹೊರ ತಂದಿರುವುದು ಶ್ಲಾಘನೀಯವಾದುದು ಎಂದು ನೆನೆದರು.

ಬೇರೆ ಭಾಷೆ ಕಲಿಯಬೇಕು. ಅದರಿಂದ ಜ್ಞಾನ ವೃದ್ಧಿಯಾಗುತ್ತದೆ. ಆದರೆ ಕನ್ನಡವನ್ನು ಎಂದಿಗೂ ಮರೆಯಬಾರದು. ಬದುಕಿನಲ್ಲಿ ನಡೆಯುವ ಘಟನಾವಳಿಗಳನ್ನು ಅರಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದಾಗಿ ನಮ್ಮ ತಪ್ಪನ್ನು ನಾವೇ ಅರಿತುಕೊಳ್ಳ ಬಹುದು ಎಂದು ಸಲಹೆ ನೀಡಿದರು.

ಸಾಹಿತಿ ಜರಗನಹಳ್ಳಿ ಶಿವಶಂಕರ್ ಮಾತನಾಡಿ, ಕನ್ನಡ ಸಾಹಿತ್ಯ ಸರ್ವ ಶ್ರೇಷ್ಠವಾದುದು. ಪಂಪ ಮಾನವ ಜಾತಿ ತಾನೊಂದೇ ವಲಂ ಎಂದು, ಕನಕದಾಸರು ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ ಎಂದು, ಬಸವಣ್ಣ ಇವನಾರವ ಇವನಾರವ ಇವನಾರವ ನೆಂದಿನಸದಿರಯ್ಯಿ ಇವ ನಮ್ಮವ ಇವ ನಮ್ಮವ ಇವ ನಮ್ಮವ ನೆಂದಿನಸಯ್ಯಿ ಎಂದು, ಕುವೆಂಪು ಮನುಜ ಮತ ವಿಶ್ವ ಪಥವೆಂದು ಕನ್ನಡ ಪರಂಪರೆ ಮನುಷ್ಯ ಜಾತಿ ಒಂದೇ ಎಂದು ಸಾರಿದೆ ಎಂದು ಹೇಳಿದರು.

ಮಕ್ಕಳು ವಿದ್ಯಾಭ್ಯಾಸ ಪಡೆದು ವಿದೇಶಕ್ಕೆ ಹೋದ ನಂತರ ತಂದೆ ತಾಯಿಗಳನ್ನು ಸರಿಯಾಗಿ ಗಮನಿಸದೆ ಅನಾಥಶ್ರಮಕ್ಕೆ ಸೇರಿಸಿರುವುದು ವಿಪರ್ಯಾಸ. ಮಕ್ಕಳಿಗೆ ಲೋಕಜ್ಞಾನವನ್ನು ನೀಡಬೇಕು. ಕುರಿಗಾಯಿಗಳ ಮಕ್ಕಳು ಸಿಎಂ ಸೇರಿದಂತೆ ಪ್ರಮುಖ ಸ್ಥಾನಗಳನ್ನು ಅಲಂಕರಿಸುತ್ತಾರೆ. ಆದರೆ ಅವರ ಮಕ್ಕಳು ಎಲ್ಲಿಗೆ ತಲುಪಿದ್ದಾರೆ ಅನ್ನುವುದು ಮುಖ್ಯವಾದುದು ಎಂದರು.

ಕೆನರಾ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಡಾ.ಎಸ್.ಟಿ. ರಾಮಚಂದ್ರ, ರಾಷ್ಟ್ರಪತಿ ಭವನ ಅಧಿಕಾರಿ ಪಿ.ಸಿ.ಶ್ರೀನಿವಾಸ್, ಹಿರಿಯ ಲೆಕ್ಕ ಪರಿಶೋಧಕ ಎಚ್. ಬಿ.ಎಂ.ಮುರುಗೇಶ್, ಶಿಕ್ಷಕಿ ಬಿ.ಎಸ್.ಲತಾರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News