ಬಿಎಎಲ್‌ಎಲ್‌ಬಿ ಆನರ್ಸ್‌ನಲ್ಲಿ ಮಾಧವಿ ಸಿಂಗ್‌ಗೆ 11 ಚಿನ್ನದ ಪದಕ
ಬೆಂಗಳೂರು, ಸೆ.29: ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿರ್ವಸಿಟಿಯ 27ನೆ ವಾರ್ಷಿಕ ಘಟಿಕೋತ್ಸವದಲ್ಲಿ ಬಿಎಎಲ್‌ಎಲ್‌ಬಿ ಆನರ್ಸ್ ಪದವೀಧರೆ ಮಾಧವಿ ಸಿಂಗ್‌ಗೆ 11 ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು.
ರವಿವಾರ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಘಟಿಕೋತ್ಸವದ ಸಮಾರಂಭದಲ್ಲಿ 12 ಪದವಿಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಮಾಧವಿ ಸಿಂಗ್ 11 ಚಿನ್ನದ ಪದಕ, ಮೇಘಾ ಹೇಮಂತ್ ಮೇಹ್ತಾ 6 ಚಿನ್ನದ ಪದಕ ಹಾಗೂ ಪವನ್ ಶ್ರೀನಿವಾಸ್ 4 ಚಿನ್ನದ ಪದಕವನ್ನು ಪಡೆದು ನಗು ಬೀರಿದರು. ಇನ್ನು, ಡಾಕ್ಟರೇಟ್ ಪದವಿಯಲ್ಲಿ 10 ಹಾಗೂ ವ್ಯವಹಾರ ಕಾನೂನಿನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿಯ 167 ವಿದ್ಯಾರ್ಥಿಗಳಿಗೆ ನೀಡಲಾಯಿತು.
ಡಾಕ್ಟರೇಟ್ ಪದವಿ, ಸ್ನಾತಕೋತ್ತರ ಸಾರ್ವಜನಿಕ ನೀತಿ, ಸ್ನಾತಕೋತ್ತರ ಕಾನೂನು ಪದವಿ, ಬಿಎಎಲ್‌ಎಲ್‌ಬಿ ಆನರ್ಸ್, ವ್ಯವಹಾರ ಕಾನೂನಿನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ, ವೈದ್ಯಕೀಯ ಕಾನೂನು ಮತ್ತು ನೀತಿಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ, ಪರಿಸರ ಕಾನೂನಿನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ, ಬೌದ್ಧಿಕ ಆಸ್ತಿ ಹಕ್ಕುಗಳ ಕಾನೂನಿನಲ್ಲಿ ಸ್ನಾತಕೋತ್ತರ ಡಿಪ್ಲೊಮಾ, ಮಕ್ಕಳ ಹಕ್ಕುಗಳ ಕಾನೂನಿನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ, ಗ್ರಾಹಕ ಕಾನೂನು ಮತ್ತು ಅದರ ಅನುಷ್ಠಾನದಲ್ಲಿನ ಸ್ನಾತಕೋತ್ತರ ಡಿಪ್ಲೊಮಾ ಪದವಿ ಹಾಗೂ ಸೈಬರ್ ಕಾನೂನು ಮತ್ತು ಸೈಬರ್ ಫೊರೆನಿಕ್ಸ್ ಸ್ನಾತಕೋತ್ತರ ಡಿಪ್ಲೊಮಾದ 545 ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಮೂರನೇ ರ‍್ಯಾಂಕ್ ಗಳಿಸಿ ನಾಲ್ಕು ಪದಕ ಪಡೆದ ರಾಜ್ಯದ ಪವನ್ ಶ್ರೀನಿವಾಸ್ ಮಾತನಾಡಿ, ನ್ಯಾಷನಲ್ ಲಾ ಸ್ಕೂಲ್ ಇಂಡಿಯಾ ಯೂನಿರ್ವಸಿಟಿಯು ರಾಜ್ಯದಲ್ಲೇ ಇದೆ. ಆದರೆ, ನಮ್ಮ ರಾಜ್ಯದ ವಿದ್ಯಾರ್ಥಿಗಳಿಗಿಂತ ಉತ್ತರ ಭಾರತದ ವಿದ್ಯಾರ್ಥಿಗಳೇ ಹೆಚ್ಚು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬಿಎಎಲ್‌ಎಲ್‌ಬಿ ಆನರ್ಸ್‌ನಲ್ಲಿ 80 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದೇವೆ. ಅದರಲ್ಲಿ ರಾಜ್ಯದವರು ಕೇವಲ 4 ವಿದ್ಯಾರ್ಥಿಗಳು ಮಾತ್ರ. ರಾಜ್ಯದವರಿಗೆ ಬೇರೆ ಕ್ಷೇತ್ರದಲ್ಲಿ ಇರುವಷ್ಟು ಆಸಕ್ತಿ ಈ ಕ್ಷೇತ್ರದಲ್ಲಿ ಇಲ್ಲ. ಹೆಚ್ಚಿನ ಆಸಕ್ತಿ ರಾಜ್ಯದ ವಿದ್ಯಾರ್ಥಿಗಳಲ್ಲಿ ಮೂಡಿದರೆ, ರಾಜ್ಯವು ವಿವಿಧ ವಿಚಾರಗಳಲ್ಲಿ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಇನ್ನು, ಉನ್ನತ ವ್ಯಾಸಂಗವನ್ನು ಕೇಂಬ್ರಿಡ್ಜ್ ವಿವಿಯಲ್ಲಿ ಮುಂದುವರೆಸಲಿದ್ದು, ಈಗಿನಿಂದಲೇ ವಿದ್ಯಾಭ್ಯಾಸದ ಪೂರ್ವ ಯೋಜನೆಯನ್ನು ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಅಂತರ್ ರಾಷ್ಟ್ರೀಯ ಮಟ್ಟದ ವ್ಯಾಜ್ಯಗಳನ್ನು ಬಗೆಹರಿಸುವ ಅನೇಕ ವಿಚಾರಗಳನ್ನು ಹಂಚಿಕೊಂಡರು.
ಸಮಾರಂಭದಲ್ಲಿ ನ್ಯಾ.ಶರದ್ ಅರವಿಂದ್ ಬೊಬ್ಡೆ, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳು, ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳು ಹಾಗೂ ಭಾರತೀಯ ವಕೀಲರ ಪರಿಷತ್ತಿನ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.