ಧಾರ್ಮಿಕ ಚಟುವಟಿಕೆಗಳಿಗೆ ಎನ್‌ಒಸಿ ಕಡ್ಡಾಯ: ಹೈಕೋರ್ಟ್ ಆದೇಶ
ಬೆಂಗಳೂರು, ಸೆ.29: ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ರಸ್ತೆಗಳಲ್ಲಿ ಧಾರ್ಮಿಕ ಚಟುವಟಿಕೆಗಳಿಗೆ ಅನುಮತಿ ನೀಡುವ ಮೊದಲು ಸಂಚಾರ ಪೊಲೀಸರಿಂದ ನಿರಾಕ್ಷೇಪಣಾ ಪತ್ರ(ಎನ್‌ಒಸಿ) ಪಡೆಯುವುದು ಕಡ್ಡಾಯ ಎಂದು ಹೈಕೋರ್ಟ್ ಆದೇಶಿಸಿದೆ.
ಈ ಕುರಿತು ಬಸವನಗುಡಿಯ ತ್ಯಾಗರಾಜ ನಗರದ ಪಾಂಡುರಂಗ ಸಲ್ಲಿಸಿರುವ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಕರ್ನಾಟಕ ಪೌರಾಡಳಿತ ಕಾಯ್ದೆ-1976 ಕಲಂ 288(2)ರ ಪ್ರಕಾರ ಧಾರ್ಮಿಕ ಕಾರ್ಯಕ್ರಮಗಳಿಗೆ ರಸ್ತೆಗಳಲ್ಲಿ ತಾತ್ಕಾಲಿಕ ಪೆಂಡಾಲ್ ಹಾಕಲು ಬಿಬಿಎಂಪಿ ಅನುಮತಿ ನೀಡಬಹುದು. ಆದರೆ, ಪರವಾನಗಿ ನೀಡುವ ಮೊದಲು ಆಯುಕ್ತರು ಖುದ್ದು ಸ್ಥಳ ಪರಿಶೀಲನೆ ನಡೆಸಬೇಕು ಮತ್ತು ಸಂಚಾರಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ನ್ಯಾಯಪೀಠ ನಿರ್ದೇಶಿಸಿದೆ.
ರಸ್ತೆ ಬದಿ ವ್ಯಾಪಾರಿಗಳ ಜೀವನೋಪಾಯ ಮತ್ತು ವ್ಯಾಪಾರ ನಿಯಂತ್ರಣ ಕಾಯ್ದೆ-2014ರ ಅನ್ವಯ ರಸ್ತೆ ಬದಿಗಳ ವ್ಯಾಪಾರ ನಿಯಂತ್ರಿಸಬೇಕು. ಈ ವ್ಯಾಪಾರಿಗಳಿಂದ ಸಾರ್ವಜನಿಕ ಓಡಾಟಕ್ಕೆ ಯಾವುದೇ ಅಡ್ಡಿ ಆಗದಂತೆ ಕ್ರಮ ಜರುಗಿಸಬೇಕೆಂದು ಬಿಬಿಎಂಪಿಗೆ ತಾಕೀತು ಮಾಡಿದೆ.