ಬೆಂಗಳೂರು ನಗರದ 47 ಶಾಲೆಗಳಲ್ಲಿ ಶೀಘ್ರ ಸೌರ ಚಾವಣಿ ಅಳವಡಿಕೆ

Update: 2019-09-29 17:33 GMT

ಬೆಂಗಳೂರು, ಸೆ.29: ಬೆಂಗಳೂರು ನಗರದಲ್ಲಿನ ಸರಕಾರಿ ಶಾಲೆಗಳಲ್ಲಿ ಸೌರ ವಿದ್ಯುತ್ ಉತ್ಪಾದನೆ ಮುಂದಾಗಿದ್ದು 47 ಶಾಲೆಗಳಲ್ಲಿ ಸೌರ ಚಾವಣಿ ಅಳವಡಿಸುವ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ.

ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್)ನ ಕಾರ್ಪೋರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿ ಅಡಿಯಲ್ಲಿ ಇಂಧನ ಮತ್ತು ಸಂಪನ್ಮೂಲ ಸಂಸ್ಥೆಯು(ಟೆರಿ) ಶಾಲೆಗಳಲ್ಲಿ ಸೌರ ಚಾವಣಿ ಅಳವಡಿಸುವ ಯೋಜನೆ ಅನುಷ್ಠಾನಕ್ಕೆ ಮುಂದಾಗಿವೆ.

ಈಗಾಗಲೇ ಮೊದಲ ಹಂತದಲ್ಲಿ 13 ಶಾಲೆಗಳಲ್ಲಿ ಸೌರ ಚಾವಣಿ ಅಳವಡಿಕೆ ಕಾರ್ಯ ಮುಕ್ತಾಯವಾಗಿದ್ದು, ಎರಡನೆ ಹಂತದಲ್ಲಿ 12 ಘಟಕಗಳು ನಿರ್ಮಾಣ ಹಂತದಲ್ಲಿದ್ದರೆ, ಮೂರನೆ ಹಂತದಲ್ಲಿ 22 ಸೌರ ಚಾವಣಿಗಳ ಅಳವಡಿಕೆಗೆ ಕೆಲಸ ನಡೆಯುತ್ತಿದೆ. 47 ಸೌರ ಚಾವಣಿಗಳಿಂದ 480 ಕಿಲೋ ವ್ಯಾಟ್ ವಿದ್ಯುತ್ ಸೌರ ವಿದ್ಯುತ್ ಉತ್ಪಾದಿಸುವ ಗುರಿ ಇದ್ದು, ಬೆಸ್ಕಾಂ ಯೋಜನೆಗೆ ಸಹಕಾರ ನೀಡಿದೆ.

ಶಾಲೆಗಳಿಂದ ಈಗ 200 ಕಿಲೊವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಎರಡು ಮತ್ತು ಮೂರನೇ ಹಂತದಲ್ಲಿ ಕ್ರಮವಾಗಿ 100 ಮತ್ತು 180 ಕಿಲೊ ವಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ ಎಂದು ಟೆರಿಯ ದಕ್ಷಿಣ ಪ್ರಾದೇಶಿಕ ಕೇಂದ್ರದ ಹಿರಿಯ ಸಂಚಾಲಕ ಸೆಂಥಿಲ್ ಕುಮಾರ್ ಹೇಳುತ್ತಾರೆ. ಇಂಧನ ಉಳಿತಾಯದ ಬಗ್ಗೆ ಶಾಲಾ ಮ್ಕಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಬೆಸ್ಕಾನಿಂದ ಟೆರಿಗೆ ಟೆಂಡರ್ ಸಿಕ್ಕಿತ್ತು. ಈ ನಿಟ್ಟಿನಲ್ಲಿ ಸರಕಾರಿ ಶಾಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಇದನ್ನು ಗಮನಿಸಿದ ಎಚ್‌ಎಎಲ್, ಜಾಗೃತಿಯ ಜೊತೆಗೆ ಸೌರ ವಿದ್ಯುತ್ ಉತ್ಪಾದಿಸುವ ಕಾರ್ಯ ಕೈಗೆತ್ತಿಕೊಳ್ಳಲು ಕೋರಿತು.

ವಲಯದಲ್ಲಿ ಹೆಚ್ಚು ಫಲಿತಾಂಶ ಹೊಂದಿರುವ ಸರಕಾರಿ ಶಾಲೆಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ಶಾಲೆಯ ವಿದ್ಯುತ್ ಬೇಡಿಕೆ ಎಷ್ಟಿದೆ, ಸೌರ ಚಾವಣಿ ಅಳವಡಿಸಲು ಆ ಶಾಲೆಯ ಮೇಲೆ ಸ್ಥಳವಿದೆಯೇ ಮತ್ತು ಅದು ಸೂಕ್ತವಾಗಿದೆಯೇ (ನೆರಳು ಬೀಳದಂತೆ) ಎಂಬ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಆಯ್ಕೆ ಮಾಡಲಾಗಿದೆ.

ಸ್ಥಳೀಯರಿಗೆ ಉದ್ಯೋಗ ಸೃಷ್ಟಿ: 5 ಕಿಲೊವ್ಯಾಟ್‌ನಿಂದ 10ಕಿಲೊವಾಟ್‌ವರೆಗೆ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯದ ಸೌರ ಫಲಕಗಳನ್ನು ಈ ಚಾವಣಿಯಲ್ಲಿ ಬಳಸಲಾಗಿದೆ. ಸಣ್ಣ ವರ್ತಕರಿಂದ ಈ ಫಲಕಗಳನ್ನು ಖರೀದಿಸಲಾಗಿದೆ. ಇದರ ನಿರ್ವಹಣೆಗೆ ಇಬ್ಬರು ಬೇಕಾಗುತ್ತದೆ. ಸದ್ಯ, ಟೆರಿಯೇ ನಿರ್ವಹಣೆ ಜವಾಬ್ದಾರಿ ನೋಡಿಕೊಳ್ಳುತ್ತದೆ. ಸ್ಥಳೀಯ ಯುವಕರು ಇದರ ನಿರ್ವಹಣೆ ಕೆಲಸ ಕಲಿತರೆ ಅವರಿಗೆ ಉದ್ಯೋಗ ಸಿಗಲಿದೆ.

ಶಾಲೆಗೆ ಆದಾಯ: ಸೌರ ಚಾವಣಿಯು ಆಯಾ ಶಾಲೆಗೆ ಅಲ್ಪ ಆದಾಯದ ಮೂಲವಾಗಿಯೂ ಕೆಲಸ ಮಾಡುತ್ತಿವೆ. ಇಲ್ಲಿ ಉತ್ಪಾದನೆಯಾಗುವ ಸೌರವಿದ್ಯುತ್ ಅನ್ನು ಬೆಸ್ಕಾಂಗೆ ಗ್ರಿಡ್‌ಗೆ ಮಾರುವ ಅವಕಾಶ ಶಾಲೆಗಳಿಗೆ ಇದೆ. ಯುನಿಟ್‌ಗೆ ಮೂರು ರೂ. ಗಳು ಸಿಗುತ್ತದೆ. ಅಂದರೆ, ಒಂದು ಶಾಲೆ ತಿಂಗಳಿಗೆ ಗರಿಷ್ಠ 16 ಸಾವಿರ ಪಡೆಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News