''ಪ್ರೇಮ''ಕ್ಕಾಗಿ ಅಬುಧಾಬಿಯಲ್ಲಿದ್ದೇನೆ: ಅಪಹರಣ ಆರೋಪ ನಿರಾಕರಿಸಿದ ಕೇರಳ ವಿದ್ಯಾರ್ಥಿನಿ

Update: 2019-09-30 14:03 GMT

ಅಬುಧಾಬಿ, ಸೆ. 30: ತನ್ನನ್ನು ಅಪಹರಿಸಿ ಭಯೋತ್ಪಾದಕ ಸಂಘಟನೆಯೊಂದನ್ನು ಸೇರುವಂತೆ ಬಲವಂತಪಡಿಸಲಾಗಿದೆ ಎಂಬ ವರದಿಗಳನ್ನು ದಿಲ್ಲಿಯಲ್ಲಿ ಕಲಿಯುತ್ತಿದ್ದ 19 ವರ್ಷದ ಕ್ರೈಸ್ತ ವಿದ್ಯಾರ್ಥಿನಿಯೊಬ್ಬರು ತಳ್ಳಿಹಾಕಿದ್ದಾರೆ.

‘‘ನಾನು ಪ್ರೀತಿಯನ್ನು ಹುಡುಕಿಕೊಂಡು ಯುಎಇಗೆ ಬಂದಿದ್ದೇನೆ’’ ಎಂದು ಸಿಯಾನಿ ಬೆನ್ನಿ ‘ಗಲ್ಫ್ ನ್ಯೂಸ್’ಗೆ ರವಿವಾರ ಹೇಳಿದರು.

ಸಿಯಾನಿ ಬೆನ್ನಿ ಎರಡು ವಾರಗಳ ಹಿಂದೆ ಅಬುಧಾಬಿಗೆ ಪ್ರಯಾಣಿಸಿ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಹೇಳಲಾಗಿದೆ. ಈಗ ಅವರು ತನ್ನ ಹೆಸರನ್ನು ಆಯಿಶಾ ಎಂದು ಬದಲಾಯಿಸಿಕೊಂಡಿದ್ದಾರೆ.

‘‘ಆ ವರದಿಗಳು ಸರಿಯಲ್ಲ. ನಾನು ನನ್ನ ಆತ್ಮಸಾಕ್ಷಿಯ ಕರೆಯನ್ನು ಆಲಿಸಿ ನನ್ನ ಸ್ವಂತ ಇಚ್ಛೆಯಿಂದ ಅಬುಧಾಬಿಗೆ ಬಂದಿದ್ದೇನೆ. ಯಾರೂ ನನ್ನನ್ನು ಬಲವಂತಪಡಿಸಿಲ್ಲ. ನಾನು ಭಾರತದ ಸ್ವತಂತ್ರ ಪ್ರಜೆಯಾಗಿದ್ದೇನೆ ಹಾಗೂ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲೆ’’ ಎಂದು ಅವರು ಹೇಳಿದರು.

ಭಾರತದಿಂದ ಹೊರಗೆ ಪ್ರಯಾಣಿಸಿದ ಬಳಿಕ, ಕೇರಳದ ಕಲ್ಲಿಕೋಟೆಯವರಾದ ಸಿಯಾನಿ ಬೆನ್ನಿಯ ಹೆತ್ತವರು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ. ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂಬುದಾಗಿಯೂ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

9 ತಿಂಗಳ ಹಿಂದೆ ಪರಿಚಯವಾಗಿತ್ತು

ಜೀಸಸ್ ಆ್ಯಂಡ್ ಮೇರಿ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿರುವ ಸಿಯಾನಿ, ಸೆಪ್ಟಂಬರ್ 18ರವರೆಗೆ ತರಗತಿಗಳಿಗೆ ಹಾಜರಾಗಿದ್ದರು.

ಅದೇ ದಿನ, ಅಬುಧಾಬಿಯಲ್ಲಿ ನೆಲೆಸಿರುವ ಭಾರತೀಯನೊಬ್ಬನನ್ನು ವಿವಾಹವಾಗುವುದಕ್ಕಾಗಿ ಅಲ್ಲಿಗೆ ಹೋಗುವ ವಿಮಾನ ಹತ್ತಿದ್ದರು. ಈ ವ್ಯಕ್ತಿಯ ಪರಿಚಯ ಸಿಯಾನಿಗೆ ಸುಮಾರು 9 ತಿಂಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಆಗಿತ್ತು ಎನ್ನಲಾಗಿದೆ.

“ನಾನು ನನ್ನ ಸ್ವಂತ ಇಚ್ಛೆಯಂತೆ ಸೆಪ್ಟಂಬರ್ 24ರಂದು ಅಬುಧಾಬಿ ನ್ಯಾಯಾಲಯದಲ್ಲಿ ಇಸ್ಲಾಮ್ ಧರ್ಮ ಸ್ವೀಕರಿಸಿದ್ದೇನೆ” ಎಂದು ಸಿಯಾನಿ ಶನಿವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ನಾನು ಈ ಧರ್ಮವನ್ನು ಸ್ವೀಕರಿಸಿದ್ದೇನೆ ಹಾಗೂ ಇದೇ ಧರ್ಮದೊಂದಿಗೆ ನಾನು ಬದುಕುತ್ತೇನೆ ಎಂದು ಘೋಷಿಸುತ್ತೇನೆ’’ ಎಂದು ಸಿಯಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅದೇ ವೇಳೆ, ನನ್ನನ್ನು ಅಪಹರಿಸಲಾಗಿದೆ ಅಥವಾ ನಾನು ಭಯೋತ್ಪಾದಕ ಗುಂಪೊಂದರ ಸದಸ್ಯೆಯಾಗಿದ್ದೇನೆ ಎಂಬ ‘ಸುಳ್ಳು ಸುದ್ದಿ’ಯನ್ನು ಹರಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅವರು ಭಾರತ ಸರಕಾರವನ್ನು ಒತ್ತಾಯಿಸಿದ್ದಾರೆ.

ನಾನು ಅಬುಧಾಬಿಯಲ್ಲೇ ಇರುತ್ತೇನೆ

“ನನ್ನ ಸಹೋದರ ಮತ್ತು ಹೆತ್ತವರು ನನ್ನನ್ನು ನೋಡುವುದಕ್ಕಾಗಿ ಅಬುಧಾಬಿಗೆ ಹೊರಟಿದ್ದಾರೆ” ಎಂದು ಸಿಯಾನಿ ಹೇಳಿದರು.

‘‘ನಾನು ವಾಪಸ್ ಬರುವುದಿಲ್ಲ ಎಂದು ಅವರಿಗೆ ಹೇಳಿದ್ದೇನೆ. ನಾನು ಮದುವೆಯಾಗಿ ಯುಎಇಯಲ್ಲೇ ಇರಲು ಬಯಸಿದ್ದೇನೆ’’ ಎಂದು ಅವರು ‘ಗಲ್ಫ್ ನ್ಯೂಸ್’ಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News