ಖಶೋಗಿ ಹತ್ಯೆಗೆ ವರ್ಷ: ಮತ್ತೆ ಜಾಗತಿಕ ವೇದಿಕೆಗೆ ಮರಳಲು ಸೌದಿ ಯತ್ನ

Update: 2019-09-30 14:11 GMT

ರಿಯಾದ್ (ಸೌದಿ ಅರೇಬಿಯ), ಸೆ. 30: ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿಯ ಬರ್ಬರ ಹತ್ಯೆಯಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಿದೆ. ಕಳೆದ ವರ್ಷದ ಅಕ್ಟೋಬರ್ 2ರಂದು ತನ್ನ ಟರ್ಕಿಯ ಗೆಳತಿಯನ್ನು ಮದುವೆಯಾಗುವುದಕ್ಕಾಗಿ ಅಗತ್ಯವಿದ್ದ ಪ್ರಮಾಣಪತ್ರಗಳನ್ನು ತರಲು ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಗೆ ಪ್ರವೇಶಿಸಿದ್ದ ಖಶೋಗಿಯನ್ನು ಮತ್ತೆ ಯಾರೂ ನೋಡಿಲ್ಲ.

ಆರಂಭದಲ್ಲಿ ಭಿನ್ನಮತೀಯ ಪತ್ರಕರ್ತ ಹತ್ಯೆಯಾಗಿದ್ದಾರೆ ಎನ್ನುವುದನ್ನೇ ನಿರಾಕರಿಸುತ್ತಾ ಬಂದಿದ್ದ ಸೌದಿ ಅರೇಬಿಯ, ಬಳಿಕ ಹತ್ಯೆಯನ್ನು ಒಪ್ಪಿಕೊಂಡಿತ್ತು. ಸೌದಿ ಅರೇಬಿಯದ ಅಧಿಕಾರಿಗಳೊಂದಿಗೆ ಜಗಳ ಮಾಡಿ ಕೈಕೈಮಿಲಾಯಿಸಿದ ಬಳಿಕ ಅವರು ಕುಸಿದು ಬಿದ್ದು ಮೃತಪಟ್ಟರು ಎಂದು ಅದು ಹೇಳಿತು. ಆದರೆ, ಅದನ್ನು ನಂಬಲು ಯಾರೂ ಸಿದ್ಧರಿಲ್ಲದಾಗ, ಅಂತಿಮವಾಗಿ ತನ್ನ ಅಧಿಕಾರಿಗಳು ತಮ್ಮ ಸ್ವಂತ ನಿರ್ಧಾರ ತೆಗೆದುಕೊಂಡು ಅವರನ್ನು ಕೊಂದಿದ್ದಾರೆ ಹಾಗೂ ಅದರಲ್ಲಿ ಸೌದಿ ಸರಕಾರ (ಅರ್ಥಾತ್ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್) ಶಾಮೀಲಾಗಿಲ್ಲ ಎಂದು ಹೇಳಿಕೊಂಡಿತು.

ಬಳಿಕ ಒಂದೊಂದಾಗಿ ಖಶೋಗಿ ಹತ್ಯೆಯ ಭಯಾನಕ ವಿವರಗಳು ಹೊರಬಂದವು. ತನ್ನ ಅಧಿಕಾರಿಗಳು ಖಶೋಗಿ ಹತ್ಯೆಯನ್ನು ಮಾಡಿದ್ದಾರೆ ಎನ್ನುವುದನ್ನು ಸೌದಿ ಅರೇಬಿಯ ಒಪ್ಪಿಕೊಂಡಿದೆಯಾದರೂ, ಅವರ ಮೃತದೇಹ ಎಲ್ಲಿದೆ ಎನ್ನುವುದನ್ನು ಈವರೆಗೆ ಬಾಯಿಬಿಟ್ಟಿಲ್ಲ.

ಸೌದಿ ಯುವರಾಜನ ಟೀಕಾಕಾರರಾಗಿದ್ದ ಜಮಾಲ್ ಖಶೋಗಿ ಸೌದಿ ಅರೇಬಿಯದಿಂದ ಪರಾರಿಯಾಗಿ ಅಮೆರಿಕದಲ್ಲಿ ವಾಸಿಸುತ್ತಿದ್ದರು. ಅಲ್ಲಿ ಅವರು ‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಯಲ್ಲಿ ಅಂಕಣಗಳನ್ನು ಬರೆಯುತ್ತಿದ್ದರು. ತನ್ನ ಬರಹಗಳಲ್ಲಿ ಅವರು ಸೌದಿ ಯುವರಾಜನನ್ನು ಟೀಕಿಸುತ್ತಿದ್ದರು. ತನ್ನ ಟೀಕಾಕಾರನ ಧ್ವನಿಯನ್ನು ಶಾಶ್ವತವಾಗಿ ಮುಚ್ಚಿಸಲು ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ತನ್ನ ಬೇಹುಗಾರಿಕಾ ಅಧಿಕಾರಿಗಳಿಗೆ ಆದೇಶ ನೀಡಿದ್ದರು ಎಂಬುದಾಗಿ ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎ ಹೇಳಿದೆ.

ಹತ್ಯೆ ನಡೆದ ವರ್ಷದ ಬಳಿಕ, ಮತ್ತೆ ಜಾಗತಿಕ ರಂಗಕ್ಕೆ ಮರಳಲು ಸೌದಿ ಅರೇಬಿಯ ಪ್ರಯತ್ನಿಸುತ್ತಿದೆ. ಆದರೆ, ಹತ್ಯೆಯು ಸೌದಿ ಅರೇಬಿಯವನ್ನು ದುರ್ಬಲಗೊಳಿಸಿದೆ ಹಾಗೂ ಅದರ ವಾಸ್ತವಿಕ ಆಡಳಿತಗಾರ ಮುಹಮ್ಮದ್ ಬಿನ್ ಸಲ್ಮಾನ್‌ರ ಮಹತ್ವಾಕಾಂಕ್ಷೆಯ ಸುಧಾರಣೆಗಳಿಗೆ ಮಂಕು ಹಿಡಿಸಿದೆ.

ಸಂಪ್ರದಾಯವಾದಿ ದೇಶದ ಆಧುನೀಕರಣದ ಶಿಲ್ಪಿ ಎಂಬಂತೆ ತನ್ನನ್ನು ಬಿಂಬಿಸಿಕೊಂಡಿದ್ದ ಯುವರಾಜನನ್ನು ಜಾಗತಿಕ ಮುಖಂಡರು ಹಾಗೂ ಉದ್ಯಮ ನಾಯಕರು ಶ್ಲಾಘಿಸಿದ್ದರು. ಆದರೆ, ಖಶೋಗಿ ಹತ್ಯೆ ಬಳಿಕ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿವೆ.

ಸೌದಿ ಅರೇಬಿಯಕ್ಕೆ ಶಸ್ತ್ರಗಳನ್ನು ಮಾರಾಟ ಮಾಡುವ ಪ್ರಸ್ತಾವದಿಂದ ಪಾಶ್ಚಿಮಾತ್ಯ ದೇಶಗಳು ಹಿಂದಕ್ಕೆ ಸರಿಯುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೌದಿಗೆ ಶಸ್ತ್ರಾಸ್ತ್ರಗಳ ಮಾರಾಟಕ್ಕೆ ಮುಂದೆ ಬಂದಿದ್ದಾರಾದರೂ, ದೇಶದ ಸಂಸತ್ತು ಅದಕ್ಕೆ ತಡೆಯೊಡ್ಡಲು ಸಿದ್ಧವಾಗಿ ನಿಂತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News